ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌: ಸೋಲಿನಿಂದ ಪಾರಾದ ಮುಂಬೈ ಸಿಟಿ

7
ಕೇರಳ ಪರ ಗೋಲು ದಾಖಲಿಸಿದ ಹಾಲಿಚರಣ್‌

ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌: ಸೋಲಿನಿಂದ ಪಾರಾದ ಮುಂಬೈ ಸಿಟಿ

Published:
Updated:
Deccan Herald

ಕೊಚ್ಚಿ: ಹೆಚ್ಚುವರಿ ಅವಧಿಯಲ್ಲಿ ಮಿಂಚಿನ ಆಟ ಆಡಿದ ಪ್ರಾಂಜಲ್‌ ಭೂಮಿಜ್, ಮುಂಬೈ ಸಿಟಿ ಎಫ್‌ಸಿ ತಂಡವನ್ನು ಸೋಲಿನಿಂದ ಪಾರು ಮಾಡಿದರು.

ಪ್ರಾಂಜಲ್‌ ಕಾಲ್ಚಳಕದಲ್ಲಿ ಅರಳಿದ ಗೋಲಿನ ನೆರವಿನಿಂದ ಮುಂಬೈ ತಂಡ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಕೇರಳ ಬ್ಲಾಸ್ಟರ್ಸ್‌ ಎದುರಿನ ಹೋರಾಟದಲ್ಲಿ 1–1 ಗೋಲುಗಳಿಂದ ಡ್ರಾ ಸಾಧಿಸಿತು.

ಜವಾಹರ ಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೇರಳ ತಂಡ ಆರಂಭದಿಂದಲೇ ಚುರುಕಿನ ಆಟ ಆಡಿತು. ಮುಂಬೈ ಸಿಟಿ ಕೂಡಾ ಮಿಂಚಿತು. ಹೀಗಾಗಿ ಮೊದಲ 20 ನಿಮಿಷಗಳ ಆಟ ಸಮಬಲದಿಂದ ಕೂಡಿತ್ತು.

ತವರಿನ ಅಭಿಮಾನಿಗಳ ಎದುರು ಆಡಿದ ‘ದೇವರ ನಾಡಿನ’ ತಂಡ ಬಳಿಕ ಮೇಲುಗೈ ಸಾಧಿಸಿತು. 24ನೇ ನಿಮಿಷದಲ್ಲಿ ಚೆಂಡನ್ನು ಡ್ರಿಬಲ್‌ ಮಾಡುತ್ತಾ ಆವರಣ ಪ್ರವೇಶಿಸಿದ ಹಾಲಿಚರಣ್‌ ನರ್ಜರಿ, ಮುಂಬೈ ತಂಡದ ರಕ್ಷಣಾ ವಿಭಾಗದ ಆಟಗಾರರ ಕಣ್ತಪ್ಪಿಸಿ ಚೆಂಡನ್ನು ಗುರಿ ಮುಟ್ಟಿಸಿದರು.

ನಂತರ ಮುಂಬೈ ತಂಡ ಸಮಬಲದ ಗೋಲು ದಾಖಲಿಸಲು ನಡೆಸಿದ ಪ್ರಯತ್ನಗಳಿಗೆ ಯಶಸ್ಸು ಸಿಗಲಿಲ್ಲ. 1–0ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ಬ್ಲಾಸ್ಟರ್ಸ್‌ ದ್ವಿತೀಯಾರ್ಧದಲ್ಲೂ ಪ್ರಾಬಲ್ಯ ಮೆರೆಯಿತು. ಮುಂಬೈ ಕೂಡಾ ಕೆಚ್ಚೆದೆಯಿಂದ ಹೋರಾಡಿತು. ನಿಗದಿತ ಅವಧಿಯ (90 ನಿಮಿಷ) ಆಟ ಮುಗಿದಾಗ ಕೇರಳ ಮುನ್ನಡೆ ಕಾಯ್ದುಕೊಂಡಿತ್ತು. ಹೆಚ್ಚುವರಿ ಅವಧಿಯಲ್ಲಿ ಮುಂಬೈ ತಂಡದ ಪ್ರಾಂಜಲ್‌ ಮೋಡಿ ಮಾಡಿದರು.

ಸಹ ಆಟಗಾರ ತಮ್ಮತ್ತ ಒದ್ದು ಕಳುಹಿಸಿದ ಚೆಂಡಿನ ಮೇಲೆ ಚುರುಕಾಗಿ ನಿಯಂತ್ರಣ ಸಾಧಿಸಿದ ಅವರು ಅದನ್ನು ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ತಲುಪಿಸಿ ಸಂಭ್ರಮಿಸಿದರು. ಹೀಗಾಗಿ ಆತಿಥೇಯರ ಜಯದ ಕನಸು ಭಗ್ನಗೊಂಡಿತು. ತವರಿನ ತಂಡದ ಗೆಲುವನ್ನು ಕಣ್ತುಂಬಿಕೊಳ್ಳಲು ಕಾದಿದ್ದ ಅಭಿಮಾನಿಗಳೂ ನಿರಾಸೆಗೊಂಡರು.

ಚೆನ್ನೈಯಿನ್‌–ಗೋವಾ ಹಣಾಹಣಿ:

ಚೆನ್ನೈ: ಮೊದಲ ಪಂದ್ಯದಲ್ಲಿ ನಿರಾಸೆ ಕಂಡಿದ್ದ ಚೆನ್ನೈಯಿನ್‌ ಎಫ್‌ಸಿ ತಂಡ ಶನಿವಾರದ ಪಂದ್ಯದಲ್ಲಿ ಎಫ್‌ಸಿ ಗೋವಾವನ್ನು ಎದುರಿಸಲಿದೆ.

ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಆದರೆ ಎರಡು ದಿನಗಳಿಂದ ಸತತ ಮಳೆ ಸುರಿಯುತ್ತಿದ್ದು ಶನಿವಾರವೂ ಮುಂದುವರಿದರೆ ಪಂದ್ಯಕ್ಕೆ ಅಡ್ಡಿಯಾಗಲಿದೆ.

ಹಾಲಿ ಚಾಂಪಿಯನ್‌ ಚೆನ್ನೈಯಿನ್‌, ಬೆಂಗಳೂರಿನಲ್ಲಿ ನಡೆದಿದ್ದ ತನ್ನ ಮೊದಲ ಪಂದ್ಯದಲ್ಲಿ ಬಿಎಫ್‌ಸಿ ಎದುರು 0–1ರಿಂದ ಸೋತಿತ್ತು. ಪಂದ್ಯದಲ್ಲಿ ಒಂದು ಗೋಲು ಕೂಡ ಗಳಿಸಲು ಸಾಧ್ಯವಾಗದೇ ಇದ್ದದ್ದು ತಂಡದ ನೈತಿಕ ಬಲವನ್ನು ಕುಗ್ಗಿಸಿದೆ. ಹೀಗಾಗಿ ತವರಿನಲ್ಲಿ ಲಯಕ್ಕೆ ಮರಳಲು ಶ್ರಮಿಸಲಿದೆ.

ಗೋವಾ ಎಫ್‌ಸಿ ತನ್ನ ಮೊದಲ ಪಂದ್ಯದಲ್ಲಿ ನಾರ್ತ್–ಈಸ್ಟ್‌ ಯುನೈಟೆಡ್‌ ಜೊತೆ 2–2ರಿಂದ ಡ್ರಾ ಮಾಡಿಕೊಂಡಿತ್ತು. ಹೀಗಾಗಿ ಈ ತಂಡ ಕೂಡ ಮೊದಲ ಜಯದ ನಿರೀಕ್ಷೆಯಲ್ಲಿದೆ.

ಪಂದ್ಯ ಆರಂಭ: ಸಂಜೆ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !