ಲಂಡನ್: ಐದೂವರೆ ದಶಕದಿಂದ ಪ್ರಶಸ್ತಿಯ ಬರ ಅನುಭವಿಸುತ್ತಿರುವ ಇಂಗ್ಲೆಂಡ್ ತಂಡ ಯೂರೊ ಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಭಾನುವಾರ ಇಟಲಿಯನ್ನು ಎದುರಿಸಲಿದೆ.
ಗರೆತ್ ಸೌತ್‌ಗೇಟ್ ಅವರ ಮಾರ್ಗದರ್ಶನದಲ್ಲಿ ಕಣಕ್ಕೆ ಇಳಿದಿರುವ ಹ್ಯಾರಿ ಕೇನ್ ನಾಯಕತ್ವದ ಇಂಗ್ಲೆಂಡ್ ತಂಡ ಈ ಬಾರಿ ಎಲ್ಲ ವಿಭಾಗದಲ್ಲೂ ಅಮೋಘ ಸಾಮರ್ಥ್ಯ ತೋರಿದೆ. ಅತ್ತ ಇಟಲಿ ಕೂಡ ಗಮನಾರ್ಹ ಆಟದೊಂದಿಗೆ ಫೈನಲ್ ಪ್ರವೇಶಿಸಿದೆ. ಹೀಗಾಗಿ ಪ್ರಶಸ್ತಿ ಸುತ್ತಿನ ಹಣಾಹಣಿ ರೋಚಕವಾಗುವ ನಿರೀಕ್ಷೆ ಇದೆ.
ವೆಂಬ್ಲಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಈ ಬಾರಿ ಆಡಿದ ಎಲ್ಲ ಪಂದ್ಯಗಳಲ್ಲೂ ಭರ್ಜರಿ ಜಯ ಸಾಧಿಸಿದೆ. ತಂಡ 1966ರಲ್ಲಿ ವಿಶ್ವಕಪ್ ಪ್ರಶಸ್ತಿ ಗೆದ್ದಿರುವುದು ಕೂಡ ಇದೇ ಅಂಗಣದಲ್ಲಿ. ಅದೃಷ್ಟದ ತಾಣದಲ್ಲಿ ಪಂದ್ಯ ವೀಕ್ಷಿಸಲು 65 ಸಾವಿರ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ. ಇಟಲಿಯ ಒಂದು ಸಾವಿರ ಮಂದಿಗೂ ಪ್ರವೇಶ ನೀಡಲು ನಿರ್ಧರಿಸಲಾಗಿದೆ.
2018ರ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಳಿಸಲೂ ಸಾಧ್ಯವಾಗದ ಇಟಲಿ ಯೂರೊ ಕಪ್‌ನಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಗೌರವ ಮರಳಿ ಪಡೆದುಕೊಂಡಿದೆ. ಪ್ರಮುಖ ಟೂರ್ನಿಯೊಂದರಲ್ಲಿ ಇಂಗ್ಲೆಂಡ್ ಒಮ್ಮೆಯೂ ಇಟಲಿಯನ್ನು ಸೋಲಿಸಿಲ್ಲ. ಹೀಗಾಗಿ ಈ ಪಂದ್ಯದ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ನಾಲ್ಕು ಬಾರಿ ವಿಶ್ವಕಪ್ ಪ್ರಶಸ್ತಿ ಗೆದ್ದಿರುವ ಇಟಲಿ ಒಮ್ಮೆ ಮಾತ್ರ ಯೂರೊ ಕಪ್‌ನಲ್ಲಿ ಚಾಂಪಿಯನ್ ಆಗಿದೆ. 1968ರಲ್ಲಿ ತಂಡ ಈ ಸಾಧನೆ ಮಾಡಿದಾಗ ನಾಲ್ಕು ತಂಡಗಳು ಮಾತ್ರ ಟೂರ್ನಿಯಲ್ಲಿದ್ದವು.
ಆ ನಂತರ ಎರಡು ಬಾರಿ ಫೈನಲ್ ಪ್ರವೇಶಿಸಿರುವ ತಂಡ 2000ನೇ ಇಸವಿಯಲ್ಲಿ ಫ್ರಾನ್ಸ್‌ಗೂ 2012ರಲ್ಲಿ ಸ್ಪೇನ್‌ಗೂ ಮಣಿದಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.