ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಷಾರ್‌ ಪತ್ನಿ ನಿಯಂತ್ರಕಿ?

Last Updated 29 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಪತ್ನಿ ಮೇನಕಾ ಅವರನ್ನು ‘ಬೆಂಗಳೂರು ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌’ನ ಪರೀಕ್ಷಾ ನಿಯಂತ್ರಕರಾಗಿ ನೇಮಕ ಮಾಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ಐಎಎಸ್‌ ಲಾಬಿ ಪ್ರಬಲವಾಗುತ್ತಿದೆ ಎಂಬ ಕಾರಣದಿಂದ ಅಸಮಾಧಾನಗೊಂಡಿರುವ ಈ ಸಂಸ್ಥೆ ನಿರ್ದೇಶಕ ಡಾ.ಆರ್‌.ಎಸ್‌.ದೇಶಪಾಂಡೆ ಅವರು ಹುದ್ದೆಯಲ್ಲಿ ಮುಂದುವರಿಯಲು ನಿರಾಕರಿಸಿದ್ದಾರೆ.

ದೇಶಪಾಂಡೆ ಅವರಿಂದ ತೆರವಾಗುವ ನಿರ್ದೇಶಕ ಹುದ್ದೆಗೆ ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎ.ಲಕ್ಷ್ಮಿನಾರಾಯಣರನ್ನು ನೇಮಕ ಮಾಡಲಾಗಿದೆ. ಇದರಿಂದಾಗಿ ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ಗೆ ವರ್ಷ ತುಂಬುವುದರೊಳಗೆ ಮೂರನೇ ನಿರ್ದೇಶಕ ನೇಮಕಗೊಂಡಂತಾಗಿದೆ.

ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಸ್ಥಾಪನೆ ಸಂಬಂಧ ಸರ್ಕಾರ ನಿರ್ಣಯ ತೆಗೆದುಕೊಂಡು ಆದೇಶ ಹೊರಡಿಸಿದ ತಕ್ಷಣವೇ ನಿವೃತ್ತ ಐಎಎಸ್ ಅಧಿಕಾರಿ ಅನೂಪ್ ಪೂಜಾರ್ ನಿರ್ದೇಶಕರಾಗಿ ನೇಮಕ ಮಾಡಲಾಗಿತ್ತು. ಎರಡು ತಿಂಗಳಲ್ಲಿ ಅವರನ್ನು ಬದಲಿಸಿ ದೇಶಪಾಂಡೆ ಅವರನ್ನು ನೇಮಕ ಮಾಡಲಾಯಿತು.

ಏತನ್ಮಧ್ಯೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಬಿ.ದ್ಯಾಬೇರಿ ಅವರು ಪರೀಕ್ಷಾ ನಿಯಂತ್ರಕರ ಹುದ್ದೆಗೆ ಮೇನಕಾ ಅವರನ್ನು ನೇಮಿಸಿದರು. ಯುಜಿಸಿ (ವಿಶ್ವವಿದ್ಯಾಲಯ ಧನ ಸಹಾಯ ಆಯೋಗ) ನಿಯಮಾವಳಿ ಅನ್ವಯ ಇಂತಹ ಹುದ್ದೆಯಲ್ಲಿ ಕನಿಷ್ಠ ಮೂರು ವರ್ಷ ಕೆಲಸ ಮಾಡಿದ ಅನುಭವ ಹೊಂದಿರುವವರನ್ನೇ ನೇಮಕ ಮಾಡಬೇಕು. ಮೇನಕಾ ಅವರಿಗೆ ಪರೀಕ್ಷಾ ನಿಯಂತ್ರಕರಾಗಿ ಕೆಲಸ ಮಾಡಿದ ಅನುಭವ ಇಲ್ಲ. ಅದಕ್ಕೆ ಅಗತ್ಯ
ವಿರುವ ಅರ್ಹತೆ ಹೊಂದಿಲ್ಲ ಎಂದೂ ಮೂಲಗಳು ತಿಳಿಸಿವೆ.

ಮೇನಕಾ ಅವರಿಗೆ ಐಷಾರಾಮಿ ಕಾರು ನೀಡಲಾಗಿದೆ. ಉತ್ತಮ ಸಂಬಳವನ್ನೂ ನಿಗದಿ ಮಾಡಲಾಗಿದೆ. ವಿಶ್ವವಿದ್ಯಾಲಯ ಸ್ಥಾನಮಾನ ‍ಪಡೆದಿರುವ ಸಂಸ್ಥೆಯಲ್ಲಿ ಸಿಬ್ಬಂದಿಯಲ್ಲಿ ಅದಕ್ಷತೆ ಹೆಚ್ಚುತ್ತಿರುವುದನ್ನು ಆಡಳಿತ ಮಂಡಳಿ ಸಭೆಯಲ್ಲಿ ದೇಶಪಾಂಡೆ ಗಮನಕ್ಕೆ ತಂದಿದ್ದರು. ಆಗ ದ್ಯಾಬೇರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಇದರಿಂದ ಬೇಸತ್ತ ದೇಶಪಾಂಡೆ ಸಂಸ್ಥೆ ತೊರೆಯಲು ನಿರ್ಧರಿಸಿದರು ಎಂದು ಮೂಲಗಳು ಹೇಳಿವೆ.

ಇದೇ 31ಕ್ಕೆ ದೇಶಪಾಂಡೆ ನಿವೃತ್ತರಾಗಲಿದ್ದಾರೆ. ಆದರೆ, ಹುದ್ದೆಯಲ್ಲಿ ಮುಂದುವರಿಯುವಂತೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಕೋರಿದರೂ ಕೂಡ ಅದಕ್ಕೆ ಅವರು ಒಪ್ಪಲಿಲ್ಲ. ಹೀಗಾಗಿ ಲಕ್ಷ್ಮಿನಾರಾಯಣ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

‘ಕಾರು, ಸಂಬಳ ಕೊಟ್ಟಿಲ್ಲ, ತೃಪ್ತಿ ಇದೆ’
‘ನನಗೆ ಕಾರು ಕೊಟ್ಟಿರಲಿಲ್ಲ, ಒಪ್ಪಿಕೊಂಡಷ್ಟು ಸಂಬಳವೂ ಕೊಡಲಿಲ್ಲ. ಮೇನಕಾ ಅವರಿಗೆ ಕಾರು ಕೊಟ್ಟಿದ್ದಾರೆ. ಸಂಬಳ ಎಷ್ಟು ನಿಗದಿ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಋಣಾತ್ಮಕ ವಿಷಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಅನೇಕ ಉತ್ತಮ ಸಂಗತಿಗಳಿವೆ. ಉತ್ತಮ ಕೆಲಸಗಳು ಆಗಿವೆ. ಸಂತೋಷದಿಂದ ನಿರ್ಗಮಿಸುತ್ತಿದ್ದೇನೆ’ ಎಂದು ಆರ್‌.ಎಸ್.ದೇಶಪಾಂಡೆ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT