ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಸ್ಸಿ–ಎಂಬಾಪೆ ಕದನ ಕುತೂಹಲ: ಕಾಲ್ಚೆಂಡಾಟದ ಕಿರೀಟ ಯಾರ ಮುಡಿಗೆ?

ಅರ್ಜೆಂಟೀನಾ– ಫ್ರಾನ್ಸ್‌ ಫೈನಲ್‌ ಇಂದು
Last Updated 17 ಡಿಸೆಂಬರ್ 2022, 19:25 IST
ಅಕ್ಷರ ಗಾತ್ರ

ದೋಹಾ (ರಾಯಿಟರ್ಸ್‌, ಎಎಫ್‌ಪಿ): ಮುಂದಿನ ನಾಲ್ಕು ವರ್ಷಗಳ ಅವಧಿಗೆ ಕಾಲ್ಚೆಂಡಾಟದ ನೂತನ ದೊರೆ ಯಾರಾಗುವರು ಎಂಬುದು ದೊರೆಗಳ ಆಡಳಿತವಿರುವ ಅರಬ್‌ ನಾಡಿನಲ್ಲಿ ಭಾನುವಾರ ರಾತ್ರಿ ನಿರ್ಧಾರವಾಗಲಿದೆ.

ಮೂರನೇ ಟ್ರೋಫಿ ಗೆಲ್ಲಬೇಕೆಂಬ ಕನಸಿನೊಂದಿಗೆ ಅರ್ಜೆಂಟೀನಾ ಮತ್ತು ಹಾಲಿ ಚಾಂಪಿಯನ್‌ ಫ್ರಾನ್ಸ್‌ ತಂಡಗಳು ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಫೈನಲ್‌ನಲ್ಲಿ ಪೈಪೋಟಿ ನಡೆಸಲಿದ್ದು, ಕೋಟ್ಯಾಂತರ ಅಭಿಮಾನಿಗಳಲ್ಲಿ ಕುತೂಹಲ ಗರಿಗೆದರಿದೆ.

ದಕ್ಷಿಣ ಆಮೆರಿಕದ ಸಾಂಪ್ರದಾಯಿಕ ಫುಟ್‌ಬಾಲ್‌ ಶೈಲಿಯು ಯೂರೋಪ್‌ನ ವೇಗ ಮತ್ತು ಅಕ್ರಮಣಕಾರಿ ಶೈಲಿಯ ಜತೆ ತಿಕ್ಕಾಟ ನಡೆಸುವಾಗ ಲುಸೈಲ್‌ ಕ್ರೀಡಾಂಗಣದ ಹಸಿರು ಹಾಸಿನಲ್ಲಿ ಮೈನವಿರೇಳಿಸುವ ದೃಶ್ಯಗಳು ಮೂಡಿಬರುವುದರಲ್ಲಿ ಅನುಮಾನವಿಲ್ಲ.

ತಮ್ಮ ಐದನೇ ಹಾಗೂ ಕೊನೆಯ ವಿಶ್ವಕಪ್‌ ಆಡುತ್ತಿರುವ ದಿಗ್ಗಜ ಆಟಗಾರ ಲಯೊನೆಲ್‌ ಮೆಸ್ಸಿ ಮಿರುಗುವ ಟ್ರೋಫಿ ಎತ್ತಿಹಿಡಿಯುವರೇ, ಕಿಲಿಯನ್‌ ಎಂಬಾಪೆಯ ಕಾಲ್ಚಳಕದ ಮುಂದೆ ಮೆಸ್ಸಿ ಮಣಿಯುವರೇ ಎಂಬ ಪ್ರಶ್ನೆಗಳಿಗೆ ಉತ್ತರ ಲಭಿಸುವ ಕಾಲ ಕೂಡಿಬಂದಿದೆ.

ಫ್ರಾನ್ಸ್‌ ಮತ್ತು ಅರ್ಜೆಂಟೀನಾ ಮಾತ್ರವಲ್ಲದೆ ವಿಶ್ವದ ವಿವಿಧ ದೇಶಗಳಲ್ಲಿರುವ ಫುಟ್‌ಬಾಲ್‌ ಪ್ರೆಮಿಗಳು ಫೈನಲ್‌ ಪಂದ್ಯವನ್ನು ಉತ್ಸವದ ರೀತಿಯಲ್ಲಿ ಆಚರಿಸಲು ತಯಾರಿ ನಡೆಸಿದ್ದು, ಪೋಲೆಂಡ್‌ನ ರೆಫರಿ ಸೈಮನ್‌ ಮಾರ್ಸಿನಿಯಾಕ್‌ ಅವರು ಕಿಕಾಫ್‌ ವಿಷಲ್‌ ಊದುವ ಕ್ಷಣಕ್ಕಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.

ಆಧುನಿಕ ಫುಟ್‌ಬಾಲ್‌ನ ಶ್ರೇಷ್ಠ ಆಟಗಾರರಲ್ಲೊಬ್ಬರಾದ ಮೆಸ್ಸಿ ಹಾಗೂ ಮುಂದಿನ ದಿನಗಳಲ್ಲಿ ಫುಟ್‌ಬಾಲ್‌ ಜಗತ್ತನ್ನು ಆಳಲು ಸಜ್ಜಾಗಿರುವ ಎಂಬಾಪೆ ನಡುವಿನ ಹೋರಾಟದಿಂದಾಗಿ ಫೈನಲ್‌ ಪಂದ್ಯದ ರೋಚಕತೆ ಹೆಚ್ಚಿದೆ. ಎರಡೂ ತಂಡಗಳಲ್ಲಿ ಘಟಾನುಘಟಿ ಆಟಗಾರರು ಇದ್ದರೂ, ಎಲ್ಲರ ಚಿತ್ತ ಇವರಿಬ್ಬರ ಮೇಲೆ ನೆಟ್ಟಿದೆ.

35 ವರ್ಷದ ಮೆಸ್ಸಿ ತಮ್ಮ 18 ವರ್ಷಗಳ ವೃತ್ತಿ ಜೀವನದಲ್ಲಿ ವಿಶ್ವಕಪ್‌ ಹೊರತುಪಡಿಸಿ ಎಲ್ಲ ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಭಾನುವಾರ ಅವರು ಟ್ರೋಫಿ ಎತ್ತಿಹಿಡಿಯಬೇಕು ಎಂಬುದು ಅಭಿಮಾನಿಗಳ ಬಯಕೆಯಾಗಿದೆ.

ಎಂಬಾಪೆ ಅಲ್ಲದೆ ಒಲಿವಿಯೆರ್‌ ಜಿರೋಡ್, ಆಂಟೋನ್‌ ಗ್ರೀಸ್‌ಮನ್‌ ಮತ್ತು ಉಸ್ಮಾನ್‌ ದೆಂಬೆಲೆ ಅವರು ಫ್ರಾನ್ಸ್‌ ಪರ ಮಿಂಚುವ ವಿಶ್ವಾಸದಲ್ಲಿದ್ದರೆ, ಅರ್ಜೆಂಟೀನಾ ತಂಡ ಜೂಲಿಯನ್‌ ಅಲ್ವರೆಜ್‌, ಗೋಲ್‌ಕೀಪರ್‌ ಎಮಿಲಿಯಾನೊ ಮಾರ್ಟಿನೆಜ್‌ ಹಾಗೂ ಎಂಜೊ ಫೆರ್ನಾಂಡಿಜ್‌ ಅವರ ಮೇಲೂ ಭರವಸೆ ಇಟ್ಟಿದೆ.

ಫ್ರಾನ್ಸ್‌ ಗೆದ್ದರೆ ಎಂಬಾಪೆ, ಬ್ರೆಜಿಲ್‌ನ ದಿಗ್ಗಜ ಆಟಗಾರ ಪೆಲೆ ಅವರ ದಾಖಲೆ ಸರಿಗಟ್ಟಲಿದ್ದಾರೆ. ಪೆಲೆ ತಾವಾಡಿದ ಮೊದಲ ಎರಡು ವಿಶ್ವಕಪ್‌ ಟೂರ್ನಿಗಳಲ್ಲಿ ಟ್ರೋಫಿ ಜಯಿಸಿದ್ದರು. 2018 ರಲ್ಲಿ ಫ್ರಾನ್ಸ್‌ ಗೆದ್ದಾಗ ಎಂಬಾಪೆ ತಂಡದಲ್ಲಿದ್ದರು. ಆಗ ಅವರಿಗೆ 19 ವರ್ಷ ಆಗಿತ್ತು. ಇದೀಗ ತಮ್ಮ 23ನೇ ವಯಸ್ಸಿನಲ್ಲಿ 2ನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ಧಾರೆ.

1978 ಮತ್ತು 1986 ರಲ್ಲಿ ಚಾಂಪಿಯನ್‌ ಆಗಿದ್ದ ಅರ್ಜೆಂಟೀನಾ 2014ರ ಫೈನಲ್‌ನಲ್ಲಿ ಜರ್ಮನಿ ಎದುರು ಮಣಿದಿತ್ತು. 36 ವರ್ಷಗಳ ಬಳಿಕ ಮತ್ತೆ ಟ್ರೋಫಿಯ ಸನಿಹ ಬಂದು ನಿಂತಿದೆ. 1998 ಮತ್ತು 2018 ರಲ್ಲಿ ಪ್ರಶಸ್ತಿ ಜಯಿಸಿದ್ದ ಫ್ರಾನ್ಸ್‌ ಕೂಡಾ ಮೂರನೇ ಕಿರೀಟವನ್ನು ಎದುರು ನೋಡುತ್ತಿದೆ.

ಇಟಲಿ (1938) ಮತ್ತು ಬ್ರೆಜಿಲ್‌ (1962) ತಂಡಗಳನ್ನು ಹೊರತುಪಡಿಸಿ ಯಾವುದೇ ತಂಡವೂ ಸತತ ಎರಡು ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿಲ್ಲ. ಫ್ರಾನ್ಸ್‌ ಗೆದ್ದರೆ ಈ ತಂಡಗಳ ಸಾಲಿಗೆ ಸೇರಲಿದೆ.

ಪ್ರಮುಖ ಅಂಶಗಳು

lಆರನೇ ಬಾರಿ ವಿಶ್ವಕಪ್ ಫೈನಲ್‌ ಆಡುತ್ತಿರುವ ಅರ್ಜೆಂಟೀನಾ

lಕತಾರ್‌ನಲ್ಲಿ ಅರ್ಜೆಂಟೀನಾ ತಂಡ ಇದುವರೆಗೆ ಗಳಿಸಿದ ಒಟ್ಟು ಗೋಲುಗಳು 12. ವಿಶ್ವಕಪ್ ಟೂರ್ನಿಯಲ್ಲಿ ಆ ತಂಡಕ್ಕೆ ಇದು ಎರಡನೇ ಗರಿಷ್ಠ ಗೋಲು ಗಳಿಕೆ. 1986ರ ಆವೃತ್ತಿಯಲ್ಲಿ 14 ಗೋಲು ಗಳಿಸಿತ್ತು.

lಎರಡನೇ ವಿಶ್ವಕಪ್ ಫೈನಲ್ ಆಡಲಿರುವ ಮೆಸ್ಸಿ. 2014ರಲ್ಲಿ ಆಡಿದಾಗ ಅವರ ತಂಡವು ಜರ್ಮನಿ ಎದುರು ಸೋತಿತ್ತು.

ಫ್ರಾನ್ಸ್‌ ಆಟಗಾರರಿಗೆ ಅನಾರೋಗ್ಯ

ದೋಹಾ (ಎಎಫ್‌ಪಿ): ಫೈನಲ್‌ ಪಂದ್ಯಕ್ಕೆ ಸಜ್ಜಾಗಿರುವ ಫ್ರಾನ್ಸ್‌ ತಂಡದ ಕೆಲವು ಆಟಗಾರರು ವೈರಾಣು ಸೋಂಕಿಗೆ ತುತ್ತಾಗಿರುವುದು ಕೋಚ್‌ ದಿದಿಯೆರ್‌ ದೆಶಾಂಪ್‌ ಅವರಿಗೆ ಚಿಂತೆ ಉಂಟುಮಾಡಿದೆ.

ಡಿಫೆಂಡರ್‌ಗಳಾದ ರಫೇಲ್‌ ವರೇನ್‌, ಇಬ್ರಾಹಿಮಾ ಕೊನಾತೆ ಮತ್ತು ಕಿಂಗ್ಸ್‌ಲೆ ಕೊಮನ್‌ ಅವರು ಅನಾರೋಗ್ಯದ ಕಾರಣ ಶುಕ್ರವಾರ ಅಭ್ಯಾಸದಲ್ಲಿ ಪಾಲ್ಗೊಂಡಿರಲಿಲ್ಲ. ಅಡ್ರಿಯಾನ್‌ ರಬಿಯೊ ಮತ್ತು ಡಯೊ ಉಪಮೆಕಾನೊ ಅವರು ಅನಾರೋಗ್ಯದಿಂದಾಗಿ ಸೆಮಿಫೈನಲ್‌ ಪಂದ್ಯದಲ್ಲಿ ಆಡಿರಲಿಲ್ಲ. ಇನ್ನಷ್ಟು ಆಟಗಾರರಲ್ಲಿ ಸೋಂಕು ಕಾಣಿಸಿಕೊಂಡಿರುವುದು ತಂಡಕ್ಕೆ ಹಿನ್ನಡೆ ಉಂಟುಮಾಡಿದೆ. ವೈರಾಣು ಸೋಂಕಿಗೆ ತುತ್ತಾದ ಆಟಗಾರರು ಜ್ವರ, ಹೊಟ್ಟೆನೋವು ಮತ್ತು ತಲೆನೋವಿನಿಂದ ಬಳಲುತ್ತಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ.

ಪ್ರೇಕ್ಷಕರ ಭಯವಿಲ್ಲ: ದೆಶಾಂಪ್‌

ದೋಹಾ (ಎಎಫ್‌ಪಿ): ಫೈನಲ್ ಪಂದ್ಯ ವೀಕ್ಷಿಸಲು ಲುಸೈಲ್‌ ಕ್ರೀಡಾಂಗಣದಲ್ಲಿ ಅರ್ಜೆಂಟೀನಾದ ಹೆಚ್ಚಿನ ಪ್ರೇಕ್ಷಕರು ಸೇರಲಿರುವುದು ತಮ್ಮ ಆಟಗಾರರ ಪ್ರದರ್ಶನದ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಫ್ರಾನ್ಸ್‌ ತಂಡದ ಕೋಚ್‌ ದಿದಿಯೆರ್‌ ದೆಶಾಂಪ್‌ ಹೇಳಿದ್ದಾರೆ.

ಮೆಸ್ಸಿ ಬಳಗವನ್ನು ಬೆಂಬಲಿಸಲು ಅರ್ಜೆಂಟೀನಾದಿಂದ 40 ಸಾವಿರ ಮಂದಿ ದೋಹಾಕ್ಕೆ ಬಂದಿದ್ದಾರೆ. ಇಲ್ಲಿಗೆ ಬಂದಿರುವ ಫ್ರಾನ್ಸ್‌ ಬೆಂಬಲಿಗರ ಸಂಖ್ಯೆ 6,000 ದಷ್ಟಿದೆ.

‘ಕ್ರೀಡಾಂಗಣದಲ್ಲಿ ಉತ್ಸವದ ವಾತಾವರಣ ಇರಲಿದೆ. ಅರ್ಜೆಂಟೀನಾದ ಬೆಂಬಲಿಗರೇ ತುಂಬಿರಲಿದ್ದಾರೆ. ಅದರಿಂದ ನಮಗೆ ಚಿಂತೆಯಿಲ್ಲ. ನಮ್ಮ ಎದುರಾಳಿಗಳು ಅಂಗಳದಲ್ಲಿರುವರೇ ಹೊರತು, ಗ್ಯಾಲರಿಗಳಲ್ಲಿ ಅಲ್ಲ’ ಎಂದು ದೆಶಾಂಪ್‌ ಹೇಳಿದ್ದಾರೆ.

lಆರನೇ ಬಾರಿ ವಿಶ್ವಕಪ್ ಫೈನಲ್‌ ಆಡುತ್ತಿರುವ ಅರ್ಜೆಂಟೀನಾ

lಎರಡನೇ ವಿಶ್ವಕಪ್ ಫೈನಲ್ ಆಡಲಿರುವ ಮೆಸ್ಸಿ. 2014ರಲ್ಲಿ ಆಡಿದಾಗ ಅವರ ತಂಡವು ಜರ್ಮನಿ ಎದುರು ಸೋತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT