ಸೋಮವಾರ, ಅಕ್ಟೋಬರ್ 26, 2020
28 °C

ಫುಟ್‌ಬಾಲ್‌ ಆಟಗಾರ ಅನ್ವರ್‌ ಅಲಿ ಬಾಳಲ್ಲಿ ಆಶಾಕಿರಣ

ಬಸವರಾಜ ದಳವಾಯಿ Updated:

ಅಕ್ಷರ ಗಾತ್ರ : | |

Prajavani

ಹೈಪರ್‌ಟ್ರೋಫಿಕ್‌ ಕಾರ್ಡಿಯೊಮಯೋಪಥಿ ಎಂಬ ಅಪರೂಪದ ಹೃದ್ರೋಗ ಇದೆ ಎಂಬ ಕಾರಣಕ್ಕೆ ವೃತ್ತಿಜೀವನ ಮುಗಿದೇಹೋಯಿತು ಎನ್ನುವ ಆತಂಕದಲ್ಲಿದ್ದ ಫುಟ್‌ಬಾಲ್‌ ಜೂನಿಯರ್‌ ತಂಡದ ಆಟಗಾರ ಅನ್ವರ್‌ ಅಲಿಯ ಬದುಕಿನಲ್ಲಿ ಈಗ ಭರವಸೆಯ ಬೆಳಕು ಮೂಡಿದೆ. ಸ್ಪರ್ಧಾತ್ಮಕ ಫುಟ್‌ಬಾಲ್‌ಗೆ ಮರಳುವ ಕ್ಷಣಕ್ಕಾಗಿ ಅವರು ಕಾಯುತ್ತಿದ್ದಾರೆ.

2017ರಲ್ಲಿ ನಡೆದ ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದರು ಅಲಿ. ಹೃದಯದ ಸಮಸ್ಯೆಗೆ ಒಳಗಾಗಿದ್ದ ಕಾರಣ ಕಣಕ್ಕೆ ಇಳಿಯದಂತೆ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್) ಅವರಿಗೆ‌ ಸೂಚಿಸಿದೆ. ಆಡಿದರೆ ಅವರ ಜೀವಕ್ಕೆ ಅಪಾಯವಿದೆ ಎಂದು ಎಐಎಫ್‌ಎಫ್‌ ಹಾಗೂ ಏಷ್ಯನ್‌ ಫುಟ್‌ಬಾಲ್‌ ಕಾನ್ಫೆಡರೇಷನ್‌ನ ವೈದ್ಯಕೀಯ ಸಮಿತಿಗಳು ಸೆಪ್ಟೆಂಬರ್‌ನಲ್ಲಿ ಎಚ್ಚರಿಕೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಅಲಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು. ಹೃದಯದ ಸಮಸ್ಯೆ ಕುರಿತು ವೈದ್ಯಕೀಯ ತಜ್ಞರ ಸಮಿತಿ ತೀರ್ಮಾನ ಪ್ರಕಟಿಸುವವರೆಗೆ ಅಲಿ ಅವರಿಗೆ ಅವರ ತಂಡವಾದ ಮೊಹಮ್ಮಡನ್‌ ಸ್ಪೋರ್ಟಿಂಗ್‌ ಕ್ಲಬ್‌ನಲ್ಲಿ ತರಬೇತಿ ಪಡೆಯಲು ಅವಕಾಶ ಮಾಡಿಕೊಡುವಂತೆ ನ್ಯಾಯಾಲಯ‌ ಎಐಎಫ್‌ಎಫ್‌ಗೆ ಸೂಚಿಸಿತ್ತು.

ಅನ್ವರ್‌ ಅಲಿ ಸ್ಪರ್ಧಾತ್ಮಕ ಟೂರ್ನಿಗಳಲ್ಲಿ ಆಡಬಹುದು ಎಂದು ಇಂಗ್ಲೆಂಡ್‌ನ ಫುಟ್‌ಬಾಲ್‌ ಸಂಸ್ಥೆಯ (ಎಫ್‌ಎ) ಕಾರ್ಡಿಯಾಲಜಿ ಒಕ್ಕೂಟದ ತಂಡವು ಅಭಿಪ್ರಾಯಪಟ್ಟಿದೆ. ಪಂಜಾಬ್‌ನ 20 ವರ್ಷದ ಅಲಿ ಭಾನುವಾರ ನಡೆದ ಎಐಎಫ್‌ಎಫ್‌ನ ವೈದ್ಯಕೀಯ ಸಮಿತಿಯ ಸಭೆಗೆ ಹಾಜರಾಗಿದ್ದರು. ಎಫ್‌ಎ ಕಾರ್ಡಿಯಾಲಜಿ ಒಕ್ಕೂಟ ತಂಡದ ಮುಖ್ಯಸ್ಥ ಸಂಜಯ್‌ ಶರ್ಮಾ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿ, ತಮ್ಮ ಅಭಿಪ್ರಾಯವನ್ನು ಸಮಿತಿಯ ಮುಂದಿಟ್ಟಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿ ಮುಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಎಐಎಫ್‌ಎಫ್‌ ವೈದ್ಯಕೀಯ ಸಮಿತಿ ಹೇಳಿದೆ.

ಲಂಡನ್‌ ಮ್ಯಾರಥಾನ್‌ನ ಮುಖ್ಯ ವೈದ್ಯಕೀಯ ನಿರ್ದೇಶಕರಾಗಿರುವ ಸಂಜಯ್‌ ಶರ್ಮಾ, 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಮುಖ್ಯ ಹೃದ್ರೋಗ ತಜ್ಞರಾಗಿಯೂ ಕೆಲಸ ಮಾಡಿದ್ದರು.

'ಅಲಿ ಅವರ ಹೃದ್ರೋಗ ಸ್ಥಿತಿ ಸಂಪೂರ್ಣ ಲಕ್ಷಣರಹಿತವಾಗಿದೆ. ಹೀಗಾಗಿ ಅವರು ಫುಟ್‌ಬಾಲ್‌ ಆಡಬಹುದು ಎಂದು ಶರ್ಮಾ ಹೇಳಿದ್ದಾರೆ‘ ಎಂದು ಮಿನರ್ವಾ ಪಂಜಾಬ್‌ ಫುಟ್‌ಬಾಲ್ ಅಕಾಡೆಮಿ ಉಲ್ಲೇಖಿಸಿದೆ. ಇದೇ ಅಕಾಡೆಮಿಯ ಮೂಲಕ ಅಲಿ ವೃತ್ತಿಜೀವನ ಆರಂಭಿಸಿದ್ದರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು