ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾಗೆ ಅಲ್ ವಾಹ್ದ ಸವಾಲು

ಎಎಫ್‌ಸಿ ಚಾಂಪಿಯನ್ಸ್‌ ಲೀಗ್: ಭರವಸೆಯಲ್ಲಿ ಜುವಾನ್ ಫರ್ನಾಂಡೊ ಬಳಗ
Last Updated 16 ಏಪ್ರಿಲ್ 2021, 14:18 IST
ಅಕ್ಷರ ಗಾತ್ರ

ಮಡಗಾಂವ್‌, ಗೋವಾ: ಮೊದಲ ಪಂದ್ಯದಲ್ಲಿ ಅಮೋಘ ಸಾಮರ್ಥ್ಯ ಪ್ರದರ್ಶಿಸಿದ ಚೊಚ್ಚಲ ಪಾಯಿಂಟ್ ಕಲೆ ಹಾಕಿರುವ ಎಫ್‌ಸಿ ಗೋವಾ ತಂಡ ಎಎಫ್‌ಸಿ ಚಾಂಪಿಯನ್ಸ್ ಲೀಗ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಯುಎಇಯ ಅಲ್ ವಾಹ್ದ ತಂಡವನ್ನು ಶನಿವಾರ ಎದುರಿಸಲಿದೆ.

ಕತಾರ್‌ನ ಅಲ್ ರಯಾನ್ ತಂಡದ ಎದುರು ಬುಧವಾರ ನಡೆದ ‘ಇ’ ಗುಂಪಿನ ಪಂದ್ಯವನ್ನು ಡ್ರಾ ಮಾಡುವ ಮೂಲಕ ಗೋವಾ ಎಎಫ್‌ಸಿ ಚಾಂಪಿಯನ್ಸ್ ಲೀಗ್‌ನಲ್ಲಿ ಪಾಯಿಂಟ್ ಗಳಿಸಿದ ಭಾರತದ ಮೊದಲ ತಂಡ ಎಂಬ ಶ್ರೇಯಸ್ಸು ತನ್ನದಾಗಿಸಿಕೊಂಡಿತ್ತು.

ಇದರಿಂದ ತಂಡದ ಹುಮ್ಮಸ್ಸು ಹೆಚ್ಚಿದ್ದು ಶನಿವಾರದ ಪಂದ್ಯದಲ್ಲಿ ತಂತ್ರಗಳನ್ನು ಬದಲಿಸಿ ಮತ್ತಷ್ಟು ಬಲಶಾಲಿಯಾಗಿ ಕಣಕ್ಕೆ ಇಳಿಯಲು ಕೋಚ್‌ ಜುವಾನ್ ಫರ್ನಾಂಡೊ ಬಳಗ ಸಜ್ಜಾಗಿದೆ. ಅಬು ಧಾಬಿ ಮೂಲದಅಲ್ ವಾಹ್ದ ಭಾರತದ ತಂಡಗಳ ವಿರುದ್ಧ ಈ ವರೆಗೆ ಅತ್ಯುತ್ತಮ ಸಾಮರ್ಥ್ಯ ತೋರಿದೆ. ಎಸಿಎಲ್‌ನಲ್ಲಿ ಒಟ್ಟು 12 ಬಾರಿ ಭಾರತೀಯ ತಂಡಗಳನ್ನು ಎದುರಿಸಿರುವ ವಾಹ್ದ ಪಾರಮ್ಯ ಮೆರೆದಿದೆ.

ಆದರೆ ಎಜು ಬೇಡಿಯಾ ನಾಯಕತ್ವದ ಗೋವಾ ಗೆಲುವಿನ ಭರವಸೆಯಲ್ಲಿದೆ. ಮಿಡ್‌ಫೀಲ್ಡರ್ ಎಜು ಬೇಡಿಯಾ ಉತ್ತಮ ಫಾರ್ಮ್‌ನಲ್ಲಿದ್ದು ಜಾರ್ಜ್ ಒರ್ಟಿಜ್‌ ಮತ್ತು ಇಶಾನ್ ಪಂಡಿತ ಆಕ್ರಮಣಕಾರಿ ಆಟವಾಡಬಲ್ಲರು.

ಅಲ್‌ ವಾಹ್ದ ಪ್ಲೇ ಆಫ್ ಹಂತದಲ್ಲಿ ಇರಾಕ್‌ನ ಅಲ್ ಜವ್ರಾ ವಿರುದ್ಧ 2–1ರ ಜಯ ಗಳಿಸಿ ಗುಂಪು ಹಂತಕ್ಕೆ ಪ್ರವೇಶಿಸಿದೆ. ಆದರೆ ಬುಧವಾರ ನಡೆದ ಗುಂಪು ಹಂತದ ಮೊದಲ ಪಂದ್ಯದಲ್ಲಿ ‍ಪರ್ಸೆಪೊಲಿಸ್ ಎಫ್‌ಸಿ ವಿರುದ್ಧ 0–1ರಿಂದ ಸೋತಿತ್ತು.

ಐದು ಗುಂಪುಗಳ ಪೈಕಿ ಪ್ರತಿ ಗುಂಪಿನಲ್ಲಿ ಅಗ್ರ ಸ್ಥಾನ ಗಳಿಸುವ ಮತ್ತು ಅತ್ಯುತ್ತಮ ಸಾಮರ್ಥ್ಯ ಮೆರೆದ ಮೂರು ರನ್ನರ್ ಅಪ್ ತಂಡಗಳು ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT