ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಗೋವಾ–ಕೇರಳ ಪಂದ್ಯ ಡ್ರಾ

Last Updated 23 ಜನವರಿ 2021, 17:08 IST
ಅಕ್ಷರ ಗಾತ್ರ

ಬ್ಯಾಂಬೊಲಿಮ್: ಕೇರಳ ಬ್ಲಾಸ್ಟರ್ಸ್‌ ತಂಡದ ಪ್ರಬಲ ಪೈಪೋಟಿ ಮೀರಿ ನಿಂತ ಆತಿಥೇಯ ಎಫ್‌ಸಿ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಸಮಬಲ ಸಾಧಿಸಿತು. ಜಿಎಂಸಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯ 1–1ರಲ್ಲಿ ಡ್ರಾ ಆಯಿತು. ಈ ಮೂಲಕ ಗೋವಾ ಸತತ ಆರು ಪಂದ್ಯಗಳಲ್ಲಿ ಸೋಲರಿಯದೆ ಮುನ್ನುಗ್ಗಿತು.

‌ಪಂದ್ಯದ ಆರಂಭದಿಂದಲೇ ತುರುಸಿನ ಸ್ಪರ್ಧೆ ಏರ್ಪಟ್ಟಿತು. ಆರನೇ ನಿಮಿಷದಲ್ಲಿ ಗೋವಾದ ಜಾರ್ಜ್ ಮೆಂಡೋನ್ಸ ಪ್ರಬಲ ಆಕ್ರಮಣ ನಡೆಸಿದರು. ಆದರೆ ಕೊನೆಯಲ್ಲಿ ಅವರು ಒದ್ದ ಚೆಂಡು ಗೋಲುಪೆಟ್ಟಿಗೆಯ ಆಚೆ ಚಿಮ್ಮಿತು. 11ನೇ ನಿಮಿಷದಲ್ಲಿ ಕೇರಳ ಬ್ಲಾಸ್ಟರ್ಸ್‌ನ ಸಹಾಲ್ ಅಬ್ದುಲ್ ಸಮದ್ ಹೊರಹೋಗುವ ಚೆಂಡನ್ನು ಅಮೋಘವಾಗಿ ತಡೆದು ಮೆಚ್ಚುಗೆ ಗಳಿಸಿದರು.

ಪಂದ್ಯ ಮುಂದೆ ಸಾಗಿದಂತೆ ಗೋವಾ ತಂಡದ ಆಟ ಕಳೆಕಟ್ಟಿತು. 17ನೇ ನಿಮಿಷದಲ್ಲಿ ಜಾರ್ಜ್ ಮೆಂಡೋನ್ಸ್ ಮತ್ತು ಆಲ್ಬರ್ಟೊ ನೊಗುವೆರ ಕೇರಳದ ಗೋಲು ಆವರಣದಲ್ಲಿ ಆಕ್ರಮಣ ನಡೆಸಿದರು. ನೊಗುವೆರ ನೀಡಿದ ಕ್ರಾಸ್‌ನಲ್ಲಿ ದೇವೇಂದ್ರ ಮರ್ಗಾವಕರ್ ಚೆಂಡನ್ನು ಹೆಡ್ ಮಾಡಿದರು. ಆದರೆ ನೇರವಾಗಿ ಗೋಲ್‌ಕೀಪರ್ ಕೈ ಸೇರಿತು. 65ನೇ ನಿಮಿಷದಲ್ಲಿ ಗೋವಾದ ಐವನ್ ಗೊನ್ಜಾಲೆಜ್‌ಗೆ ರೆಡ್ ಕಾರ್ಡ್ ತೋರಿಸಲಾಯಿತು.

25ನೇ ನಿಮಿಷದಲ್ಲಿ ಜಾರ್ಜ್ ಮೆಂಡೋನ್ಸ ಗೋವಾಗೆ ಮುನ್ನಡೆ ಗಳಿಸಿಕೊಟ್ಟರು. ಫ್ರೀ ಕಿಕ್‌ನಿಂದ ಲಭಿಸಿದ ಚೆಂಡನ್ನು ಮೆಂಡೋನ್ಸ ನೇರವಾಗಿ ಗೋಲುಪೆಟ್ಟಿಗೆಯ ಒಳಗೆ ಅಟ್ಟಿದರು. ಆದರೆ ಅಬ್ದುಲ್ ಸಮದ್‌ ಅದನ್ನು ಹೆಡ್ ಮಾಡಿ ತಡೆಯಲು ಪ್ರಯತ್ನಿಸಿದರು. ಗೋಲ್‌ಕೀಪರ್ ಆಲ್ಬಿನೊ ಗೊಮೆಜ್ ಕೂಡ ತಡೆಯಲು ಯತ್ನಿಸಿದರು. ಆದರೆ ಯಾರ ಕೈಗೂ ಸಿಗದ ಚೆಂಡು ನೇರವಾಗಿ ಗುರಿ ಸೇರಿತು.

ವಿರಾಮಕ್ಕೆ ತೆರಳಲು ಐದು ನಿಮಿಷಗಳು ಇದ್ದಾಗ ಕೇರಳಕ್ಕೆ ಕಾರ್ನರ್ ಅವಕಾಶ ಲಭಿಸಿತ್ತು. ಆದರೆ ಅದನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. 57ನೇ ನಿಮಿಷದಲ್ಲಿ ರಾಹುಲ್ ಕೆ.ಪಿ ಮೂಲಕ ಬ್ಲಾಸ್ಟರ್ಸ್‌ ತಿರುಗೇಟು ನೀಡಿತು. ಫಾಕುಂಡೊ ಪೆರೇರ ಬಲಬದಿಯ ಕಾರ್ನರ್‌ನಿಂದ ನೀಡಿದ ಚೆಂಡನ್ನು ರಾಹುಲ್ ಮೋಹಕವಾಗಿ ಗುರಿಮುಟ್ಟಿಸಿ ಸಮಬಲ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT