ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಪರಿಸ್ಥಿತಿ ವರದಿ ಮತ್ತು ನೈಜ ಸ್ಥಿತಿ

Last Updated 18 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ದೇಶದ ಅರಣ್ಯ ಸ್ಥಿತಿಗತಿಯನ್ನು ಅಂಕಿಅಂಶಗಳ ಸಹಿತ ಪ್ರಸ್ತುತಪಡಿಸುವ ‘ಭಾರತ ಅರಣ್ಯ ಪರಿಸ್ಥಿತಿ ವರದಿ-2017’ ಇತ್ತೀಚೆಗೆ ಪ್ರಕಟವಾಗಿದ್ದು, ಇದೀಗ ಅದರ ಕುರಿತು ಚರ್ಚೆಯಾಗುತ್ತಿದೆ. ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ವ್ಯಾಪ್ತಿಯ ಡೆಹರಾಡೂನಿನ ‘ಭಾರತೀಯ ಅರಣ್ಯ ಸರ್ವೇಕ್ಷಣಾ ಸಂಸ್ಥೆ’ಯು ಹೊರತರುವ ದ್ವೈವಾರ್ಷಿಕ ವರದಿಯಿದು. ದೂರಸಂವೇದಿ ಉಪಗ್ರಹ ಚಿತ್ರಗಳು ಮತ್ತು ಅರಣ್ಯ ಇಲಾಖೆ ನೀಡುವ ಸ್ಥಳಮಾಹಿತಿ- ಇವೆರಡನ್ನೂ ಬಳಸಿಕೊಂಡು ರೂಪಿಸುವ ವೈಜ್ಞಾನಿಕ ಸಮೀಕ್ಷೆಯಿದು. ಹೀಗಾಗಿ, ಇದರ ಕಾಣ್ಕೆಗಳ ಆಧಾರದಲ್ಲಿಯೇ ಅರಣ್ಯ ಸಂರಕ್ಷಣೆಯ ನೀತಿ ಮತ್ತು ಕಾರ್ಯಕ್ರಮಗಳು ರೂಪಿತವಾಗಬೇಕೆಂಬುದು ಎಲ್ಲರ ಸಹಜ ಅಪೇಕ್ಷೆ. ದೇಶದ ಸುಮಾರು ಶೇ 21ರಷ್ಟು ಭೂಭಾಗದಲ್ಲಿ ಅರಣ್ಯವಿದ್ದು, ಅಧಿಕ ಅರಣ್ಯವಿರುವ ಜಗತ್ತಿನ ಮೊದಲ ಹತ್ತು ದೇಶಗಳಲ್ಲಿ ಭಾರತವೂ ಒಂದು. ಹೀಗಾಗಿ, ಜಾಗತಿಕ ಸಮುದಾಯವೂ ಈ ವರದಿಯನ್ನು ಬಹು ಆಸಕ್ತಿಯಿಂದ ಗಮನಿಸುತ್ತದೆ. ಅರಣ್ಯ ಸಂರಕ್ಷಣೆ ಕುರಿತಾದ ಅಧ್ಯಯನದಲ್ಲಿ ತೊಡಗಿಸಿಕೊಂಡವರಲ್ಲಿ ಒಬ್ಬನಾಗಿ, ಈ ವರದಿಯ ಬಗ್ಗೆ ಕೆಲವು ಅಭಿಪ್ರಾಯಗಳನ್ನು ಇಲ್ಲಿ ಹೇಳಲೇಬೇಕಾಗಿದೆ.

ದೇಶದ ಅರಣ್ಯಭೂಮಿ ಮತ್ತು ಹಸಿರು ಕವಚದಲ್ಲಾದ ಬದಲಾವಣೆಗಳನ್ನು ಈ ವರದಿಯು ಗುರುತಿಸುತ್ತದೆ. ಜೊತೆಗೆ, ವಾತಾವರಣದ ಇಂಗಾಲವನ್ನು ಹೀರಿಕೊಳ್ಳುವ ಅರಣ್ಯದ ಸಾಮರ್ಥ್ಯ, ಬಿದಿರು ಹಾಗೂ ಕರಾವಳಿಯ ಕಾಂಡ್ಲಾಭೂಮಿಯ ಸ್ಥಿತಿ, ಅರಣ್ಯದ ಜಲಮೂಲಗಳನ್ನು ಕುರಿತ ಮಾಹಿತಿಗಳೂ ಇದರಲ್ಲಿವೆ. ದೇಶಿ ಉಪಗ್ರಹಾಧಾರಿತ ಐ.ಆರ್.ಎಸ್. ರಿಸೋರ್ಸ್ ಸ್ಯಾಟ್-2 ಸಂವೇದಕಗಳು ಒದಗಿಸುವ ಚಿತ್ರಗಳ ಆಧಾರದಲ್ಲಿ ರೂಪಿತವಾಗುವ ಈ ಅಂಕಿಅಂಶಗಳು ಅಮೂಲ್ಯವಾದವುಎಂಬುದನ್ನು ಒಪ್ಪಿಕೊಳ್ಳುತ್ತಲೇ, ಈ ವರದಿಯ ಮಿತಿ ಹಾಗೂ ಅರಣ್ಯದ ವಾಸ್ತವ ಸ್ಥಿತಿಯನ್ನು ದಾಖಲಿಸುವುದು ಈ ಬರಹದ ಉದ್ದೇಶ.

ಈ ವರದಿಯ ಒಂದು ಆಕರವು ಉಪಗ್ರಹ ಕಳುಹಿಸಿದ ಚಿತ್ರಗಳಾದರೂ, ಇನ್ನೊಂದು ಮೂಲ ರಾಜ್ಯಗಳ ಅರಣ್ಯ ಇಲಾಖೆ ನೀಡುವ ಅಂಕಿಅಂಶಗಳೇ ಆಗಿದೆ. ಈ ಸರ್ಕಾರಿ ಮಾಹಿತಿ ಇಂದಿಗೂ ಪರಿಪೂರ್ಣವಲ್ಲ. ಕರ್ನಾಟಕದ ಬಹುತೇಕ ಅರಣ್ಯ ವಿಭಾಗಗಳಲ್ಲಿ ಅರಣ್ಯ ಮಾಹಿತಿಗಳ ದತ್ತಾಂಶ ನಿರ್ವಹಣೆಯನ್ನು ಈಗಲೂ ನಿಖರವಾಗಿ ಮಾಡಲಾಗುತ್ತಿಲ್ಲ. ತಳಮಟ್ಟದಲ್ಲಿ ವೀಕ್ಷಣೆ ನಡೆಸಿ, ಅರಣ್ಯಪ್ರದೇಶದ ಗಡಿ ಗುರುತಿಸುವ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಈ ಮಾಹಿತಿಗಳನ್ನು ಕ್ರೋಡೀಕರಿಸಿ ಗಣಕೀಕರಿಸುವ ಕಾರ್ಯವು ದಶಕದಿಂದ ಜಾರಿಯಲ್ಲಿದ್ದರೂ ಪೂರ್ಣಗೊಂಡಿಲ್ಲ. ‘ಭೂಮಿ’ ತಂತ್ರಾಂಶದ ಮಾದರಿಯಲ್ಲಿ ಅರಣ್ಯ ಪ್ರದೇಶಗಳ ಪಹಣಿಯನ್ನೂ ರೂಪಿಸುವ ಕೆಲಸ ಕನಸಾಗೇ ಉಳಿದಿದೆ! ಇಂಥ ಅಂಕಿಅಂಶಗಳ ಆಧಾರದಲ್ಲಿ ರಚಿಸಿದ ಈ ವರದಿಯು ನಿಖರವಾಗಿದೆ ಎಂದು ಹೇಗೆ ಹೇಳುವುದು? ಜೊತೆಗೆ, ಇದು ಅಂಕಿಅಂಶಗಳಿಗೆ ಮಾತ್ರ ಸೀಮಿತವಾಗಿ, ಅರಣ್ಯನೀತಿ, ಯೋಜನೆಗಳು ಹಾಗೂ ನಿರ್ವಹಣೆಯ ವಸ್ತುನಿಷ್ಠ ವಿಶ್ಲೇಷಣೆಗಳನ್ನು ಮಾಡುವುದಿಲ್ಲ. ಹೀಗಾಗಿ ಇದು ಮಾಹಿತಿಕೋಶವಾಗಿ ಮಾತ್ರ ತೋರುತ್ತದೆ. ಉದಾಹರಣೆಗೆ- 2017ರ ವರದಿಯಲ್ಲಿ ದೇಶದಲ್ಲಿ ಶೇ 0.94ರಷ್ಟು ಹಾಗೂ ರಾಜ್ಯದಲ್ಲಿ ಶೇ 3ರಷ್ಟು ಅರಣ್ಯಪ್ರದೇಶ ವಿಸ್ತರಣೆಯಾಗಿದೆ ಎನ್ನಲಾಗಿದೆ. ಇದಕ್ಕೆ ರಾಜ್ಯದಲ್ಲಿ ಹೆಚ್ಚುತ್ತಿರುವ ರಬ್ಬರ್, ಅಕೇಶಿಯಾದಂಥ ನೆಡುತೋಪುಗಳು ಹಾಗೂ ಅಡಿಕೆ ತೋಟಗಳ ಪಾತ್ರವೂ ಇದೆ ಎಂಬುದನ್ನು ಈ ವರದಿ ಒಪ್ಪಿಕೊಂಡರೂ, ಅದರ ಹಿಂದಿನ ರಾಜಕೀಯ ಹಾಗೂ ಸಮಾಜೋ-ಆರ್ಥಿಕ ಆಯಾಮಗಳು ಮತ್ತು ಇಲಾಖೆಯ ಆಡಳಿತಾತ್ಮಕ ಜವಾಬ್ದಾರಿಯನ್ನು ಚರ್ಚಿಸುವುದಿಲ್ಲ. ಮಲೆನಾಡು ಹಾಗೂ ಕರಾವಳಿಯಲ್ಲಿ ಈಗಲೂ ನಿರಂತರವಾಗಿ ನಡೆದಿರುವ ಒತ್ತುವರಿಯಿಂದಾಗಿ, ದಟ್ಟಅರಣ್ಯಗಳ ಪ್ರಮಾಣ ಮತ್ತು ಅವುಗಳಲ್ಲಿ ಮರಗಳ ಸಾಂದ್ರತೆ ಕ್ಷೀಣಿಸುತ್ತಿದೆ ಎಂಬ ವಾಸ್ತವವನ್ನು ಹೇಳುವುದೇ ಇಲ್ಲ!

ಎರಡನೆಯ ಅಂಶ: ಈ ವರದಿಯ ಉಪಯೋಗ ಮತ್ತು ಅದು ಹೇಳದೇ ಬಿಟ್ಟಿರುವ, ಅರಣ್ಯದ ವಾಸ್ತವ ಸ್ಥಿತಿಯನ್ನು ಕುರಿತದ್ದು. ಸರ್ಕಾರವೇ ಪ್ರಕಟಿಸುವ ಈ ವರದಿಯು ದೇಶದ ಅರಣ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ನಿರ್ವಹಿಸುವ ಎಲ್ಲ ಇಲಾಖೆಗಳ ಕಾರ್ಯಕ್ರಮಗಳಿಗೆ ದಾರಿ ಸೂಚಿಯಾಗಬೇಕಿತ್ತು. ಅರಣ್ಯ ಇಲಾಖೆಯ ವಿಭಾಗ ಮತ್ತು ವಲಯಮಟ್ಟದ ದೀರ್ಘಾವಧಿ ಮತ್ತು ತುರ್ತಿನ ಚಟುವಟಿಕೆಗಳಿಗೆ ಕೈದೀವಿಗೆಯಾಗಬಹುದಿತ್ತು. ತಳಮಟ್ಟದಲ್ಲಿ ಕೆಲಸ ಮಾಡುವ ಇಲಾಖಾ ಸಿಬ್ಬಂದಿಗೆ ಅವರ ಕ್ಷಮತೆಯನ್ನು ಪ್ರತಿಫಲಿಸುವ ಕನ್ನಡಿಯಾಗಬೇಕಿತ್ತು. ಆದರೆ, ಅವರಿಗೆ ಈ ವರದಿಯ ಲಾಭ ತಲುಪುವುದಿಲ್ಲ. ಹೀಗಾಗಿ, ಸಂರಕ್ಷಣಾ ಕಾರ್ಯವು ಯಾವ ಹೊಸನೋಟವೂ ಇಲ್ಲದೆ, ಮತ್ತದೇ ವಸಾಹತುಶಾಹಿ ದರ್ಪದ ನೆಲೆಯಲ್ಲಿಯೇ ಮುನ್ನಡೆಯುತ್ತದೆ! ಈ ವರದಿಯನ್ನಾಧರಿಸಿ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ಸರ್ಕಾರದಿಂದ ಒಂದಷ್ಟು ಹೊಗಳಿಕೆಯನ್ನೋ, ಹೆಚ್ಚಿನ ಅನುದಾನವನ್ನೋ ಪಡೆಯಬಹುದು. ತಾನೆಷ್ಟು ಪರಿಣಾಮಕಾರಿಯಾಗಿ ಪರಿಸರ ಸಂರಕ್ಷಣೆಯಲ್ಲಿ ಕೆಲಸಮಾಡುತ್ತಿದ್ದೇನೆ ಎಂದು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ತೋರಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕಿದು ಸಹಾಯ ಮಾಡಬಹುದು. ಆದರೆ, ಅರಣ್ಯ ಸಂರಕ್ಷಣೆಗೆ ತಳಮಟ್ಟದಲ್ಲಿ ದಿಕ್ಕುದೆಸೆ ತೋರಬೇಕೆಂಬ ಉದ್ದೇಶ ಈಡೇರುತ್ತಿಲ್ಲವೆಂದು ವಿಷಾದದಿಂದ ಹೇಳಬೇಕಿದೆ.

ಇದರ ಪರಿಣಾಮವಾದರೂ ಏನು? ನಾಡಿನ ಅರಣ್ಯದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತಿದೆ. ಮಲೆನಾಡಿನ ಕಾಡು ಮತ್ತಷ್ಟು ಅತಿಕ್ರಮಣಕ್ಕೆ ಒಳಗಾಗಿ, ನಿತ್ಯಹರಿದ್ವರ್ಣ ಕಾಡುಗಳು ಛಿದ್ರವಾಗುತ್ತಿವೆ. ದಟ್ಟ ಅರಣ್ಯದ ಒಟ್ಟು ಪ್ರಮಾಣ ಶೇ 2.35ಕ್ಕೆ ಕುಸಿದಿರುವುದೇ ಇದಕ್ಕೆ ಸಾಕ್ಷಿ. ಅಳಿದುಳಿದ ಅರಣ್ಯವೂ ಬೆಂಕಿ, ನಗರೀಕರಣಕ್ಕೆ ಬಲಿಯಾಗುತ್ತ, ಕುರುಚಲು ಕಾಡು ಹೆಚ್ಚುತ್ತಿದೆ. ಅರಣ್ಯದ ಜಲಮೂಲಗಳು ಒಣಗಿ, ವನ್ಯಜೀವಿಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರೂ ಸಿಗುತ್ತಿಲ್ಲ. ಆನೆಗಳು ಕೃಷಿಜಮೀನಿಗೆ ದಾಳಿಯಿಡುತ್ತಿರುವುದು ಹಾಗೂ ಚಿರತೆಗಳು ಮನೆಗೆ ನುಗ್ಗುತ್ತಿರುವುದು, ನೆಲೆತಪ್ಪಿದ ವನ್ಯಜೀವಿಗಳು ಮತ್ತು ಮಾನವನ ಸಂಘರ್ಷ ಹೆಚ್ಚಾಗಿರುವುದರ ದ್ಯೋತಕವಲ್ಲವೇ? ಜನರ ಸಹಭಾಗಿತ್ವದಲ್ಲಿ ಅರಣ್ಯವನ್ನು ನಿರ್ವಹಿಸಬೇಕಿದ್ದ ‘ಗ್ರಾಮ ಅರಣ್ಯ ಸಮಿತಿ’ಗಳಂತೂ ಅಧಿಕಾರ ಮತ್ತು ಸಂಪನ್ಮೂಲವಿಲ್ಲದೆ ನೆಲಕಚ್ಚಿವೆ!

ಈ ವರದಿಯೇ ಹೇಳುವಂತೆ ಈಗ ರಾಜ್ಯದಲ್ಲಿರುವ ಒಟ್ಟು ಅರಣ್ಯ ಕೇವಲ ಶೇ 19.96. ಇದನ್ನಾದರೂ ಉಳಿಸಿಕೊಳ್ಳಬೇಕಿದೆ. ಈ ವರದಿಯನ್ನೂ ಬೀರುವಿನಲ್ಲಿ ಪೇರಿಸಡದೆ, ಅದರಲ್ಲಿನ ಮುನ್ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಸಮಯವಿದು. ತಳಮಟ್ಟದಲ್ಲಿ ಅರಣ್ಯ ಸಂರಕ್ಷಣಾ ಕಾರ್ಯಕ್ರಮಗಳನ್ನು ಜನಸಹಭಾಗಿತ್ವದಲ್ಲಿ ಜಾರಿಮಾಡಲು, ಸರ್ಕಾರವು ಪ್ರಯತ್ನಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT