ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲೇ ಆಫ್ ಹಂತಕ್ಕೆ ಗೋವಾ

ಐಎಸ್‌ಎಲ್‌: ಬ್ಲಾಸ್ಟರ್ಸ್‌ಗೆ ಸೋಲುಣಿಸಿದ ಆತಿಥೇಯರು
Last Updated 18 ಫೆಬ್ರುವರಿ 2019, 20:29 IST
ಅಕ್ಷರ ಗಾತ್ರ

ಗೋವಾ: ತವರಿನ ಅಂಗಳದಲ್ಲಿ ಅಮೋಘ ಆಟವಾಡಿದ ಗೋವಾ ಎಫ್‌ಸಿ ತಂಡ ಇಂಡಿಯನ್‌ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ ಬಾಲ್ ಟೂರ್ನಿಯ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನ ಅಲಂಕರಿಸಿ ಪ್ಲೇ ಆಫ್ ಹಂತಕ್ಕೇರಿತು.

ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್‌ಸಿಯನ್ನು ಗೋವಾ 3–0ಯಿಂದ ಮಣಿಸಿತು. ಈ ಗೆಲುವಿನೊಂದಿಗೆ 16 ಪಂದ್ಯಗಳಲ್ಲಿ 31 ಪಾಯಿಂಟ್ ಕಲೆ ಹಾಕಿತು.

ಈವರೆಗೆ ಅಗ್ರ ಸ್ಥಾನದಲ್ಲಿದ್ದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಕೂಡ 16 ಪಂದ್ಯಗಳಲ್ಲಿ 31 ಪಾಯಿಂಟ್ ಗಳಿಸಿದೆ. ಆದರೆ ಗೋಲು ಗಳಿಕೆಯಲ್ಲಿ ಗೋವಾ ಮುಂದೆ ಇದೆ. ಈ ತಂಡ 33 ಗೋಲುಗಳನ್ನು ಗಳಿಸಿದ್ದರೆ ಬಿಎಫ್‌ಸಿ ಗಳಿಸಿದ್ದು 25 ಗೋಲು ಮಾತ್ರ. ಎರಡೂ ತಂಡಗಳು 17 ಗೋಲುಗಳನ್ನು ಬಿಟ್ಟುಕೊಟ್ಟಿವೆ. ಬಿಎಫ್‌ಸಿ ಈಗಾಗಲೇ ಪ್ಲೇ ಆಫ್‌ ಹಂತಕ್ಕೆ ಪ್ರವೇಶಿಸಿದೆ.

ಫೆರಾನ್, ಎಡು ಬೇಡಿಯಾ ಮಿಂಚು: ಸೋಮವಾರದ ಪಂದ್ಯದ ಮೊದಲಾರ್ಧದಲ್ಲಿ ಫೆರಾನ್‌ ಕೊರೊಮಿನಾಸ್ ಮತ್ತು ಎಡು ಬೇಡಿಯಾ ಮೂರು ನಿಮಿಷಗಳ ಅಂತರದಲ್ಲಿ ಎರಡು ಗೋಲುಗಳನ್ನು ಗಳಿಸಿ ಫುಟ್‌ಬಾಲ್ ಪ್ರಿಯರನ್ನು ರೋಮಾಂಚಗೊಳಿಸಿದರು.

22ನೇ ನಿಮಿಷದಲ್ಲಿ ಬ್ರೆಂಡನ್ ಫರ್ನಾಂಡಿಸ್ ನೀಡಿದ ನಿಖರ ಕ್ರಾಸ್‌ನಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಕೊರೊಮಿನಾಸ್‌ ಆತಿಥೇಯ ಪಾಳಯದಲ್ಲಿ ಸಂತಸದ ಹೊಳೆ ಹರಿಸಿದರು. ಇದು ಈ ಆವೃತ್ತಿಯಲ್ಲಿ ಕೊರೊಮಿನಾಸ್‌ ಅವರ 14ನೇ ಗೋಲು. ಈ ಮೂಲಕ ಹೆಚ್ಚು ಗೋಲು ಗಳಿಸಿದ ಆಟಗಾರ ಎಂದೆನಿಸಿಕೊಂಡರು.

ನಾರ್ತ್ ಈಸ್ಟ್‌ ಯುನೈಟೆಡ್‌ನ ಬಾರ್ತೊಲೊಮ್‌ ಒಗ್ಬೆಚೆ 12 ಗೋಲು ಗಳಿಸಿದ್ದು ಮುಂಬೈ ಸಿಟಿ ಎಫ್‌ಸಿಯ ಮೊಡೊ ಸೊಗೊ ಒಂಬತ್ತು ಬಾರಿ ಚೆಂಡನ್ನು ಗುರಿ ಮುಟ್ಟಿಸಿದ್ದಾರೆ.

25ನೇ ನಿಮಿಷದಲ್ಲಿ ಸುಲಭ ಗೋಲು ಗಳಿಸಿದ ಎಡು ಬೇಡಿಯಾ ತಂಡದಲ್ಲಿ ಮತ್ತೊಮ್ಮೆ ಸಂಭ್ರಮ ಮೂಡಿಸಿದರು.

ದ್ವಿತೀಯಾರ್ಧದಲ್ಲಿ ಬ್ಲಾಸ್ಟರ್ಸ್‌ ತಿರುಗೇಟು ನೀಡಲು ತೀವ್ರ ಪ್ರಯತ್ನ ನಡೆಸಿದ್ದರಿಂದ ಪಂದ್ಯದ ರೋಚಕತೆ ಹೆಚ್ಚಿತು. ಆದರೆ ತಂಡಕ್ಕೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. 78ನೇ ನಿಮಿಷದಲ್ಲಿ ಹ್ಯೂಗೊ ಬೌಮಾಸ್‌ ಗಳಿಸಿದ ಗೋಲಿನ ಮೂಲಕ ಗೋವಾದ ಗೆಲುವಿನ ಅಂತರ ಹೆಚ್ಚಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT