ಬುಧವಾರ, ಅಕ್ಟೋಬರ್ 23, 2019
20 °C

ಫುಟ್‌ಬಾಲ್‌: ಭಾರತ ಮಹಿಳಾ ತಂಡದ ಜಯಭೇರಿ

Published:
Updated:
Prajavani

ಹಾಂಕಾಂಗ್‌ (ಪಿಟಿಐ): ಭಾರತದ 17 ವರ್ಷದೊಳಗಿನವರ ಮಹಿಳಾ ಫುಟ್‌ಬಾಲ್‌ ತಂಡದವರು ಹಾಂಕಾಂಗ್‌ ಪ್ರವಾಸದ ನಾಲ್ಕನೇ ಪಂದ್ಯದಲ್ಲೂ ಜಯಭೇರಿ ಮೊಳಗಿಸಿದ್ದಾರೆ.

ಶನಿವಾರ ನಡೆದ ಹಣಾಹಣಿಯಲ್ಲಿ ಭಾರತದ ವನಿತೆಯರು 4–1 ಗೋಲುಗಳಿಂದ ಹಾಂಕಾಂಗ್‌ನ 18 ವರ್ಷದೊಳಗಿನವರ ತಂಡವನ್ನು ಪರಾಭವಗೊಳಿಸಿದರು.

ಮುಂದಿನ ವರ್ಷ ನಡೆಯುವ ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ಗೆ ಸಜ್ಜಾಗುತ್ತಿರುವ ಭಾರತ ತಂಡದವರು ನಾಲ್ಕು ಪಂದ್ಯಗಳಿಂದ ಒಟ್ಟು 18 ಗೋಲುಗಳನ್ನು ದಾಖಲಿಸಿದರು. ಎದುರಾಳಿಗಳಿಗೆ ಕೇವಲ ಮೂರು ಗೋಲುಗಳನ್ನು ಬಿಟ್ಟುಕೊಟ್ಟರು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತದ ವನಿತೆಯರು ಮೊದಲಾರ್ಧದಲ್ಲಿ ಎರಡು ಗೋಲು ದಾಖಲಿಸಿ ಮಿಂಚಿದರು. 24ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ  ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಅವೇಕಾ, ಪ್ರವಾಸಿ ಪಡೆಯ ಖಾತೆ ತೆರೆದರು. 32ನೇ ನಿಮಿಷದಲ್ಲಿ ಲಿಂಡಾ ಕಾಲ್ಚಳಕ ತೋರಿದರು.

ದ್ವಿತೀಯಾರ್ಧದ ಶುರುವಿನಲ್ಲಿ ಆತಿಥೇಯ ತಂಡಕ್ಕೆ ಪೆನಾಲ್ಟಿ ಲಭಿಸಿತು. 60ನೇ ನಿಮಿಷದಲ್ಲಿ ಸಿಕ್ಕ ಈ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಚಾನ್‌, ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿದರು.

ನಂತರ ಭಾರತವು ಇನ್ನಷ್ಟು ಆಕ್ರಮಣಕಾರಿಯಾಗಿ ಆಡಿತು. 65ನೇ ನಿಮಿಷದಲ್ಲಿ ಅಂಜು ಚೆಂಡನ್ನು ಗುರಿ ಮುಟ್ಟಿಸಿ ಪ್ರವಾಸಿ ಬಳಗದ ಮುನ್ನಡೆಯನ್ನು 3–1ಕ್ಕೆ ಹೆಚ್ಚಿಸಿದರು. 77ನೇ ನಿಮಿಷದಲ್ಲಿ ಕಿರಣಾ ಗೋಲು ಗಳಿಸಿ ಭಾರತದ ಸಂಭ್ರಮಕ್ಕೆ ಕಾರಣರಾದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)