ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಫಾ ವಿಶ್ವಕಪ್: ಬ್ರೀಲ್ ಏಕೈಕ ಗೋಲ್; ಸ್ವಿಸ್‌ ಜಯಭೇರಿ

ಕ್ಯಾಮರೂನ್ ತಂಡಕ್ಕೆ ನಿರಾಶೆ; 48ನೇ ನಿಮಿಷದಲ್ಲಿ ಕಾಲ್ಚಳಕ ಮೆರೆದ ಸ್ವಿಸ್ ಆಟಗಾರ
Last Updated 24 ನವೆಂಬರ್ 2022, 18:41 IST
ಅಕ್ಷರ ಗಾತ್ರ

ಅಲ್ ವಾಕ್ರಾ, ಕತಾರ್ (ಎಪಿ): ಬ್ರೀಲ್ ಎಂಬೊಲೊ ಹೊಡೆದ ಏಕೈಕ ಗೋಲಿನ ನೆರವಿನಿಂದ ಸ್ವಿಟ್ಜರ್‌ಲೆಂಡ್ ತಂಡವು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಗುರುವಾರ ಅಲ್ ಜನಾಬ್ ಕ್ರೀಡಾಂಗಣದಲ್ಲಿನಡೆದ ಜಿ ಗುಂಪಿನ ಪಂದ್ಯದಲ್ಲಿ ಸ್ವಿಸ್ ತಂಡವು 1–0ಯಿಂದ ಕ್ಯಾಮರೂನ್ ವಿರುದ್ಧ ಗೆದ್ದಿತು. ಕ್ಯಾಮರೂನ್‌ನಲ್ಲಿ ಜನಿಸಿ, ಸ್ವಿಸ್‌ನಲ್ಲಿ ನೆಲೆ ಕಂಡುಕೊಂಡಿರುವ ಬ್ರೀಲ್ 48ನೇ ನಿಮಿಷದಲ್ಲಿ ಗೋಲು ಹೊಡೆದು ಗೆಲುವಿನ ರೂವಾರಿಯಾದರು.

ಗೋಲ್‌ಪೋಸ್ಟ್‌ನ ಮಧ್ಯಭಾಗದಿಂದ ಸುಮಾರು ಎಂಟು ಮೀಟರ್ ದೂರದಲ್ಲಿದ್ದ ಎಂಬೊಲೊ ಕಾಲ್ಚಳಕ ಮೆರೆದರು. ಶೆರ್ಡಾನ್ ಶಕೀರಿ ಮಾಡಿದ ಪಾಸ್‌ ಅನ್ನು ಚುರುಕಾಗಿ ಗ್ರಹಿಸಿದ ಬ್ರಿಲ್ ಚುರುಕಾದ ಕಿಕ್ ಮಾಡಿದರು.

ಆ ಕ್ಷಣ ಭಾವುಕರಾದ ಬ್ರೀಲ್ ಕ್ಯಾಮರೂನ್ ಅಭಿಮಾನಿಗಳತ್ತ ಕ್ಷಮಾಯಾಚಿಸುವ ರೀತಿಯಲ್ಲಿ ಸಂಜ್ಞೆ ಮಾಡಿದರು. ಮರುಕ್ಷಣವೇ ತಮ್ಮ ತಂಡದ ಸಹ ಆಟಗಾರರೊಂದಿಗೆ ಸಂಭ್ರಮಿಸಿದರು.

ಐದು ವರ್ಷದ ಬಾಲಕನಾಗಿದ್ದಾಗಲೇ ಬ್ರೀಲ್ ತಮ್ಮ ಕುಟುಂಬದೊಂದಿಗೆ ಕ್ಯಾಮರೂನ್ ತೊರೆದಿದ್ದರು. ಕೆಲವು ವರ್ಷ ಫ್ರಾನ್ಸ್‌ನಲ್ಲಿದ್ದ ಬ್ರೀಲ್ ನಂತರ ಸ್ವಿಟ್ಜರ್‌ಲೆಂಡ್‌ಗೆ ತೆರಳಿದ್ದರು. 25 ವರ್ಷದ ಬ್ರೀಲ್‌ಗೆ ಇದು ಎರಡನೇ ವಿಶ್ವಕಪ್ ಟೂರ್ನಿ.

ಟೂರ್ನಿ ಆರಂಭವಾದಾಗಿನಿಂದಲೂ ಆಫ್ರಿಕಾ ಮೂಲದ ತಂಡಗಳು ಗೆದ್ದಿಲ್ಲ. ಟ್ಯುನಿಷಿಯಾ, ಮೊರಕ್ಕೊ ತಂಡಗಳ ಪಂದ್ಯಗಳೂ ಡ್ರಾ ಆಗಿವೆ. ಆದರೆ ಜಯಿಸಿದ ಬೇರೆ ಖಂಡಗಳ ಕೆಲವು ತಂಡಗಳಿಗೆ ಆಫ್ರಿಕಾ ಮೂಲದ ಆಟಗಾರರು ಗೋಲು ಕಾಣಿಕೆ ನೀಡಿದ್ದಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT