ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್ ತಂಡದಲ್ಲಿ ಕನಸು ಬಿತ್ತಿದ ಜೋರ್ಡನ್

ಪೆನಾಲ್ಟಿ ಅವಕಾಶದಲ್ಲಿ ಕೊಲಂಬಿಯಾಗೆ ನಿರಾಸೆ: ಟೂರ್ನಿಯಲ್ಲಿ 6ನೇ ಗೋಲು ಗಳಿಸಿದ ಹ್ಯಾರಿ ಕೇನ್‌
Last Updated 4 ಜುಲೈ 2018, 18:42 IST
ಅಕ್ಷರ ಗಾತ್ರ

ಮಾಸ್ಕೊ: ಈ ಸಲದ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ದಾಖಲೆಪುಸ್ತಕಕ್ಕೆ ಮತ್ತೊಂದು ರೋಚಕ ಪುಟ ಸೇರ್ಪಡೆಗೊಂಡಿತು.ಪ್ರೀ ಕ್ವಾರ್ಟರ್‌ಫೈನಲ್ ಹಂತದಲ್ಲಿ ಮೂರನೇ ಪಂದ್ಯವು ‘ಪೆನಾಲ್ಟಿ’ ಅವಕಾಶದಲ್ಲಿ ಫಲಿತಾಂಶ ಕಂಡಿತು.

ಇಲ್ಲಿನ ಸ್ಪಾರ್ಟಕ್‌ ಕ್ರೀಡಾಂಗಣದಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದ 16 ಘಟ್ಟದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಪೆನಾಲ್ಟಿಯಲ್ಲಿ 4–3 (1–1) ಗೋಲುಗಳಿಂದ ಕೊಲಂಬಿಯಾ ತಂಡವನ್ನು ಹಣಿಯಿತು. ಜೂನ್ 30ರಂದು ರಷ್ಯಾ ಮತ್ತು ಸ್ಪೇನ್, ಕ್ರೊವೇಷ್ಯಾ ಮತ್ತು ಡೆನ್ಮಾರ್ಕ್ ತಂಡಗಳ ನಡುವಣ ಪಂದ್ಯಗಳೂ ಇದೇ ರೀತಿ ರೋಚಕವಾಗಿದ್ದವು.

ಉಭಯ ತಂಡಗಳಿಗೆ ನೀಡಿದ್ದ ಪೆನಾಲ್ಟಿ ಅವಕಾಶದಲ್ಲಿ ಕೊಲಂಬಿಯಾದ ಗೋಲನ್ನು ತಡೆದ ಇಂಗ್ಲೆಂಡ್‌ನ ಗೋಲ್‌ಕೀಪರ್‌ ಜೋರ್ಡನ್‌ ಪಿಕ್‌ ಫೋರ್ಡ್‌ ಅವರು ತಮ್ಮ ಅಮೋಘ ಆಟದಿಂದ ಫುಟ್‌ಬಾಲ್‌ ಅಭಿಮಾನಿಗಳ ಮನಗೆದ್ದರು.

ಟೂರ್ನಿಯ ಆರಂಭದಲ್ಲಿ ‘ಸಾಧಾ ರಣ ಸಾಮರ್ಥ್ಯ’ ತಂಡಗಳಂದು ಬಿಂಬಿ ಸಲಾಗಿದ್ದ ಈ ಎರಡೂ ತಂಡ ಗಳೂ ತಮ್ಮ ಗುಂಪಿನಲ್ಲಿ ಅಮೋಘ ಆಟವಾಡಿದ್ದವು.

ಅದರಲ್ಲೂ ಇಂಗ್ಲೆಂಡ್ ತಂಡಕ್ಕೆ ಹ್ಯಾರಿ ಕೇನ್ ಎಂಬ ನವತಾರೆ ಮಿಂಚಿದ್ದರು. ಪ್ರೀ ಕ್ವಾರ್ಟ್‌ರ್‌ನಲ್ಲಿಯೂ ಅವರು ಉತ್ತಮವಾಗಿ ಆಡಿದರು. ‘ಗೋಲ್ಡನ್‌ ಬೂಟ್‌’ ಪಡೆಯಲು ನಡೆಯುತ್ತಿರುವ ರೇಸ್‌ನಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ.

ಆದ್ದರಿಂದಲೇ ಕೊಲಂಬಿಯಾ ತಂಡವು ಹ್ಯಾರಿ ಕೇನ್‌ ಅವರನ್ನು ನಿಯಂತ್ರಿಸಲು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿತ್ತು. ದ್ವಿತೀಯಾರ್ಧದ ಆರಂಭದಲ್ಲಿಯೂ ಕೊಲಂಬಿಯಾ ಹಾಗೂ ಇಂಗ್ಲೆಂಡ್‌ ತಂಡದ ಆಟಗಾರರು ಪೈಪೋಟಿಗಿಳಿದರು.

ಪಂದ್ಯದ 56ನೇ ನಿಮಿಷದಲ್ಲಿ ಕಾರ್ನರ್‌ನಿಂದ ಬಂದ ಚೆಂಡನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾದ ಹ್ಯಾರಿ ಕೇನ್‌ ಅವರನ್ನು ಕೊಲಂಬಿಯಾದ ಕಾರ್ಲೋಸ್‌ ಸಾಂಕೆಜ್‌ ತಳ್ಳಿದರು. ಇದನ್ನು ಗಮನಿಸಿದ ರೆಫರಿ, ಕಾರ್ಲೋಸ್‌ ಅವರಿಗೆ ಹಳದಿ ಕಾರ್ಡ್‌ ತೋರಿಸಿ ಇಂಗ್ಲೆಂಡ್‌ಗೆ ಪೆನಾಲ್ಟಿ ಅವಕಾಶ ನೀಡಿದರು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಹ್ಯಾರಿ ಗೋಲು ದಾಖಲಿಸಿ ತಂಡಕ್ಕೆ 1–0ಯಿಂದ ಮುನ್ನಡೆ ತಂದುಕೊಟ್ಟರು. ಪಂದ್ಯ ಸಾಗಿದಂತೆ ಕೊಲಂಬಿಯಾದ ಮುಂಚೂಣಿ ವಿಭಾಗದ ಆಟಗಾರರನ್ನು ಕಟ್ಟಿಹಾಕುವಲ್ಲಿ ಎದುರಾಳಿ ತಂಡವು ಯಶಸ್ವಿಯಾಯಿತು. ನಿಗದಿತ ಸಮಯದಲ್ಲಿ 1–0ಯಿಂದ ಮುನ್ನಡೆ ಹೊಂದಿದ್ದ ಇಂಗ್ಲೆಂಡ್‌ ತಂಡ ಜಯ ಸಾಧಿಸಲಿದೆ ಎಂದು ನಿರೀಕ್ಷೆಯಲ್ಲಿದ್ದ ಅಭಿಮಾನಿಗಳನ್ನು ಕೊಲಂಬಿಯಾದ ಎ‍ರ್ರಿ ಮೀನಾ ಅವರು ನಿರಾಸೆಗೊಳಿಸಿದರು.

93ನೇ ನಿಮಿಷದಲ್ಲಿ ಬಲ ಕಾರ್ನರ್‌ ನಿಂದ ಬಂದ ಚೆಂಡನ್ನು ಸೊಗಸಾಗಿ ಹೆಡರ್‌ ಮಾಡುವ ಮೂಲಕ ತಂಡ ಸಮಬಲ ಸಾಧಿಸಲು ನೆರವಾದರು. ಉಭಯ ತಂಡಗಳು ಸಮಬಲ ಸಾಧಿಸಿದ್ದರಿಂದ ಮತ್ತೆ ಹೆಚ್ಚುವರಿ ಸಮಯ ನೀಡಲಾಯಿತು. ಆದರೆ, ಅದರಲ್ಲೂ ಎರಡೂ ತಂಡಗಳು ಚೆಂಡನ್ನು ಗುರಿ ಮುಟ್ಟಿಸುವಲ್ಲಿ ವಿಫಲವಾದವು.

ನಂತರ ಪೆನಾಲ್ಟಿ ಅವಕಾಶ ನೀಡ ಲಾಯಿತು. ಮೊದಲೆರೆಡು ಅವಕಾಶದಲ್ಲಿ ಎರಡೂ ತಂಡಗಳ ಆಟಗಾರರು ಗೋಲು ಗಳಿಸಿದರು. ಆದರೆ, ಇಂಗ್ಲೆಂಡ್‌ನ ಮೂರನೇ ಅವಕಾಶವನ್ನು ಕೊಲಂಬಿಯಾದ ಗೋಲ್‌ಕೀಪರ್‌ ಡೆವಿಡ್‌ ಓಸ್ಪಿನಾ ಅವರು ವಿಫಲಗೊಳಿಸಿದರು. ಕೊಲಂಬಿಯಾದ ಮ್ಯಾಟಿಯಸ್‌ ಉರಿಬೆ ಅವರಿಗೆ ಸಿಕ್ಕ ನಾಲ್ಕನೇ ಅವಕಾಶದಲ್ಲಿ ಗೋಲು ದಾಖಲಾಗಲಿಲ್ಲ.

ನಾಲ್ಕನೇ ಅವಕಾಶದಲ್ಲಿ ಇಂಗ್ಲೆಂಡ್‌ನ ಕೀರಾನ್‌ ಟ್ರಿಪ್ಪಿಯರ್‌ ಅವರು ಗೋಲು ಗಳಿಸಿದರು. ಕೊಲಂಬಿ ಯಾದ ಐದನೇ ಅವಕಾಶದಲ್ಲಿ ಕಾರ್ಲೋಸ್‌ ಬಕ್ಕಾ ಅವರು ಗುರಿಯತ್ತ ಒದ್ದ ಚೆಂಡನ್ನು ಜೋರ್ಡನ್‌ ಪಿಕ್‌ ಫೋರ್ಡ್‌ಅಮೋಘವಾಗಿ ತಡೆದರು. ನಂತರ ನಿರ್ಣಾಯಕವಾಗಿದ್ದ ಕೊನೆಯ ಅವಕಾಶದಲ್ಲಿ ಇಂಗ್ಲೆಂಡ್‌ನ ಎರಿಕ್‌ ಡೈರ್‌ ಅವರುಗೋಲು ದಾಖಲಿಸಿದರು. ರೋಚಕ ಕಾದಾಟ ಗೆದ್ದ ನಂತರ ಇಂಗ್ಲೆಂಡ್‌ ಅಭಿಮಾನಿಗಳು ಗೆಲುವಿನ ಸಂಭ್ರಮದಲ್ಲಿ ಮುಳುಗಿದರು.

*

*


ಮಂಗಳವಾರ ರಾತ್ರಿ ನಡೆದ ಪಂದ್ಯದ ಸಂದರ್ಭದಲ್ಲಿ ಇಂಗ್ಲೆಂಡ್ ಅಭಿಮಾನಿಗಳು ಸಂಭ್ರಮಿಸಿದ ಪರಿ -ರಾಯಿಟರ್ಸ್ ಚಿತ್ರ

*


ಟೂರ್ನಿಯಲ್ಲಿ ಆರನೇ ಗೋಲು ಗಳಿಸಿದ ಹ್ಯಾರಿ ಕೇನ್‌ -ರಾಯಿಟರ್ಸ್‌ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT