ಶೀಘ್ರವೇ ಕೋಚ್‌ ನೇಮಿಸುತ್ತೇವೆ: ಪ್ರಫುಲ್‌ ಪಟೇಲ್‌

ಬುಧವಾರ, ಏಪ್ರಿಲ್ 24, 2019
28 °C
ಎಐಎ‍ಫ್‌ಎಫ್‌ ಅಧ್ಯಕ್ಷ ಹೇಳಿಕೆ

ಶೀಘ್ರವೇ ಕೋಚ್‌ ನೇಮಿಸುತ್ತೇವೆ: ಪ್ರಫುಲ್‌ ಪಟೇಲ್‌

Published:
Updated:
Prajavani

ನವದೆಹಲಿ: ‘ಭಾರತ ತಂಡದ ಮುಖ್ಯ ಕೋಚ್‌ ಹುದ್ದೆಗೆ ಶೀಘ್ರವೇ ಅರ್ಹ ವ್ಯಕ್ತಿಯನ್ನು ನೇಮಿಸುತ್ತೇವೆ’ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ (ಎಐಎಫ್‌ಎಫ್‌) ಅಧ್ಯಕ್ಷ ಪ್ರಫುಲ್‌ ಪಟೇಲ್‌ ತಿಳಿಸಿದ್ದಾರೆ.

‘ನಾವು ಕೆಲ ಮಾನದಂಡಗಳನ್ನು ನಿಗದಿ ಮಾಡಿದ್ದೇವೆ.  ಅವುಗಳಿಗೆ ಹೊಂದಿಕೆಯಾಗುವಂತಹ ವ್ಯಕ್ತಿಗಳ ಹುಡುಕಾಟದಲ್ಲಿದ್ದೇವೆ. ಅರ್ಹ ಮತ್ತು ಅನುಭವಿಗಳು ಸಿಕ್ಕರೆ ಈ ತಿಂಗಳ ಅಂತ್ಯದೊಳಗೆ ಹೊಸ ಕೋಚ್‌ ನೇಮಿಸುತ್ತೇವೆ’ ಎಂದು ಪಟೇಲ್‌ ಹೇಳಿದ್ದಾರೆ.

62 ವರ್ಷದ ಪ್ರಫುಲ್ ಅವರು ಶನಿವಾರ ಫಿಫಾ ಕೌನ್ಸಿಲ್‌ನ ಸದಸ್ಯರಾಗಿ ಆಯ್ಕೆಯಾಗಿದ್ದರು. 29ನೇ ಏಷ್ಯನ್‌ ಫುಟ್‌ಬಾಲ್‌ ಕಾನ್ಫೆಡರೇಷನ್‌ ಕಾಂಗ್ರೆಸ್‌ ವೇಳೆ ನಡೆದ ಚುನಾವಣೆಯಲ್ಲಿ 38 ಮತಗಳನ್ನು ಪಡೆದಿದ್ದರು. ಫಿಫಾ ಕೌನ್ಸಿಲ್‌ ಸದಸ್ಯರಾಗಿ ಆಯ್ಕೆಯಾದ ಭಾರತದ ಮೊದಲ ಕ್ರೀಡಾ ಆಡಳಿತಗಾರ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದರು.

ಭಾರತ ತಂಡವು ಈ ಸಲದ ಎಎಫ್‌ಸಿ ಏಷ್ಯಾಕಪ್‌ನಲ್ಲಿ ನಾಕೌಟ್‌ ಪ್ರವೇಶಿಸಲು ವಿಫಲವಾಗಿತ್ತು. ಇದರ ಹೊಣೆ ಹೊತ್ತು ಸ್ಟೀಫನ್‌ ಕಾನ್ಸ್‌ಟೆಂಟೈನ್, ಕೋಚ್‌ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾಗಿರುವ ಸ್ಥಾನಕ್ಕೆ ಒಟ್ಟು 250 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ವಾರದೊಳಗೆ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಿ ಅದನ್ನು ತಾಂತ್ರಿಕ ಸಮಿತಿಗೆ ಕಳುಹಿಸಿಕೊಡಲಾಗುತ್ತದೆ. ಈ ಸಮಿತಿಯು ಸಂದರ್ಶನ ನಡೆಸಿ ಅಂತಿಮ ಪಟ್ಟಿಯನ್ನು ಕಾರ್ಯಕಾರಿ ಸಮಿತಿಗೆ ಸಲ್ಲಿಸಲಿದೆ. ಯಾರನ್ನು ಕೋಚ್‌ ಆಗಿ ನೇಮಿಸಬೇಕು ಎಂಬುದರ ಕುರಿತು  ಕಾರ್ಯಕಾರಿ ಸಮಿತಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

ಇಟಲಿಯ ಜಿಯೊವಾನ್ನಿ ಡಿ ಬಿಯಾಸಿ, ಸ್ವೀಡನ್‌ನ ಹಾಕನ್ಸ್‌ ಎರಿಕ್ಸನ್‌, ಫ್ರಾನ್ಸ್‌ನ ರೇಮಂಡ್‌ ಡೊಮೆನೆಚ್‌ ಮತ್ತು ಇಂಗ್ಲೆಂಡ್‌ನ ಸ್ಯಾಮ್‌ ಅಲಾರ್ಡೈಸ್‌, ಅರ್ಜಿ ಸಲ್ಲಿಸಿರುವ ಪೈಕಿ ಪ್ರಮುಖರಾಗಿದ್ದಾರೆ.

ಬೆಂಗಳೂರು ಎಫ್‌ಸಿ ತಂಡದ ಮುಖ್ಯ ಕೋಚ್‌ ಅಲ್ಬರ್ಟ್‌ ರೋಕಾ ಅವರ ಹೆಸರೂ ಮುಂಚೂಣಿಯಲ್ಲಿದೆ. ರೋಕಾ ಅವರ ಮಾರ್ಗದರ್ಶನದಲ್ಲಿ ಬಿಎಫ್‌ಸಿಯು ಎಎಫ್‌ಸಿ ಕಪ್‌ (2016), ಫೆಡರೇಷನ್‌ ಕಪ್‌ (2017), ಐಎಸ್‌ಎಲ್‌ ಮತ್ತು ಸೂಪರ್‌ ಕಪ್‌ (2018) ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿತ್ತು. ಈ ಪೈಕಿ ಸುನಿಲ್‌ ಚೆಟ್ರಿ ಬಳಗ ಸೂಪರ್‌ ಕಪ್ ಮತ್ತು ಫೆಡರೇಷನ್‌ ಕಪ್‌ನಲ್ಲಿ ಪ್ರಶಸ್ತಿ ಗೆದ್ದಿತ್ತು. ಈ ಸಲದ ಐಎಸ್‌ಎಲ್‌ನಲ್ಲೂ ಬಿಎಫ್‌ಸಿ ಚಾಂಪಿಯನ್‌ ಆಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !