ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿನ ಬಾಲಕನಿಗೆ ಜನ್ಮಾಭಿಷೇಕ

Last Updated 9 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ದೃಷ್ಟಿ ಹಾಯಿಸಿದ ದೂರಕ್ಕೂ ಜಿನಭಕ್ತೆಯರ ಸಾಲು. ಗುಲಾಬಿ, ಶ್ವೇತವರ್ಣ, ಹಸಿರು, ಹಳದಿ, ಕೆಂಪು ವಸ್ತ್ರಧಾರಿಗಳು ಧರ್ಮಧ್ವಜ ಹಿಡಿದು, ಕಳಶ ಹೊತ್ತು ಗೊಮ್ಮಟೇಶ್ವರನ ಸ್ಮರಿಸುತ್ತ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಬಾಹುಬಲಿ ಮೂರ್ತಿ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಆದಿನಾಥ ತೀರ್ಥಂಕರರ ಪಂಚಕಲ್ಯಾಣದ ಜನ್ಮಕಲ್ಯಾಣ ಮಹೋತ್ಸವದ ನಿಮಿತ್ತ ಜಿನ ಬಾಲಕನ ಜನ್ಮಾಭಿಷೇಕ ಕಾರ್ಯಕ್ರಮದ ಧಾರ್ಮಿಕ ವಿಧಿ, ವಿಧಾನಗಳು ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

‘ಭಗವಾನ್‌ ಬಾಹುಬಲಿಗೆ ಜೈ’ ಘೋಷಣೆಗಳು ಮೊಳಗಿದವು. ‘ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ, ಮೈತ್ರಿಯಿಂದ ಪ್ರಗತಿ, ಧ್ಯಾನದಿಂದ ಸಿದ್ದಿ’ ಎಂಬ ಫಲಕ ಪ್ರದರ್ಶಿಸಿದರು.

ಪಟ್ಟಣದ ಬಾಹುಬಲಿ ತಾಂತ್ರಿಕ ಮಹಾವಿದ್ಯಾಲಯದ ಬಳಿ ಚಾರುಕೀರ್ತಿ ಸ್ವಾಮೀಜಿ ಮತ್ತು ಶಾಸಕ ಸಿ.ಎನ್‌.ಬಾಲಕೃಷ್ಣ ಮೆರವಣಿಗೆಗೆ ಚಾಲನೆ ನೀಡಿ
ದರು. 3 ಕಿ.ಮೀ ವರೆಗೆ ಮೆರವಣಿಗೆ ಸಾಗಿ, ಪಂಚಕಲ್ಯಾಣ ನಗರದಲ್ಲಿ ನಿರ್ಮಿಸಿರುವ ಸುಮೇರು ಪರ್ವತ ತಲುಪಿತು.

ನಂತರ ತ್ಯಾಗಿ ನಗರದಿಂದ ಆನೆ ಮೇಲೆ ಸೌಧರ್ಮ ಇಂದ್ರ, ಇಂದ್ರಾಣಿಯರು ಜಿನಶಿಶುವನ್ನು ಮೆರವಣಿಗೆ ಮೂಲಕ ಸುಮೇರು ಪರ್ವತದ ಪಾಂಡುಕ ಶಿಲೆಯ ಮೇಲೆ ತಂದು ವಿಧಿ, ವಿಧಾನಗಳೊಂದಿಗೆ ಜಲಾಭಿಷೇಕ ನೆರವೇರಿಸಲಾಯಿತು.

ಸಹಸ್ರಾರು ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ‘ಕ್ಷೇತ್ರದ ಇತಿಹಾಸದಲ್ಲಿಯೇ ಈ ಮೆರವಣಿಗೆ ಅಭೂತಪೂರ್ವ
ವಾಗಿದೆ. ಕರ್ತವ್ಯ ನಿಷ್ಠೆ ಮತ್ತು ಭಕ್ತಿ ಮುಖ್ಯವಾಗಿದೆ. ಭವ್ಯ ಮೆರವಣಿಗೆಯು ಜನ್ಮಾಭಿಷೇಕದ ಬಗ್ಗೆ ಪಂಪನ ಆದಿಪುರಾಣ ಮತ್ತು ರನ್ನನ ಅಜಿತನಾಥ ಪುರಾಣಗಳಲ್ಲಿ ವರ್ಣಿಸಿದಂತಿದೆ’ ಎಂದರು.

ಇಂದಿನಿಂದ 9 ವಿಶೇಷ ರೈಲು

ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರ ಅನುಕೂಲಕ್ಕಾಗಿ ಫೆ. 10ರಿಂದ 9 ವಿಶೇಷ ರೈಲುಗಳ ಸಂಚಾರ ಆರಂಭಗೊಳ್ಳಲಿದೆ.

ಯಶವಂತಪುರದಿಂದ ಶ್ರವಣಬೆಳಗೊಳ ಮಾರ್ಗವಾಗಿ ಹಾಸನಕ್ಕೆ ನಾಲ್ಕು ಜೋಡಿ ರೈಲುಗಳು ವ್ಯವಸ್ಥೆಯಾಗಿದ್ದು, ಇದೇ ರೀತಿ ಹಾಸನದಿಂದಲೂ ರೈಲುಗಳು ಸಂಚರಿಸಲಿವೆ. ಮೈಸೂರು ಮಾರ್ಗವಾಗಿ ಸಂಚರಿಸುತ್ತಿದ್ದ ಯಶವಂತಪುರ ಮೀರಜ್‌ ರೈಲು ಕೂಡ ಶ್ರವಣಬೆಳಗೊಳ ಮಾರ್ಗವಾಗಿ ಸಂಚರಿಸಲಿದೆ. ಈ ಮಾರ್ಗವಾಗಿ ಹೊಸ ರೈಲುಗಳನ್ನು ಈಗಾಗಲೇ ಪ್ರಯೋಗಾತ್ಮಕವಾಗಿ ಓಡಿಸಲಾಗುತ್ತಿದೆ.

ದೂರದ ಊರುಗಳಿಂದ ಆಗಮಿಸುವ ಭಕ್ತರು, ಯಾತ್ರಾರ್ಥಿಗಳು, ಪ್ರವಾಸಿಗರಿಗೆ ರೈಲ್ವೆ ನಿಲ್ದಾಣದ ಆವರಣದಲ್ಲಿಯೇ ತಾತ್ಕಾಲಿಕವಾಗಿ ಬೃಹತ್‌ ಸಭಾಂಗಣ ನಿರ್ಮಿಸಲಾಗಿದೆ. ಎರಡು ಸಾವಿರ ಮಂದಿ ಇಲ್ಲಿ ವಿಶ್ರಾಂತಿ ಪಡೆಯಬಹುದು. ಮಹಿಳೆಯರು, ಪುರುಷರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಪಕ್ಕದಲ್ಲಿಯೇ ಕ್ಯಾಂಟೀನ್‌ ತೆರೆಯಲು ಸಿದ್ಧತೆ ನಡೆಯುತ್ತಿದೆ. ಪ್ರಯಾಣಿಕರಿಗೆ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಲಾಗುತ್ತದೆ.

ಇಂದು ಬೆಳಗೊಳಕ್ಕೆ ಉಪರಾಷ್ಟ್ರಪತಿ

ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಫೆ.10ರಂದು ಚಾವುಂಡರಾಯ ಸಭಾ ಮಂಟಪದಲ್ಲಿ ನಡೆಯುವ ರಾಜ್ಯಾಭಿಷೇಕ ಸಮಾರಂಭದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಪಾಲ್ಗೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT