ಬುಧವಾರ, ಸೆಪ್ಟೆಂಬರ್ 18, 2019
26 °C

ಫುಟ್‌ಬಾಲ್‌: ಎಬಿನ್ ದಾಸ್‌ಗೆ ಮಣಿದ ತೆಲಂಗಾಣ

Published:
Updated:
Prajavani

ಬೆಂಗಳೂರು: ತೆಲಂಗಾಣ ತಂಡದ ವಿರುದ್ಧ ಅಮೋಘ ಆಟವಾಡಿದ ಕೇರಳ ತಂಡ ದಕ್ಷಿಣ ವಲಯ ಸಬ್‌ ಜೂನಿಯರ್ (14 ವರ್ಷದೊಳಗಿನವರು) ಫುಟ್‌ಬಾಲ್ ಟೂರ್ನಿಯಲ್ಲಿ ಶುಕ್ರವಾರ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಅಂತರ ವಲಯ ಟೂರ್ನಿಗೆ ಅರ್ಹತೆ ಪಡೆದುಕೊಂಡಿತು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಬಿನ್‌ ದಾಸ್ ಅವರ ಮೋಹಕ ಆಟದ ನೆರವಿನಿಂದ ಕೇರಳ ತಂಡ ತೆಲಂಗಾಣವನ್ನು 5–1 ಗೋಲುಗಳಿಂದ ಮಣಿಸಿ ‘ಬಿ’ ಗುಂಪಿನ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯಿತು. ಪುದುಚೇರಿ ಮತ್ತು ತೆಲಂಗಾಣ ತಂಡಗಳ ವಿರುದ್ಧದ ಪಂದ್ಯಗಳಲ್ಲೂ ಕೇರಳ ಗೆಲುವು ಸಾಧಿಸಿತ್ತು.

ಸ್ಟ್ರೈಕರ್ ಎಬಿನ್ ದಾಸ್ ಪಂದ್ಯದ ಉದ್ದಕ್ಕೂ ಮಿಂಚಿದರು. ತಂಡ ಗಳಿಸಿದ ಎಲ್ಲ ಗೋಲುಗಳೂ ಅವರ ಖಾತೆ ಸೇರಿದವು. ಮೊದಲಾರ್ಧದ 40ನೇ ನಿಮಿಷಗಳ ವರೆಗೆ ತೆಲಂಗಾಣ ತಂಡ ಕೇರಳದ ಸ್ಟ್ರೈಕರ್‌ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿತ್ತು. ಆದರೆ 41ನೇ ನಿಮಿಷದಲ್ಲಿ ಎಬಿನ್ ದಾಸ್ ಪಂದ್ಯದ ಮೊದಲ ಗೋಲು ಗಳಿಸಿ ಸಂಭ್ರಮಿಸಿದರು. 45ನೇ ನಿಮಿಷದಲ್ಲಿ ಅವರಿಂದ ಮತ್ತೊಂದು ಗೋಲು ಮೂಡಿ ಬಂತು.

2–0 ಮುನ್ನಡೆಯೊಂದಿಗೆ ದ್ವಿತೀಯಾರ್ಧದಲ್ಲಿ ಕಣಕ್ಕೆ ಇಳಿದ ಕೇರಳಕ್ಕೆ ಎಬಿನ್ ದಾಸ್ ಮತ್ತೆ ಮೂರು ಗೋಲುಗಳನ್ನು ಗಳಿಸಿಕೊಟ್ಟರು. 59, 63 ಮತ್ತು 83ನೇ ನಿಮಿಷಗಳಲ್ಲಿ ಅವರು ಕಾಲ್ಚಳಕ ತೋರಿದರು. 55ನೇ ನಿಮಿಷದಲ್ಲಿ ಜಸ್ವಂತ್ ಕುಮಾರ್ ಗಳಿಸಿದ ಏಕೈಕ ಗೋಲು ತೆಲಂಗಾಣ ಸೋಲಿನ ಅಂತರ ಕಡಿಮೆ ಮಾಡಲು ನೆರವಾಯಿತಷ್ಟೇ.

ಇಂದಿನ ಪಂದ್ಯ

ಕರ್ನಾಟಕ – ತಮಿಳುನಾಡು (ಎ ಗುಂಪು)

ಆರಂಭ: ಸಂಜೆ 3.45

Post Comments (+)