ಕೋಲ್ಕತ್ತ: ಬೆಂಗಳೂರು ಎಫ್‌ಸಿ ತಂಡವು 133ನೇ ಡುರಾಂಡ್ ಕಪ್ ಫುಟ್‌ಬಾಲ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಕೇರಳ ಬ್ಲಾಸ್ಟರ್ ತಂಡವನ್ನು ಎದುರಿಸಲಿದೆ.
ಎಂಟರ ಘಟ್ಟದ ಪಂದ್ಯಗಳ ವೇಳಾಪಟ್ಟಿಯನ್ನು ಭಾನುವಾರ ಪ್ರಕಟಿಸಲಾಗಿದ್ದು, ಬಿಎಫ್‌ಸಿ ಶುಕ್ರವಾರ (ಆ.23) ಇಲ್ಲಿನ ಸಾಲ್ಟ್‌ಲೇಕ್ ಕ್ರೀಡಾಂಗಣದಲ್ಲಿ ಬ್ಲಾಸ್ಟರ್ಸ್ ತಂಡದೊಂದಿಗೆ ಸೆಣಸಲಿದೆ.
‘ಬಿ’ ಗುಂಪಿನಲ್ಲಿದ್ದ ಬಿಎಫ್‌ಸಿ ತಂಡವು ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು, 9 ಪಾಯಿಂಟ್ ಗಳಿಸಿ ಅಗ್ರಸ್ಥಾನದೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಮೊದಲ ಪಂದ್ಯದಲ್ಲಿ 4–0ಯಿಂದ ಇಂಡಿಯನ್ ನೇವಿ ಎಫ್.ಟಿ. ತಂಡವನ್ನು, ಎರಡನೇ ಪಂದ್ಯದಲ್ಲಿ 3–0ಯಿಂದ ಇಂಟರ್ ಕಾಶಿ ಎಫ್.ಸಿ. ತಂಡವನ್ನು ಮತ್ತು ಮೂರನೇ ಪಂದ್ಯದಲ್ಲಿ 3–2ರಿಂದ ಮೊಹಮ್ಮಡನ್ ಎಸ್.ಸಿ. ತಂಡವನ್ನು ಮಣಿಸಿತ್ತು.
‘ಸಿ’ ಗುಂಪಿನಲ್ಲಿದ್ದ ಬ್ಲಾಸ್ಟರ್ ತಂಡವು ಮೂರು ಪಂದ್ಯಗಳ ಪೈಕಿ ಎರಡನ್ನು ಗೆದ್ದು, ಒಂದರಲ್ಲಿ ಡ್ರಾ ಸಾಧಿಸಿ 7 ಅಂಕದೊಂದಿಗೆ ಅಗ್ರಸ್ಥಾನ ಪಡೆದಿದೆ. ಆರಂಭಿಕ ಪಂದ್ಯದಲ್ಲಿ 8–0ಯಿಂದ ಮುಂಬೈ ಸಿಟಿ ವಿರುದ್ಧ ಸುಲಭ ಜಯ ಸಾಧಿಸಿದ್ದ ಬ್ಲಾಸ್ಟರ್ ತಂಡವು ಪಂಜಾಬ್ ವಿರುದ್ಧ 1–1ರಿಂದ ಡ್ರಾ ಮಾಡಿಕೊಂಡಿತ್ತು. ಕೊನೆಯ ಪಂದ್ಯದಲ್ಲಿ 7–0ಯಿಂದ ಸಿಐಎಸ್‌ಎಫ್ ಪ್ರೊಟೆಕ್ಟರ್ ತಂಡವನ್ನು ಮಣಿಸಿತ್ತು.
ವೈದ್ಯೆಯ ಮೇಲೆ ಅತ್ಯಾಚಾರ– ಕೊಲೆ ಪ್ರಕರಣದ ನಂತರ ಕೋಲ್ಕತ್ತ ನಗರದಲ್ಲಿ ಪ್ರತಿಭಟನೆ ನಡೆಯುತ್ತಿರುವ ಕಾರಣ ಭಾನುವಾರ ಇಲ್ಲಿ ನಡೆಯಬೇಕಿದ್ದ ಹಾಲಿ ಚಾಂಪಿಯನ್ ಮೋಹನ್ ಬಾಗನ್ ಮತ್ತು ಈಸ್ಟ್ ಬೆಂಗಾಲ್ ನಡುವಣ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗಿದೆ. ಉಭಯ ತಂಡಗಳು ತಲಾ ಎರಡು ಪಂದ್ಯಗಳನ್ನು ಈಗಾಗಲೇ ಗೆದ್ದಿದ್ದು, ಎಂಟರ ಘಟ್ಟಕ್ಕೆ ಅರ್ಹತೆ ಪಡೆದವು.
ಜಮ್ಶೆಡ್‌ಪುರದಲ್ಲಿ ಆ.23ರಂದು ಮೂರನೇ ಕ್ವಾರ್ಟರ್‌ಫೈನಲ್‌ನಲ್ಲಿ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುವ ಮೋಹನ್ ಬಾಗನ್ ತಂಡವು ಪಂಜಾಬ್ ಎಫ್‌ಸಿ ತಂಡವನ್ನು ಎದುರಿಸಲಿದೆ. ಪಂಜಾಬ್ ತಂಡವು ‘ಸಿ’ ಗುಂಪಿನಲ್ಲಿ 7 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದೆ.
ಕೋಲ್ಕತ್ತದಲ್ಲಿ ಪ್ರಕ್ಷುಬ್ದ ವಾತಾವರಣ ಇರುವುದರಿಂದ ಇದೇ 21ರಂದು ಸಾಲ್ಟ್‌ಲೇಕ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯವನ್ನು ಶಿಲ್ಲಾಂಗ್‌ನ ಜವಾಹರಲಾಲ್ ನೆಹರೂ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ತಂಡವು ಶಿಲ್ಲಾಂಗ್ ಲಜಾಂಗ್ ಎಫ್‌ಸಿ ತಂಡವನ್ನು ಎದುರಿಸಲಿದೆ. ಬೆಂಗಾಲ್ ತಂಡವು ‘ಎ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿದ್ದರೆ, ಲಜಾಂಗ್ ತಂಡವು ‘ಎಫ್’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ.
ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ಮತ್ತು ಇಂಡಿಯನ್ ಆರ್ಮಿ ಎಫ್‌ಟಿ ತಂಡಗಳು ಮುಖಾಮುಖಿಯಾಗಲಿವೆ. ಈ ತಂಡಗಳು ಕ್ರಮವಾಗಿ ತಲಾ ಮೂರೂ ಪಂದ್ಯಗಳನ್ನು ಗೆದ್ದ ‘ಇ’ ಮತ್ತು ‘ಡಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿವೆ.
ಡುರಾಂಡ್ ಕಪ್: ಕ್ವಾರ್ಟರ್ ಫೈನಲ್ ಹಣಾಹಣಿ
ದಿನಾಂಕ, ಸಮಯ : ತಂಡಗಳು : ಸ್ಥಳ
ಆ.21, ಸಂಜೆ 4 : ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ–ಇಂಡಿಯನ್ ಆರ್ಮಿ ಎಫ್‌ಟಿ : ಸಾಯ್ ಕ್ರೀಡಾಂಗಣ, ಕೊಕ್ರಜಾರ್
ಆ.21, ರಾತ್ರಿ 7 : ಶಿಲ್ಲಾಂಗ್ ಲಜಾಂಗ್ ಎಫ್‌ಸಿ–ಈಸ್ಟ್ ಬೆಂಗಾಲ್ : ಜವಾಹರಲಾಲ್ ನೆಹರೂ ಕ್ರೀಡಾಂಗಣ, ಶಿಲ್ಲಾಂಗ್
ಆ.23, ಸಂಜೆ 4 : ಮೋಹನ್ ಬಾಗನ್–ಪಂಜಾಬ್ ಎಫ್‌ಸಿ : ಜೆಆರ್‌ಡಿ ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಜೆಮ್ಶೆಡ್‌ಪುರ
ಆ.23, ರಾತ್ರಿ 7 : ಬೆಂಗಳೂರು ಎಫ್‌ಸಿ–ಕೇರಳ ಬ್ಲಾಸ್ಟರ್ ಎಫ್‌ಸಿ : ಸಾಲ್ಟ್‌ಲೇಕ್ ಕ್ರೀಡಾಂಗಣ, ಕೋಲ್ಕತ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.