ಗುರುವಾರ , ಡಿಸೆಂಬರ್ 3, 2020
23 °C

ಕ್ರೀಡೆ: ಭಾರತದಲ್ಲೂ ‘ಸೆಟ್ ಪೀಸ್’ ಕೋಚ್!

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

ಫುಟ್‌ಬಾಲ್ ಪಂದ್ಯಗಳಲ್ಲಿ ಫ್ರೀ ಕಿಕ್, ಕಾರ್ನರ್ ಕಿಕ್, ಥ್ರೋ ಇನ್ ಮುಂತಾದವುಗಳಿಗೆ ಬಹಳಷ್ಟು ಪ್ರಾಧಾನ್ಯವಿದೆ. ಇಂಥ ‘ಕಿಕ್‌‘ಗಳೆಲ್ಲವನ್ನೂ ಒಟ್ಟಾಗಿ ಸೆಟ್ ಪೀಸ್ ಎಂದು ಹೇಳುವುದು ರೂಢಿ. ಈಸ್ಟ್ ಬೆಂಗಾಲ್ ಸೆಟ್ ಪೀಸ್‌ಗಾಗಿಯೇ ಕೋಚ್ ಒಬ್ಬರನ್ನು ನೇಮಕ ಮಾಡಿದೆ. ಭಾರತದಲ್ಲಿ ಇದು ಹೊಸ ಪ್ರಯೋಗ.

ಫುಟ್‌ಬಾಲ್ ಪಂದ್ಯಗಳಲ್ಲಿ ಫ್ರೀ ಕಿಕ್, ಕಾರ್ನರ್ ಕಿಕ್, ಥ್ರೋ ಇನ್ ಮುಂತಾದವುಗಳಿಗೆ ಬಹಳಷ್ಟು ಪ್ರಾಧಾನ್ಯವಿದೆ. ಫ್ರೀ ಕಿಕ್ ಮತ್ತು ಕಾರ್ನರ್ ಕಿಕ್‌ಗಳಲ್ಲಿ ಸುಲಭವಾಗಿ ಗೋಲು ಗಳಿಸುವ ಅವಕಾಶ ಹೆಚ್ಚು ಇರುವುದರಿಂದ ಆಟಗಾರರು ಎದುರಾಳಿ ತಂಡದವರಿಂದ ತಪ್ಪುಗಳಾಗುವುದನ್ನೇ ಕಾಯುತ್ತಿರುತ್ತಾರೆ. ಇಂಥ ‘ಕಿಕ್‌‘ಗಳೆಲ್ಲವನ್ನೂ ಒಟ್ಟಾಗಿ ಸೆಟ್ ಪೀಸ್ ಎಂದು ಹೇಳುವುದು ರೂಢಿ. ಹಂತಹಂತವಾಗಿ ಚೆಂಡನ್ನು ಗೋಲುಪೆಟ್ಟಿಗೆಯ ಒಳಗೆ ಸೇರಿಸುವುದರಿಂದ ಈ ತಂತ್ರಕ್ಕೆ ಇಂಥ ಹೆಸರು ಬಂದಿದೆ. ವಿದೇಶಗಳಲ್ಲಿ ಸೆಟ್ ಪೀಸ್‌ಗಳಿಗಾಗಿಯೇ ಕೆಲವು ಆಟಗಾರರನ್ನು ಪಳಗಿಸುವ ಪದ್ಧತಿ ಇದೆ. ಈಗ ಭಾರತದಲ್ಲೂ ಇದಕ್ಕೆ ‘ಬೆಲೆ‘ ಬಂದಿದೆ. ಇದೇ ಮೊದಲ ಬಾರಿ  ಸೆಟ್ ಪೀಸ್‌ಗಾಗಿಯೇ ಕೋಚ್ ಒಬ್ಬರನ್ನು ನೇಮಕ ಮಾಡಲಾಗಿದೆ. ಈ ಪ್ರಯೋಗ ಮಾಡಿರುವ ಮೊದಲ ಕ್ಲಬ್–ಈಸ್ಟ್ ಬೆಂಗಾಲ್.

ಭಾರತದ ಆರಂಭಘಟ್ಟದ ಫುಟ್‌ಬಾಲ್ ಕ್ಲಬ್‌ಗಳಲ್ಲಿ ಒಂದಾಗಿರುವ ಈಸ್ಟ್ ಬೆಂಗಾಲ್‌ನ ಈಗಿನ ಕೋಚ್ ರಾಬಿ ಫಾವ್ಲರ್ ಈ ಪ್ರಯೋಗಕ್ಕೆ ಮುಂದಾಗಿದ್ದಾರೆ. ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಲಿವರ್ ಪೂಲ್ ಕ್ಲಬ್‌ ಅನೇಕ ವರ್ಷಗಳಿಂದ ’ಥ್ರೋ ಇನ್ ಕೋಚ್‌‘ ಇರಿಸಿಕೊಂಡಿದೆ. ಮ್ಯಾಂಚೆಸ್ಟರ್ ಸಿಟಿ ಮತ್ತು ಆರ್ಸೆನಲ್ ತಂಡಗಳೂ ಈ ಪ್ರಯೋಗ ಮಾಡುತ್ತಿವೆ.

ಈಸ್ಟ್ ಬೆಂಗಾಲ್ ಈ ಬಾರಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ (ಐಎಸ್‌ಎಲ್) ಮೊದಲ ಬಾರಿ ಕಣಕ್ಕೆ ಇಳಿಯಲು ಸಜ್ಜಾಗಿದೆ. ಇದಕ್ಕಾಗಿಯೇ ಅಕ್ಟೋಬರ್ ಆರಂಭದಲ್ಲಿ ಫಾವ್ಲರ್ ಅವರನ್ನು ಕೋಚ್ ಆಗಿ ನೇಮಕ ಮಾಡಿಕೊಂಡಿದೆ. ಪ್ರಯೋಗಗಳಿಗೆ ಒತ್ತು ನೀಡುವ ಫಾವ್ಲರ್ ಇಂಗ್ಲೆಂಡ್‌ನ ಟೆರೆನ್ಸ್ ಮೆಕ್‌ಫಿಲಿಪ್ಸ್ ಅವರಿಗೆ ವಿಶೇಷ ಜವಾಬ್ದಾರಿಯನ್ನು ವಹಿಸಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ಪ್ರಮುಖ ಸ್ಟ್ರೈಕರ್ ಆಗಿದ್ದ ರಾಬಿ ಫ್ಲವರ್ ಅವರು ದೇಶಿ ಲೀಗ್‌ಗಳಲ್ಲಿ ಅಮೋಘ ಸಾಧನೆ ಮಾಡಿರುವ ಆಟಗಾರ. ರಾಷ್ಟ್ರೀಯ ತಂಡದಲ್ಲಿ 26 ಪಂದ್ಯಗಳನ್ನು ಆಡಿದ್ದು ಏಳು ಗೋಲು ಗಳಿಸಿದ್ದಾರೆ. ಲಿವರ್ ಪೂಲ್ ಪರ 266 ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದು 128 ಬಾರಿ ಚೆಂಡನ್ನು ಗುರಿ ಸೇರಿಸಿದ್ದಾರೆ. ಲೀಡ್ಸ್ ಯುನೈಟೆಡ್, ಮ್ಯಾಂಚೆಸ್ಟರ್ ಸಿಟಿ, ಕಾರ್ಡಿಫ್ ಸಿಟಿ, ಬ್ಲ್ಯಾಕ್‌ಬಮ್ ರೋವರ್ಸ್‌, ನಾರ್ತ್ ಕ್ವೀನ್ಸ್ ಲ್ಯಾಂಡ್ ಫರಿ, ಪರ್ತ್ ಗ್ಲೋರಿ, ಮಾಂಗ್ತಾಂಗ್ ಯುನೈಟೆಡ್ ತಂಡಗಳ ಪರವಾಗಿಯೂ ಕಣಕ್ಕೆ ಇಳಿದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು