ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಎಫ್‌ಸಿಯೇ ‘ಮೊದಲ’ ಗುರಿ

ಇಂಡಿಯನ್ ಸೂಪರ್ ಲೀಗ್‌: ಎಫ್‌ಸಿ ಗೋವಾದ ‘ಮಾಧ್ಯಮ ದಿನ’ದಲ್ಲಿ ಕೋಚ್ ಜುವಾನ್ ಫೆರಾಂಡೊ ಅಭಿಪ್ರಾಯ
Last Updated 6 ನವೆಂಬರ್ 2020, 15:28 IST
ಅಕ್ಷರ ಗಾತ್ರ

ಬೆಂಗಳೂರು: ಮೊದಲ ಹಣಾಹಣಿಯಲ್ಲಿ ಸೆಣಸಲಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡದ ಎದುರಿನ ಪಂದ್ಯದ ಮೇಲೆಯೇ ಸದ್ಯ ಹೆಚ್ಚು ಗಮನ ಇರಿಸಿದ್ದು ಒಂದೊಂದೇ ಪಂದ್ಯ ಗೆದ್ದು ಮುಂದೆ ಸಾಗುವುದು ತಂಡದ ಗುರಿ’ ಎಂದು ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಆಡುವ ಎಫ್‌ಸಿ ಗೋವಾದ ಕೋಚ್ ಜುವಾನ್ ಫೆರಾಂಡೊ ತಿಳಿಸಿದರು.

ಕ್ಲಬ್‌ನ ‘ಮಾಧ್ಯಮ ದಿನ’ದ ಅಂಗವಾಗಿ ಗುರುವಾರ ಆನ್‌ಲೈನ್ ಮೂಲಕ ನಡೆದ ಸಂವಾದದಲ್ಲಿ ಮಾತನಾಡಿದ ಅವರು ಬಿಎಫ್‌ಸಿ ಎದುರಿನ ಪಂದ್ಯದ ನಂತರ ಮೂರೇ ದಿನಗಳಲ್ಲಿ ಮುಂಬೈ ಸಿಟಿ ಎಫ್‌ಸಿ ವಿರುದ್ಧ ಗೋವಾ ಸೆಣಸಲಿದೆ. ಆದ್ದರಿಂದ ಮೊದಲ ಪಂದ್ಯ ಮುಗಿದ ತಕ್ಷಣ ಮುಂಬೈ ವಿರುದ್ಧ ಹೆಣೆಯಬೇಕಾದ ತಂತ್ರಗಳ ಬಗ್ಗೆ ಯೋಚಿಸಲಾಗುವುದು ಎಂದರು.

‘ಕೋವಿಡ್‌–19ರಿಂದಾಗಿ ಪರಿಸ್ಥಿತಿ ಕಠಿಣವಾಗಿದೆ. ಆಟಗಾರರನ್ನು, ವಿಶೇಷವಾಗಿ ಹೊಸಬರನ್ನು ಪಂದ್ಯಗಳಿಗೆ ಸಜ್ಜುಗೊಳಿಸುವುದು ಸವಾಲೇ ಸರಿ. ಆದರೆ ದೈಹಿಕ ಫಿಟ್‌ನೆಸ್ ಮತ್ತು ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಅವರಿಗೆ ತಂಡದ ಎಲ್ಲ ನೆರವು ಸಿಬ್ಬಂದಿ ಸಹಾಯ ಮಾಡುತ್ತಿದ್ದಾರೆ. ಸಂಘಟಿತ ಶ್ರಮದ ಮೂಲಕ ತಂಡ ಈ ಬಾರಿ ಯಶಸ್ಸಿನತ್ತ ಮುನ್ನಡೆಯುವ ವಿಶ್ವಾಸವಿದೆ. ನಮ್ಮದು ವೃತ್ತಿಪರ ತಂಡವಾಗಿದ್ದು ಎಲ್ಲ ಪರಿಸ್ಥಿತಿಗೂ ಒಗ್ಗಿಕೊಳ್ಳುವ ಸಾಮರ್ಥ್ಯ ಆಟಗಾರರಿಗೆ ಇದೆ. ಗೆದ್ದೇ ಗೆಲ್ಲುತ್ತೇವೆ ಎಂಬ ಘೋಷಣೆಯೊಂದಿಗೆ ಕಣಕ್ಕೆ ಇಳಯಲಿದ್ದೇವೆ‘ ಎಂದು ಜುವಾನ್ ಹೇಳಿದರು.

’ಈ ಬಾರಿ ಒಂದೇ ರಾಜ್ಯದಲ್ಲಿ ಪಂದ್ಯಗಳು ನಡೆಯಲಿವೆ. ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲು ಇದು ಸಹಕಾರಿಯಾಗಲಿದೆ. ಖಾಲಿ ಕ್ರೀಡಾಂಗಣಗಳಲ್ಲಿ ಆಡಬೇಕು ಎಂದು ಪರಿಸ್ಥಿತಿ ನಿರ್ಮಾಣವಾಗಿರುವುದು ಬೇಸರದ ವಿಷಯ. ಆದರೆ ಕೊನೆಗೂ ಟೂರ್ನಿ ಆರಂಭವಾಗುತ್ತಿರುವುದು ಸಂತಸ ತಂದಿದೆ‘ ಎಂದು ಅವರು ಅಭಿಪ್ರಾಯಪಟ್ಟರು.

ತಾಂತ್ರಿಕ ಅಂಶಗಳಿಗೆ ಒತ್ತು

‘ತಾಂತ್ರಿಕ ಅಂಶಗಳ ಕಡೆಗೆ ಹೆಚ್ಚು ಗಮನ ಕೊಟ್ಟು ತಂಡವನ್ನು ಕಳೆದ ಬಾರಿಗಿಂತ ಹೆಚ್ಚು ಬಲಪಡಿಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ಅಭ್ಯಾಸದಲ್ಲೂ ಬದಲಾವಣೆ ಮಾಡಲಾಗಿದ್ದು ಆಟಗಾರರು ಕಠಿಣ ಪರಿಶ್ರಮಪಡುತ್ತಿದ್ದಾರೆ. ವಿದೇಶಿ ಆಟಗಾರರು ತಂಡಕ್ಕೆ ಹೆಚ್ಚು ಶಕ್ತಿ ತುಂಬಲಿದ್ದಾರೆ’ ಎಂದು ನಾಯಕ ಎಡು ಬೇಡಿಯಾ ಹೇಳಿದರು.

’ಬೆಂಗಳೂರು ಎಫ್‌ಸಿಯಂಥ ಕೆಲವು ತಂಡಗಳು ತಾಂತ್ರಿಕವಾಗಿ ಬಲಿಷ್ಠವಾಗಿವೆ. ಅಂಥ ತಂಡಗಳು ಹಿಂದಿನ ಆವೃತ್ತಿಯಲ್ಲಿ ಮೇಲುಗೈ ಸಾಧಿಸಿದ ಉದಾಹರಣೆಗಳು ಇವೆ‘ ಎಂದು ಅವರು ಅಭಿಪ್ರಾಯಪಟ್ಟರು.

ಪತ್ನಿ ಮತ್ತು ಮಗುವಿನೊಂದಿಗೆ ಬಂದಿರುವ ಫಾರ್ವರ್ಡ್ ಆಟಗಾರ ಇಗರ್ ಅಂಗುಲೊ ’ಬಯೊ ಬಬಲ್‌ನಲ್ಲಿ ತಿಂಗಳುಗಟ್ಟಲೆ ಕಳೆಯುವ ಸಂದರ್ಭದಲ್ಲಿ ಕುಟುಂಬ ಜೊತೆಯಲ್ಲಿ ಇದ್ದರೆ ನೈತಿನ ಬಲ ಇರುತ್ತದೆ‘ ಎಂದರು. ‘ಪ್ರೇಕ್ಷಕರಿಲ್ಲದ ಅಂಗಣದಲ್ಲಿ ಆಡುವುದು ಮತ್ತು ಹೋಟೆಲ್ ಕೊಠಡಿಯಲ್ಲೇ ಕಳೆಯುವುದು ಕಷ್ಟ. ಆದರೆ ಎಲ್ಲದಕ್ಕೂ ಹೊಂದಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಇದೆ‘ ಎಂದು ಮಿಡ್‌ಫೀಲ್ಡರ್ ಲೆನಿ ರಾಡ್ರಿಗಸ್ ಹೇಳಿದರು. ಮಿಡ್‌ಫೀಲ್ಡರ್ ಬ್ರೆಂಡನ್ ಫರ್ನಾಂಡಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT