ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟೇಗೌಡರಿಗೆ ಕಾಂಗ್ರೆಸ್‌ ಟಿಕೆಟ್‌ಗೆ ಒತ್ತಾಯಿಸಿ ಪಾದಯಾತ್ರೆ

Last Updated 28 ಫೆಬ್ರುವರಿ 2018, 6:27 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಕ್ಷೇತ್ರದಲ್ಲಿ 3 ದಶಕಗಳಿಂದ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿ ಬೆಳೆಸಿರುವ ಎಂ.ಪುಟ್ಟೇಗೌಡ ಅವರಿಗೆ 2018ರ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಕೆಪಿಸಿಸಿ ಕಚೇರಿಯವರೆಗೆ ಪಾದಯಾತ್ರೆ ನಡೆಸಲಿದ್ದೇವೆ’ ಎಂದು ಕಾಂಗ್ರೆಸ್‌ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹೇಳಿದರು.

ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ನಡೆದ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ, ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಎನ್‌.ಗಂಗಾಧರ್‌, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಯ್ಯದ್‌ ಕಾಬೂಲ್‌, ಯುವ ಘಟಕದ ಅಧ್ಯಕ್ಷ ಗುಣವಂತ, ಮಜ್ದೂರ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಮೇಳಾಪುರ ಶ್ರೀನಿವಾಸ್‌, ಜಿಲ್ಲಾ ಘಟಕ ಉಪಾಧ್ಯಕ್ಷ ದರಸಗುಪ್ಪೆ ರುದ್ರೇಶ್‌, ಹಿಂದುಳಿದ ವರ್ಗಗಳ ಘಟಕದ ಸಿದ್ದಮಾದಯ್ಯ ಮೊದಲಾದವರು ಈ ವಿಷಯ ತಿಳಿಸಿದರು.

ದರಸಗುಪ್ಪೆ ರುದ್ರೇಶ್‌ ಮಾತನಾಡಿ, ‘ಕಾಂಗ್ರೆಸ್‌ ಪಕ್ಷದಲ್ಲಿ ತತ್ವ, ಸಿದ್ಧಾಂತ ಪಾಲಿಸುವವರಿಗೆ ಹೆಚ್ಚು ಮಾನ್ಯತೆ ಇದೆ. ಪಕ್ಷ ಸಂಘಟನೆ ಮಾಡದ, ಹೊರಗಿನಿಂದ ಬಂದ ವ್ಯಕ್ತಿಗಳಿಗೆ ಟಿಕೆಟ್‌ ನೀಡುವ ಸಂಪ್ರದಾಯ ಇಲ್ಲ. ಆದರೆ ಈ ಬಾರಿ ಅನ್ಯ ಪಕ್ಷದವರಿಗೆ ಟಿಕೆಟ್‌ ನೀಡಲಾಗುತ್ತಿದೆ ಎಂಬ ಸುದ್ದಿ ಹರಡಿದೆ. ಅಂತಹ ಬೆಳವಣಿಗೆ ನಡೆದರೆ ನಿಷ್ಠಾವಂತ ಕಾಂಗ್ರೆಸ್ಸಿಗರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಪಕ್ಷಕ್ಕೆ ತೀವ್ರ ಹಿನ್ನಡೆಯಾಗಲಿದೆ’ ಎಂದು ಅವರು ಹೇಳಿದರು.

ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಯ್ಯದ್‌ ಕಾಬೂಲ್‌, ‘ಪುಟ್ಟೇಗೌಡ ಅವರಿಗೆ ಟಿಕೆಟ್‌ ನೀಡದಿದ್ದರೆ ಕೆಪಿಸಿಸಿ ಕಚೇರಿ ಎದುರು ಧರಣಿ ಕೂರುತ್ತೇನೆ’ ಎಂದರು. ‘ಈ ಬಗ್ಗೆ ಒತ್ತಾಯಿಸಲು ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಎಐಸಿಸಿ ಕಚೇರಿಗೆ ಬರಲೂ ಸಿದ್ಧರಿರಬೇಕು’ ಎಂದು ವಿ.ನಾರಾಯಣ ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಎನ್‌.ಗಂಗಾಧರ್‌, ‘ಪುಟ್ಟೇಗೌಡ ಅವರು ಕಾಂಗ್ರೆಸ್‌ ಪಕ್ಷಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ನಿಷ್ಠೆಯಿಂದ ಕೆಲಸ ಮಾಡಿ ಉತ್ತಮ ಪಕ್ಷ ಸಂಘಟಕ ಎಂಬ ಹೆಸರು ಪಡೆದಿದ್ದಾರೆ. ಇಂತಹ ವ್ಯಕ್ತಿಗೆ ಟಿಕೆಟ್‌ ನೀಡಿದ್ದರೆ ಕಾಂಗ್ರೆಸ್‌ ಪಕ್ಷದ ಗೌರವಕ್ಕೆ ಕುಂದುಂಟಾಗಲಿದೆ’ ಎಂದು ಅಭಿಪ್ರಾಯಪಟ್ಟರು. ಗೋಪಾಲಗೌಡ, ದ್ಯಾವಪ್ಪ, ಮೋಹನ್‌, ಡಿ.ಕೆ.ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT