ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆ’

ಚುನಾವಣೆ ಗುಂಗಿನಿಂದ ಹೊರಬರದ ಅಧಿಕಾರಿಗಳು: ಟೀಕೆ
Last Updated 30 ಮೇ 2018, 10:48 IST
ಅಕ್ಷರ ಗಾತ್ರ

ಕನಕಪುರ: ಸರ್ಕಾರಿ ಇಲಾಖೆಗಳಲ್ಲಿ ಯಾವ ಕೆಲಸಗಳೂ ಆಗುತ್ತಿಲ್ಲ. ತಾಲ್ಲೂಕಿನಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ಕುಸಿದಿದೆ ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚೀಲೂರು ಮುನಿರಾಜು ಆರೋಪಿಸಿದರು.

ನಗರದ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ನಡೆಸಿದ ರೈತ ಸಂಘದ ತಿಂಗಳ ಸಭೆಯಲ್ಲಿ ಅವರು ಮಾತನಾಡಿದರು. ಕಂದಾಯ ಇಲಾಖೆ, ತಾಲ್ಲೂಕು ಪಂಚಾಯಿತಿ, ಕೃಷಿ ಮತ್ತು ತೋಟಗಾರಿಕೆ, ರೇಷ್ಮೆ ಇಲಾಖೆಗಳಲ್ಲಿ ರೈತರ ಯಾವ ಕೆಲಸಗಳೂ ಆಗುತ್ತಿಲ್ಲ, ಕಡತಗಳು ಕಚೇರಿಯಲ್ಲೇ ದೂಳು ಹಿಡಿಯುತ್ತಿವೆ ಎಂದು ದೂರಿದರು.

ಚುನಾವಣೆ ಮುಂಚೆ ಚುನಾವಣೆ ಸಂಬಂಧ ಕೆಲಸ ಮಾಡುತ್ತಿದ್ದ ಅಧಿಕಾರಿಗಳು ನಂತರದ ದಿನಗಳಲ್ಲಿ ಚುನಾವಣೆಯ ಕೆಲಸ ಮಾಡಿ ಮುಗಿಸಿದ್ದರೂ ಇನ್ನು ಚುನಾವಣೆ ಗುಂಗಿನಿಂದ ಹೊರಬಂದಿಲ್ಲ. ಅಧಿಕಾರಿಗಳ ಬಳಿಯಿರುವ ಕಡತಗಳನ್ನು ಮುಟ್ಟಿಯೂ ನೋಡುತ್ತಿಲ್ಲ, ಕೇಳಿದರೆ ಸಬೂಬು ಉತ್ತರ ನೀಡುತ್ತಾರೆ. ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರೋಣವೆಂದರೆ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದರು.

ಸರ್ಕಾರವು ರೈತರ ಹಾಗೂ ಸಾರ್ವಜನಿಕ ಕೆಲಸಗಳನ್ನು ಪುಕ್ಕಟೆಯಾಗಿ ಮಾಡಿಕೊಡುವುದಾಗಿ ಹೇಳುತ್ತದೆ. ಆಂದೋಲನ ಕಾರ್ಯಕ್ರಮದಲ್ಲಿ ಮನೆ ಬಾಗಿಲಿಗೆ ಬಂದು ಮಾಡಿಕೊಡುವುದಾಗಿ ಭರವಸೆಗಳನ್ನು ನೀಡುತ್ತಿದೆ. ಆದರೆ ರೈತರೇ ಅರ್ಜಿಯನ್ನು ನೀಡಿ ಅಧಿಕಾರಿಗಳ ಕಚೇರಿಗಳಿಗೆ ಎಡತಾಕಿ ಲಂಚ ನೀಡಿದರೂ ಕೆಲಸಗಳು ಆಗುತ್ತಿಲ್ಲ. ಅಧಿಕಾರಿಗಳು ಜಡ್ಡುಗಟ್ಟಿದ್ದು, ವ್ಯವಸ್ಥೆಯು ತುಕ್ಕುಹಿಡಿಯುತ್ತಿದೆ ಎಂದು ಕಿಡಿಕಾರಿದರು.

ಕೆಲವು ಅಧಿಕಾರಿಗಳು ಸ್ಥಳೀಯರಾಗಿದ್ದು ಹಲವು ವರ್ಷಗಳಿಂದ ಒಂದೇ ಕಡೆ ಠಿಕಾಣಿ ಹೂಡಿದ್ದಾರೆ. ಅವರು ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಂಡು ಇಡೀ ವ್ಯವಸ್ಥೆಯನ್ನೇ ತಮ್ಮ ಹಿಡಿತದಲ್ಲಿ ಹಿಡಿದಿಟ್ಟುಕೊಂಡು ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಗಳಲ್ಲಿ ಅಕ್ರಮ ಮರಳು ಫಿಲ್ಟರ್‌ ದಂಧೆಯು ಅವ್ಯಾಯಹತವಾಗಿ ನಡೆಯುತ್ತಿದೆ. ಪೊಲೀಸ್‌ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಾಣ ಮೌನ ವಹಿಸಿದ್ದು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಅಕ್ರಮ ಮರಳು ದಂಧೆಯು ಅಧಿಕಾರಿಗಳ ಸಹಕಾರದೊಂದಿಗೆ ನಡೆಯುತ್ತಿದ್ದು ಸರ್ಕಾರ ಅಕ್ರಮ ಮರಳು ದಂಧೆಯನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿದರು.

ನೂತನವಾಗಿ ಅಧಿಕಾರಕ್ಕೆ ಬಂದಿರುವ ಕುಮಾರಸ್ವಾಮಿ ಸರ್ಕಾರವು ಜಡ್ಡುಗಟ್ಟಿರುವ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿ ರೈತರ ಕೆಲಸಗಳನ್ನು ಮಾಡಿಸಬೇಕು. ಅಕ್ರಮ ಮರಳು ದಂಧೆಯನ್ನು ನಿಯಂತ್ರಿಸಬೇಕು. ಇಲ್ಲವಾದಲ್ಲಿ ಇದರ ವಿರುದ್ದ ರೈತ ಸಂಘವು ಮುಂದಿನ ದಿನಗಳಲ್ಲಿ ಹೋರಾಟವನ್ನು ರೂಪಿಸಲಿದೆ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT