ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ವಲಯದ ಅರ್ಹತಾ ಸುತ್ತಿನ ಪಂದ್ಯ: ಭಾರತಕ್ಕೆ ಮತ್ತೊಮ್ಮೆ ನಿರಾಸೆ

Last Updated 26 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ತವರಿನ ಅಂಗಳದಲ್ಲಿ ಜಯದ ಸಿಹಿ ಸವಿಯುವ ಕನಸು ಕಂಡಿದ್ದ ಭಾರತಕ್ಕೆ ಮತ್ತೆ ನಿರಾಸೆ ಕಾಡಿತು. ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ವಿಶ್ವಕಪ್‌ ಬ್ಯಾಸ್ಕೆಟ್‌ಬಾಲ್‌ ಏಷ್ಯಾ ವಲಯದ ಅರ್ಹತಾ ಪಂದ್ಯದಲ್ಲಿ ಸತ್ನಾಮ್‌ ಸಿಂಗ್‌ ಬಳಗ 50-90 ಪಾಯಿಂಟ್ಸ್‌ನಿಂದ ಬಲಿಷ್ಠ ಲೆಬನಾನ್‌ ವಿರುದ್ಧ ಪರಾಭವಗೊಂಡಿತು.

ಟೂರ್ನಿಯಲ್ಲಿ ಉಭಯ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾಗ ಲೆಬನಾನ್‌ ಗೆದ್ದಿತ್ತು. ಈ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ಗುರಿಯೊಂದಿಗೆ ಅಂಗಳಕ್ಕಿಳಿದಿದ್ದ ಭಾರತ, ಮೊದಲ ಕ್ವಾರ್ಟರ್‌ನಲ್ಲಿ ಉತ್ತಮ ಆರಂಭವನ್ನೇ ಪಡೆದಿತ್ತು. ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದ ಆತಿಥೇಯರು 7-3ರ ಮುನ್ನಡೆ ಗಳಿಸಿದ್ದರು. ಆ ನಂತರ ಲೆಬನಾನ್‌ ಆಟದ ವೇಗ ಹೆಚ್ಚಿಸಿಕೊಂಡಿತು.

ಚೆಂಡನ್ನು ಪರಸ್ಪರ ವರ್ಗಾಯಿಸುತ್ತಾ ಭಾರತದ ಆವರಣ ಪ್ರವೇಶಿಸುತ್ತಿದ್ದ ಪ್ರವಾಸಿ ಪಡೆಯ ಆಟಗಾರರು ಸಿಕ್ಕ ಅವಕಾಶಗಳ ಲಾಭ ಎತ್ತಿಕೊಂಡು ಮುನ್ನಡೆ ತಮ್ಮದಾಗಿಸಿಕೊಂಡರು. ನಾಯಕ ಜೀನ್‌ ಅಬ್ದೆ ಅಲ್‌ ನೌರ್‌ (6) ಮತ್ತು ಅಮೀರ್‌ ಸೌದ್‌ (5) ಫೀಲ್ಡ್‌ ಗೋಲು ಮತ್ತು ಫ್ರೀ ಥ್ರೋಗಳ ಮೂಲಕ ಲೆಬನಾನ್‌ ಖಾತೆಗೆ ಪಾಯಿಂಟ್ಸ್‌ ಸೇರ್ಪಡೆ ಮಾಡಿದರು.

ಭಾರತದ ಸತ್ನಾಮ್‌ ಮತ್ತು ಯದ್ವಿಂದರ್‌ ಸಿಂಗ್‌ ತಲಾ ನಾಲ್ಕು ಪಾಯಿಂಟ್ಸ್‌ ಹೆಕ್ಕಿದರು. ಜಸ್ಟಿನ್‌ ಜೋಸೆಫ್‌ ಮತ್ತು ಜೋಗಿಂದರ್‌ ಸಿಂಗ್‌ ಕೂಡ ಪಾಯಿಂಟ್ಸ್‌ಗಳ ಕಾಣಿಕೆ ನೀಡಿದರು. ಆತಿಥೇಯ ಆಟಗಾರರು ಚೆಂಡನ್ನು ಸೊಗಸಾದ ರೀತಿಯಲ್ಲಿ ಬುಟ್ಟಿಗೆ ಹಾಕಿದಾಗಲೆಲ್ಲಾ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಭ್ರಮದ ಅಲೆ ಏಳುತ್ತಿತ್ತು.

ಮೊದಲ ಕ್ವಾರ್ಟರ್‌ನಲ್ಲಿ ಹಿನ್ನಡೆ ಕಂಡ ಸತ್ನಾಮ್‌ ಪಡೆ ಎರಡನೇ ಕ್ವಾರ್ಟರ್‌ನಲ್ಲಿ ತಿರುಗೇಟು ನೀಡಬಹುದೆಂಬ ನಿರೀಕ್ಷೆ ಹುಸಿಯಾಯಿತು. ಸಿಕ್ಕ ಅವಕಾಶಗಳನ್ನು ತಂಡ ಕೈಚೆಲ್ಲಿತು. ಸತ್ನಾಮ್‌, ಯದ್ವಿಂದರ್‌, ಜೋಗಿಂದರ್‌ ಮತ್ತು ಅರವಿಂದ್‌ ಅಣ್ಣಾದುರೈ ಗುಣಮಟ್ಟದ ಆಟದ ಮೂಲಕ ಗಮನ ಸೆಳೆದರು. ಹೀಗಾಗಿ ತಂಡ ಕ್ವಾರ್ಟರ್‌ನ ಶುರುವಿನಲ್ಲಿ ಅಲ್ಪ ಪ್ರತಿರೋಧ ಒಡ್ಡಿತು. ಆ ನಂತರ ಮತ್ತೆ ಲೆಬನಾನ್‌ ಪರಾಕ್ರಮ ಮೆರೆಯಿತು. ಸುಲಭವಾಗಿ ಭಾರತದ ಆವರಣ ಪ್ರವೇಶಿಸುತ್ತಿದ್ದ ಈ ತಂಡದ ಆಟಗಾರರು ಚಾಕಚಕ್ಯತೆಯಿಂದ ಚೆಂಡನ್ನು ‘ಬ್ಯಾಸ್ಕೆಟ್‌’ ಮಾಡಿ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು.

47-25ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ಲೆಬನಾನ್‌ ತಂಡದ ಆಟ ಮೂರನೇ ಕ್ವಾರ್ಟರ್‌ನಲ್ಲೂ ರಂಗೇರಿತು. ನೌರ್‌ ಬಳಗದ ಅಬ್ಬರದ ಮುಂದೆ ಆತಿಥೇಯರು ತಬ್ಬಿಬ್ಬಾದರು. ಅಮೀರ್‌ ಸೌದ್‌, ಅತೇರ್‌ ಮಜೋಕ್‌ ಮತ್ತು ವಾಯೆಲ್‌ ಅರಾಕಜಿ, ಭಾರತದ ಆಟಗಾರರನ್ನು ವಂಚಿಸಿ ಪಾಯಿಂಟ್ಸ್‌ ಕಲೆಹಾಕುತ್ತಿದ್ದ ರೀತಿ ಮನ ಸೆಳೆಯುವಂತಿತ್ತು.

ಮೂರನೇ ಕ್ವಾರ್ಟರ್‌ನ ಅಂತ್ಯಕ್ಕೆ 31 ಪಾಯಿಂಟ್ಸ್‌ಗಳಿಂದ ಹಿಂದಿದ್ದ ಭಾರತ, ಆ ನಂತರವೂ ಚೇತರಿಸಿಕೊಳ್ಳಲಿಲ್ಲ. ಅಂತಿಮ ಕ್ವಾರ್ಟರ್‌ನಲ್ಲೂ ಮಿಂಚಿನ ಆಟ ಮುಂದುವರಿಸಿದ ಲೆಬನಾನ್‌ ಏಕಪಕ್ಷೀಯವಾಗಿ ಜಯದ ತೋರಣ ಕಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT