ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

FIFA World Cup Football: ಶೂಟೌಟ್‌ನಲ್ಲಿ ಬ್ರೆಜಿಲ್‌ ಔಟ್‌

ಸೆಮಿಫೈನಲ್‌ಗೆ ಕ್ರೊವೇಷ್ಯಾ; 4–2 ಗೋಲುಗಳ ಗೆಲುವು
Last Updated 9 ಡಿಸೆಂಬರ್ 2022, 18:19 IST
ಅಕ್ಷರ ಗಾತ್ರ

ಅಲ್‌ ರ‍ಯಾನ್‌ (ರಾಯಿಟರ್ಸ್‌/ ಎಎಫ್‌ಪಿ): ಐದು ಬಾರಿಯ ಚಾಂಪಿಯನ್‌ ಬ್ರೆಜಿಲ್‌ ತಂಡವನ್ನು ಮಣಿಸಿದ ಕ್ರೊವೇಷ್ಯಾ, ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿತು.

ಅಲ್‌ ರಯಾನ್‌ನ ಎಜುಕೇಷನ್‌ ಸಿಟಿ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಕ್ರೊವೇಷ್ಯಾ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ 4–2 ರಲ್ಲಿ ರೋಚಕ ಗೆಲುವು ಪಡೆಯಿತು.

ನಿಗದಿತ ಹಾಗೂ ಹೆಚ್ಚುವರಿ ಅವಧಿಯ ಆಟದ ಬಳಿಕ ಎರಡೂ ತಂಡಗಳು 1–1 ರಲ್ಲಿ ಸಮಬಲ ಸಾಧಿಸಿದ್ದವು. ಪೆನಾಲ್ಟಿ ಶೂಟೌಟ್‌ನಲ್ಲಿ ಕ್ರೊವೇಷ್ಯಾದ ನಿಕೊಲಾ ವ್ಲಾಸಿಚ್‌, ಲೊವ್ರೊ ಮಜೊವ್, ಲುಕಾ ಮಾಡ್ರಿಚ್‌ ಮತ್ತು ಮಿಸ್ಲಾವ್‌ ಒರ್ಸಿಚ್‌ ಅವರು ಗೋಲು ಗಳಿಸಿದರು.

ಬ್ರೆಜಿಲ್‌ ಪರ ಕ್ಯಾಸೆಮಿರೊ ಮತ್ತು ಪೆಡ್ರೊ ಮಾತ್ರ ಚೆಂಡನ್ನು ಗುರಿ ಸೇರಿಸಿದರು. ರಾಡ್ರಿಗೊ ಅವರ ಮೊದಲ ಕಿಕ್‌ಅನ್ನು ಕ್ರೊವೇಷ್ಯಾ ಗೋಲ್‌ಕೀಪರ್‌ ಡೊಮಿನಿಕ್ ಲಿವಕೊವಿಚ್‌ ಯಶಸ್ವಿಯಾಗಿ ತಡೆದರು. ನಾಲ್ಕನೇ ಕಿಕ್‌ ತೆಗೆದುಕೊಂಡ ಮಾರ್ಕಿನೋಸ್‌ ಅವರು ಒದ್ದ ಚೆಂಡು ಕ್ರಾಸ್‌ಬಾರ್‌ಗೆ ಬಡಿದು ವಾಪಾಸಾಯಿತು.

ಈ ವೇಳೆ ಕ್ರೊವೇಷ್ಯಾ ಆಟಗಾರರು ಗೆಲುವಿನ ಸಂಭ್ರಮ ಆಚರಿಸಿದರೆ, ಆರನೇ ಪ್ರಶಸ್ತಿಯ ಆಸೆ ಕೈಬಿಟ್ಟ ಬ್ರೆಜಿಲ್‌ ತಂಡದವರು ಕಣ್ಣೀರಿಟ್ಟರು. ಸ್ಟಾರ್‌ ಆಟಗಾರ ನೇಮರ್‌ ವಿಶ್ವಕಪ್ ಎತ್ತಿಹಿಡಿಯಬೇಕು ಎಂದು ಕನಸು ಕಂಡಿದ್ದ ಅವರ ಅಭಿಮಾನಿಗಳೂ ನಿರಾಸೆ ಅನುಭವಿಸಿದರು.

ಜಿದ್ದಾಜಿದ್ದಿನ ಹೋರಾಟ: ಮೊದಲ 90 ನಿಮಿಷಗಳ ಆಟದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಯಿತು. ಪ್ರಥಮಾರ್ಧದಲ್ಲಿ ಉಭಯ ತಂಡಗಳಿಂದ ಗೋಲು ಗಳಿಸುವ ಉತ್ತಮ ಪ್ರಯತ್ನ ನಡೆಯಲಿಲ್ಲ.

ಎರಡನೇ ಅವಧಿಯಲ್ಲಿ ಬ್ರೆಜಿಲ್‌ ತನ್ನ ಆಕ್ರಮಣದ ವೇಗವನ್ನು ಹೆಚ್ಚಿಸಿತು. ಇದರಿಂದ ಗೋಲು ಗಳಿಸುವ ಹಲವು ಅವಕಾಶಗಳು ಸೃಷ್ಟಿಯಾದವು. ನೇಮರ್‌ಗೆ ಮೂರು ಉತ್ತಮ ಅವಕಾಶಗಳು ಲಭಿಸಿದರೂ, ಯಶಸ್ಸು ಕಾಣಲಿಲ್ಲ. ಕ್ರೊವೇಷ್ಯಾ ಗೋಲ್‌ಕೀಪರ್‌ ಲಿವಕೊವಿಚ್‌ ಅವರು ತಡೆಯಾಗಿ ನಿಂತರು.

ಹೆಚ್ಚುವರಿ ಅವಧಿಯಲ್ಲಿ ನೇಮರ್‌ (105+1 ನೇ ನಿ.) ಗೋಲು ಗಳಿಸಿ ಬ್ರೆಜಿಲ್‌ಗೆ ಗೆಲುವಿನ ನಿರೀಕ್ಷೆ ಮೂಡಿಸಿದ್ದರು. ಆದರೆ ಬ್ರೂನೊ ಪೆಟ್ಕೊವಿಚ್‌ (117ನೇ ನಿ.) ಅವರು ಕ್ರೊವೇಷ್ಯಾ ತಂಡದ ನೆರವಿಗೆ ನಿಂತರು. ಇದರಿಂದ ವಿಜೇತರನ್ನು ನಿರ್ಣಯಿಸಲು ಪೆನಾಲ್ಟಿ ಶೂಟೌಟ್‌ನ ಮೊರೆ ಹೋಗಲಾಯಿತು.

ಪೆಲೆ ದಾಖಲೆ ಸರಿಗಟ್ಟಿದ ನೇಮರ್‌: ನೇಮರ್‌ ಅವರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 77 ಗೋಲುಗಳನ್ನು ಗಳಿಸುವ ಮೂಲಕ ಬ್ರೆಜಿಲ್‌ ಪರ ಅತ್ಯಧಿಕ ಗೋಲು ಗಳಿಸಿದ ದಿಗ್ಗಜ ಆಟಗಾರ ಪೆಲೆ ಅವರ ದಾಖಲೆ ಸರಿಗಟ್ಟಿದರು. ಪೆಲೆ 1957 ಮತ್ತು 1971ರ ಅವಧಿಯಲ್ಲಿ 77 ಗೋಲುಗಳನ್ನು ಹೊಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT