ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಸ್ತಿ ಸರ್ಕಾರವನ್ನು ಕಾಡುತ್ತಿದ್ದಾರೆ ನಾಡಪ್ರಭು!

Last Updated 8 ಜೂನ್ 2018, 5:17 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಮೂರು ಪಾಲಿಕೆಗಳನ್ನಾಗಿ ವಿಭಜಿಸಲು ಹಿಂದಿನ ಕಾಂಗ್ರೆಸ್‌ ಸರ್ಕಾರ ಕೈಗೊಂಡ ನಿರ್ಧಾರದ ಕುರಿತಂತೆ ಇಂದಿನ ಜೆಡಿಎಸ್‌–ಕಾಂಗ್ರೆಸ್‌ ದೋಸ್ತಿ ಸರ್ಕಾರ ಅದ್ಯಾವ ನಿಲುವನ್ನು ತಳೆಯಬಹುದು?

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಸಂಪುಟ ವಿಸ್ತರಣೆ ಮಾಡಿರುವ ಬೆನ್ನಿಗೇ ಕೇಳಿ ಬರುತ್ತಿರುವ ಪ್ರಶ್ನೆ ಇದು.

ರಾಜ್ಯ ಆಡಳಿತದ ಚುಕ್ಕಾಣಿ ಸದ್ಯ ಈ ಎರಡೂ ಪಕ್ಷಗಳ ಕೈಯಲ್ಲಿ ಇರುವುದಲ್ಲದೆ ಬಿಬಿಎಂಪಿಯಲ್ಲೂ ಮೂರು ವರ್ಷಗಳಿಂದ ಅವುಗಳದೇ ದೋಸ್ತಿ ರಾಜ್ಯಭಾರವಿದೆ. ಬಿಬಿಎಂಪಿ ವಿಭಜನೆಯ ವಿಷಯವಾಗಿ ಈ ಎರಡೂ ಪಕ್ಷಗಳು ಇದುವರೆಗೆ ತದ್ವಿರುದ್ಧ ವಾದ ಮಂಡಿಸುತ್ತಾ ಹಾವು–ಮುಂಗುಸಿಯಂತೆ ಕಾದಾಡಿವೆ. ಮೈತ್ರಿಯ ಬಂಧನದಲ್ಲಿ ಯಾರ ಕೈ ಮೇಲಾಗಲಿದೆಎನ್ನುವ ಕುತೂಹಲ ಗರಿಗೆದರಿದೆ.

ಬಿಬಿಎಂಪಿ ಅಸ್ತಿತ್ವವನ್ನು ರದ್ದುಗೊಳಿಸಿ, ಆ ಸ್ಥಾನದಲ್ಲಿ ಎರಡು ಇಲ್ಲವೆ ಮೂರು ಪಾಲಿಕೆ ರಚಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ಮಸೂದೆ’ಗೆ ಹಿಂದಿನ ಸರ್ಕಾರ 2015ರ ಏಪ್ರಿಲ್‌ 20ರಂದು ವಿಶೇಷ ಅಧಿವೇಶನ ಕರೆದು ಒಪ್ಪಿಗೆ ಪಡೆದಿತ್ತು. ಮಸೂದೆಗೆ ಅಂಕಿತ ಹಾಕದ ರಾಜ್ಯಪಾಲರು, ಅದನ್ನು ರಾಷ್ಟ್ರಪತಿ ಯವರ ಅವಗಾಹನೆಗಾಗಿ ಕಳುಹಿಸಿದ್ದರು. ಪರಿಶೀಲನೆಯ ನೆಪದಲ್ಲಿ ಮೂರು ವರ್ಷಗಳಿಂದ ಕೇಂದ್ರ ನಗರಾಭಿವೃದ್ಧಿ ಇಲಾಖೆಯಲ್ಲಿ ಆ ಮಸೂದೆ ಕೊಳೆಯುತ್ತಾ ಬಿದ್ದಿದೆ.

ಬೆಂಗಳೂರು ಮಹಾನಗರ ಪಾಲಿಕೆ, ‘ಬೃಹತ್‌’ ಎಂಬ ಪದವನ್ನೂ ಸೇರ್ಪಡೆ ಮಾಡಿಕೊಂಡು ಬಿಬಿಎಂಪಿ ಎನ್ನುವ ನಾಮಧೇಯ ಪಡೆದದ್ದು 2007ರಲ್ಲಿ. ಆಗ ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಯಾಗಿದ್ದರು. ನೂರು ವಾರ್ಡ್‌ಗಳಿದ್ದ ಬಿಬಿಎಂಪಿಗೆ ಹೊಸದಾಗಿ 98 ವಾರ್ಡ್‌ಗಳನ್ನು ಸೇರ್ಪಡೆ ಮಾಡಿದ್ದು ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ (2009ರಲ್ಲಿ). ಮೂರು ಲೋಕಸಭಾ ಹಾಗೂ 27 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ರಾಜಧಾನಿಯಲ್ಲಿ ತನ್ನ ಪಾಳೆಗಾರಿಕೆಗೆ ಕುಂದು ಉಂಟಾಗದಂತೆ ನೋಡಿಕೊಳ್ಳಲು ಬಿಜೆಪಿ ಈ ದಾಳವನ್ನು ಉರುಳಿಸಿತ್ತು. ಬಿಜೆಪಿಯ ಪ್ರಾಬಲ್ಯಕ್ಕೆ ತಡೆಯೊಡ್ಡಿ ತನ್ನ ಅಸ್ತಿತ್ವವನ್ನು ಕಾಯ್ದುಕೊಳ್ಳಲು ಹವಣಿಸಿದ ಕಾಂಗ್ರೆಸ್‌ನ ಕೈಗೆ ಸಿಕ್ಕಿದ್ದು ವಿಭಜನೆ ಅಸ್ತ್ರ. ಬಿಬಿಎಂಪಿಯನ್ನು ಒಡೆದು ಮೂರು ಹೋಳು ಮಾಡಿದಾಗ ಕನಿಷ್ಠ ಎರಡರಲ್ಲಿ ಅಧಿಕಾರ ಹಿಡಿಯಬಹುದು ಎನ್ನುವ ಲೆಕ್ಕಾಚಾರವೇ ಕೈ ಪಾಳೆಯದಿಂದ ಮಂಡಿಸಲಾದ ‘ತ್ರಿ–ವಿಭಜನೆ ಮಸೂದೆ’ಗೆ ಪ್ರೇರಣೆ. ಒಕ್ಕಲಿಗರ ಪಕ್ಷ ಎಂದೇ ಪ್ರತಿಬಿಂಬಿತ ವಾಗಿರುವ ಜೆಡಿಎಸ್‌ಗೆ ಕೆಂಪೇಗೌಡರು ಕಟ್ಟಿದ ನಗರವನ್ನು ಹಾಗೆ ಉಳಿಸಿಕೊಳ್ಳಬೇಕು ಎನ್ನುವ ಹಟ. ಹೀಗಾಗಿ ಬಿಬಿಎಂಪಿ ವಿಭಜನೆಯು ಕಾಂಗ್ರೆಸ್‌ಗೆ ರಾಜಕೀಯ ಲಾಭದ ಪ್ರಶ್ನೆಯಾದರೆ, ಜೆಡಿಎಸ್‌ಗೆ ಸ್ವಜಾತಿ ಪ್ರತಿಷ್ಠೆಯ ಪ್ರಶ್ನೆ. ಆದ್ದರಿಂದಲೇ ‘ನಾಡಪ್ರಭು ಕೆಂಪೇಗೌಡರ ಆಶಯಕ್ಕೆ ಭಂಗ ಬಾರದಂತೆ ನೋಡಿಕೊಳ್ಳಿ’ ಎಂದು ಸಮಾಜದ ಸ್ವಾಮೀಜಿಗಳು, ಜೆಡಿಎಸ್‌ ನಾಯಕರಿಗೆ ಕಿವಿಮಾತು ಹೇಳಿದ್ದಾರಂತೆ. ‘ಕೆಂಪೇಗೌಡರು ಕಟ್ಟಿದ ನಗರವನ್ನು ಒಡೆಯಲುಬಿಟ್ಟರು’ ಎಂಬ ಅಪವಾದವನ್ನು ಹೊರಲು ಸಿದ್ಧವಿಲ್ಲದ ಕುಮಾರಸ್ವಾಮಿ, ‘ವಿಭಜನೆ ಪ್ರಸ್ತಾಪವನ್ನು ಪಕ್ಕಕ್ಕೆ ಇಡಿ’ ಎಂದು ಕಾಂಗ್ರೆಸ್‌ ಮುಖಂಡರಿಗೆ ಮನವಿ ಮಾಡಿದ್ದಾರೆ. ‘ಬಿಬಿಎಂಪಿಯನ್ನು ವಿಭಜಿಸಿಯೇ ಸಿದ್ಧ’ ಎಂದು ಗುಡುಗಿದ್ದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ವಿಷಯದಲ್ಲಿ ಮೆತ್ತಗಾಗಿದ್ದಾರೆ’ ಎನ್ನುತ್ತವೆ ಜೆಡಿಎಸ್‌ ಮೂಲಗಳು.

‘ಮಸೂದೆ ಹೇಗೂ ಕೇಂದ್ರ ಸರ್ಕಾರದ ಶೈತ್ಯಾಗಾರ ಸೇರಿದೆ. ವಿಭಜನೆ ಕುರಿತು ಕೇಂದ್ರದಿಂದ ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿದರೆ ರಾಷ್ಟ್ರಪತಿ ಅವರಿಂದ ಅಂಕಿತ ಪಡೆಯುವ ಪ್ರಕ್ರಿಯೆಗೆ ಮತ್ತೆ ಚಾಲನೆ ಸಿಕ್ಕಂತಾ ಗುತ್ತದೆ. ‘ಜೇನುಗೂಡಿಗೆ ಕಲ್ಲೆಸೆಯುವ ಕೆಲಸ’ಕ್ಕೆ ಸದ್ಯ ಜೆಡಿಎಸ್‌–ಕಾಂಗ್ರೆಸ್‌ ನಾಯಕರು ಮುಂದಾಗಲ್ಲ’ ಎನ್ನುತ್ತಾರೆ ನಿವೃತ್ತ ಐಎಎಸ್‌ ಅಧಿಕಾರಿಯೊಬ್ಬರು.

ವಿಭಜನೆ ಪ್ರಸ್ತಾವ ಈಗ ನೇಪಥ್ಯದಲ್ಲಿ ಉಳಿದರೂ ಮೈತ್ರಿ ಮುರಿದುಕೊಳ್ಳುವ ಪ್ರಸಂಗ ಎದುರಾದರೆ ದೋಸ್ತಿ ಸರ್ಕಾರಕ್ಕೆ ‘ನಾಡಪ್ರಭು’ವಿನ ಕಾಟ ಇದ್ದೇ ಇರಲಿದೆ.
*
ಬಿಬಿಎಂಪಿ ವಿಭಜನೆ ಮಸೂದೆ ಏನು ಹೇಳುತ್ತದೆ?
*ಬೆಂಗಳೂರು ಮಹಾನಗರ ಪಾಲಿಕೆ ಜನಸಂಖ್ಯೆ 80 ಲಕ್ಷ ಮೀರಿದೆ. ಆದ್ದರಿಂದ ರಾಜ್ಯ ಅಥವಾ ಕೇಂದ್ರದ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆ ಮಾಡುವುದು ಕಷ್ಟ. ಬೆಂಗಳೂರು ಮಹಾನಗರದ ಸುಗಮ ಆಡಳಿತ ನಿರ್ವಹಣೆಗಾಗಿ ಬಿಬಿಎಂಪಿಯನ್ನು ಎರಡು ಅಥವಾ ಮೂರು ನಗರ ಪಾಲಿಕೆಗಳನ್ನಾಗಿ ಪುನರ್‌ರಚನೆ ಮಾಡಬೇಕು.

*ದೊಡ್ಡನಗರ ಪ್ರದೇಶವಾದ ಬೆಂಗಳೂರು ಮಹಾನಗರ ಪಾಲಿಕೆಯನ್ನು ಪುನರ್‌ರಚನೆ ಮಾಡಬೇಕಿದ್ದರಿಂದ ಅದರ ಅಸ್ತಿತ್ವವನ್ನು ರದ್ದುಗೊಳಿಸಬೇಕು.

*ಕಾಯ್ದೆಯಲ್ಲಿ ಈಗಿರುವ ‘ಬಿಬಿಎಂಪಿ’ ಎನ್ನುವ ಪದವನ್ನು ಕೈಬಿಟ್ಟು ನಗರ ಪಾಲಿಕೆ ಎನ್ನುವ ಪದವನ್ನೇ ಬಳಸಬೇಕು.

*ಬಿಬಿಎಂಪಿ ಅಸ್ತಿತ್ವವನ್ನು ರದ್ದುಗೊಳಿಸಿದ ದಿನದಿಂದ ಅದು ಪುನರ್‌ರಚನೆ ಆಗುವವರೆಗೆ ಅದಕ್ಕೆ ಸಂಬಂಧಿಸಿದ ಎಲ್ಲ ಸ್ವತ್ತು ಹಾಗೂ ಹೊಣೆಗಾರಿಕೆಗಳು ಸರ್ಕಾರದ ಅಧೀನ ದಲ್ಲಿರಬೇಕು.

*ರಾಜ್ಯ ಸರ್ಕಾರ ನಿರ್ಧರಿಸಿದಷ್ಟು ಸಂಖ್ಯೆಯಲ್ಲಿ ಹೊಸ ನಗರ ಪಾಲಿಕೆಗಳನ್ನು ರಚಿಸಬೇಕು. ಬಿಬಿಎಂಪಿಗೆ ಸೇರಿದ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಆಯಾ ಪಾಲಿಕೆಗಳಿಗೆ ಯಾವ ಪ್ರಮಾಣದಲ್ಲಿ ಹಂಚಬೇಕು ಎನ್ನುವುದನ್ನು ಸರ್ಕಾರವೇ ನಿರ್ಧರಿಸಬೇಕು.

*ಹೊಸ ಪಾಲಿಕೆಗಳು ರಚನೆಯಾಗುವ ತನಕ ಹಾಲಿ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತವನ್ನು ಸರ್ಕಾರ ನೇಮಕ ಮಾಡಿರುವ ಆಡಳಿತಾಧಿಕಾರಿಯೇ ನಡೆಸಬೇಕು.
*
ಕಾಂಗ್ರೆಸ್‌ ವಾದವೇನು?
ಮಿತಿಮೀರಿದ ಭ್ರಷ್ಟಾಚಾರ, ನಗರವೇ ಕೊಳೆತು ನಾರುವಂತಾದ ಕಸ ವಿಲೇವಾರಿ ಸಮಸ್ಯೆ, ವಾರ್ಡ್‌ಗಳ ಅಸಮರ್ಪಕ ವಿಂಗಡಣೆ, ಸಾಲದ ಹೊರೆ, ಗುಣಮಟ್ಟವಿಲ್ಲದ ಕಾಮಗಾರಿಯಂತಹ ಸಮಸ್ಯೆಗಳಿಗೆ ಬಿಬಿಎಂಪಿ ವಿಭಜನೆಯಲ್ಲೇ ಪರಿಹಾರವಿದೆ

(2015ರ ವಿಶೇಷ ಅಧಿವೇಶನದಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದನೆ)

ಬಿಬಿಎಂಪಿ ವಿಭಜನೆ ಮಾಡಿಯೇ ಶತಃಸಿದ್ಧ. ಈ ವಿಭಜನೆ ಆಡಳಿತದ ದೃಷ್ಟಿಯಿಂದ ಮಾತ್ರ. ನಾವೇನು ಸರಹದ್ದಿಗೆ ಬೇಲಿ ಹಾಕುವುದಿಲ್ಲ. ನಗರದ ಗತವೈಭವವನ್ನು ಮತ್ತೆ ಪ್ರತಿಷ್ಠಾಪಿಸಿ ಕೆಂಪೇಗೌಡರಿಗೆ ನೈಜ ಗೌರವ ಸಲ್ಲಿಸುತ್ತೇವೆ

(ಅಧಿವೇಶನದಲ್ಲಿ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರ ಹೇಳಿಕೆ)
*
ಜೆಡಿಎಸ್‌ ವಾದವೇನು?
ಎಲೆಕ್ಟ್ರಾನಿಕ್‌ ಸಿಟಿಗೆ ಎಚ್‌.ಡಿ. ದೇವೇಗೌಡ ಅವರ ಅಧಿಕಾರದ ಅವಧಿಯಲ್ಲಿ ಬುನಾದಿ ಬಿದ್ದ ಬಳಿಕ ಬೆಂಗಳೂರು ದೊಡ್ಡ ಬ್ರ್ಯಾಂಡ್‌ ಆಗಿ ಬೆಳೆದಿದೆ. ವಿಭಜನೆ ನೆಪದಲ್ಲಿ ಬ್ರ್ಯಾಂಡ್‌ ಬೆಂಗಳೂರಿಗೆ ಧಕ್ಕೆ ತರುವ ಹುನ್ನಾರ ನಡೆದಿದೆ. ಬಿಬಿಎಂಪಿ ವಿಭಜನೆ ಮಾಡಿದರೆ ಬೆಂಗಳೂರಿನ ಎಲ್ಲಾ ಸಮಸ್ಯೆಗಳು ನಿವಾರಣೆ ಆಗಲಿವೆಯೇ? ಮಸೂದೆಗೆ ಅಂಕಿತ ಹಾಕದಂತೆ ರಾಜ್ಯಪಾಲರ ಮೊರೆ ಹೋಗುತ್ತೇವೆ.

(2015ರ ವಿಶೇಷ ಅಧಿವೇಶನದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರ ಪಾಟೀಸವಾಲು)

ನಾಡಪ್ರಭು ಕೆಂಪೇಗೌಡರ ಹೆಸರನ್ನು ಸಹಿಸಿಕೊಳ್ಳಲು ಆಗದವರು ಬಿಬಿಎಂಪಿ ವಿಭಜನೆ ಮಾಡಲು ಹೊರಟಿದ್ದಾರೆ. ಈ ವಿಭಜನೆಯನ್ನು ನಮ್ಮ ಪಕ್ಷ ಶತಾಯ–ಗತಾಯ ತಡೆಯಲಿದೆ.

(ಸಾರ್ವಜನಿಕ ಸಮಾರಂಭದಲ್ಲಿ ಎಚ್‌.ಡಿ. ದೇವೇಗೌಡರು ಹಾಕಿದ್ದ ಗುಡುಗು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT