ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಫುಟ್‌ಬಾಲ್‌: ಪ್ರಶಸ್ತಿ ಮೇಲೆ ಯುನೈಟೆಡ್‌, ಕಿಕ್‌ಸ್ಟಾರ್ಟ್ ಕಣ್ಣು

Last Updated 17 ಮಾರ್ಚ್ 2021, 19:11 IST
ಅಕ್ಷರ ಗಾತ್ರ

ಬೆಂಗಳೂರು: ಹಾಲಿ ಚಾಂಪಿಯನ್ ಕಿಕ್‌ಸ್ಟಾರ್ಟ್ ಎಫ್‌ಸಿ ಮತ್ತು ರನ್ನರ್ ಅಪ್ ಬೆಂಗಳೂರು ಯುನೈಟೆಡ್ ಎಫ್‌ಸಿ ತಂಡಗಳು ರಾಜ್ಯ ಫುಟ್‌ಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಸೂಪರ್ ಡಿವಿಷನ್ ತಂಡಗಳ ಮಹಿಳಾ ಲೀಗ್‌ನ ಪ್ರಶಸ್ತಿ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿಯಲಿವೆ. ಮಿಸಾಕ ಯುನೈಟೆಡ್ ಮತ್ತು ಮಾತೃ ಪ್ರತಿಷ್ಠಾನ ತಂಡಗಳಿಗೆ ಎರಡನೇ ಸ್ಥಾನ ಗಳಿಸುವ ಅವಕಾಶದ ಬಾಗಿಲು ತೆರೆದಿದೆ.

ಗುರುವಾರ ಮಧ್ಯಾಹ್ನ ನಡೆಯಲಿರುವ ಎರಡು ಪಂದ್ಯಗಳು ನಾಲ್ಕೂ ತಂಡಗಳಿಗೆ ಮಹತ್ವದ್ದು. 20 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿರುವ ಕಿಕ್‌ಸ್ಟಾರ್ಟ್‌ ತಂಡ 19 ಪಾಯಿಂಟ್ ಗಳಿಸಿ ಎರಡನೇ ಸ್ಥಾನದಲ್ಲಿರುವ ಬೆಂಗಳೂರು ಯುನೈಟೆಡ್ ವಿರುದ್ಧ ಸೆಣಸಲಿದೆ. ಪ್ರಶಸ್ತಿ ಗೆಲ್ಲಬೇಕಾದರೆ ಯುನೈಟೆಡ್‌ಗೆ ಜಯ ಅನಿವಾರ್ಯ. ಕಿಕ್‌ಸ್ಟಾರ್ಟ್ ತಂಡ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಪ್ರಶಸ್ತಿ ತನ್ನದಾಗಿಸಿಕೊಳ್ಳಬಹುದು.

ಈ ಪಂದ್ಯಕ್ಕೂ ಮೊದಲು ಮಿಸಾಕ ಯುನೈಟೆಡ್ ಮತ್ತು ಮಾತೃ ಪ್ರತಿಷ್ಠಾನ ನಡುವಿನ ಪಂದ್ಯ ನಡೆಯಲಿದೆ. ಈ ಎರಡು ತಂಡಗಳು ಕ್ರಮವಾಗಿ 18 ಮತ್ತು 17 ಪಾಯಿಂಟ್‌ಗಳೊಂದಿಗೆ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿವೆ. ಈ ‍ಪಂದ್ಯ ಡ್ರಾ ಆದರೆ ಯಾವ ತಂಡಕ್ಕೂ ಲಾಭ ಇಲ್ಲ. ಆದರೆ ಯಾವುದಾದರೊಂದು ತಂಡ ಗೆದ್ದು ನಂತರ ನಡೆಯುವ ಯುನೈಟೆಡ್ ಮತ್ತು ಕಿಕ್‌ಸ್ಟಾರ್ಟ್‌ ಪಂದ್ಯ ಡ್ರಾಗೊಂಡರೆಮಿಸಾಕ ಯುನೈಟೆಡ್ ಅಥವಾ ಮಾತೃ ಪ್ರತಿಷ್ಠಾನ ರನ್ನರ್ ಅಪ್‌ ಸ್ಥಾನ ಗಳಿಸಬಹುದು.

ಬ್ರೇವ್ಸ್‌, ಫುಟ್‌ಬಾಲ್ ಫ್ಯಾಕ್ಟರಿ ಜಯಭೇರಿ

ಬುಧವಾರ ನಡೆದ ಪಂದ್ಯಗಳಲ್ಲಿ ಬೆಂಗಳೂರು ಬ್ರೇವ್ಸ್‌ ಮತ್ತು ಇಂಡಿಯನ್ ಫುಟ್‌ಬಾಲ್ ಫ್ಯಾಕ್ಟರಿ ತಂಡಗಳು ಗೆಲುವು ದಾಖಲಿಸಿದವು. ಸ್ಲೇಜರ್ಸ್‌ ಬೆಳಗಾಂ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಬೆಂಗಳೂರು ಬ್ರೇವ್ಸ್‌ 6–0ಯಿಂದ ಜಯ ಗಳಿಸಿತು. ದೀಪಾ (16ನೇ ನಿಮಿಷ), ಸುಷ್ಮಿತಾ ಜಾಧವ್ (33, 42, 55 ಮತ್ತು 58ನೇ ನಿ) ಹಾಗೂ ಆರುಷಿ ಸಂತೋಷ್‌ (86ನೇ ನಿ) ಗೋಲು ಗಳಿಸಿದರು.

ಬೆಂಗಳೂರು ಸಾಕರ್ ಗ್ಯಾಲಕ್ಸಿ ಎದುರಿನ ಪಂದ್ಯದಲ್ಲಿ ಇಂಡಿಯನ್ ಫುಟ್‌ಬಾಲ್ ಫ್ಯಾಕ್ಟರಿ 6–0ಯಿಂದ ಗೆಲುವು ಸಾಧಿಸಿತು. ಮೀನಾ (5ನೇ ನಿ), ಜ್ಯೋತಿ ಮೋಹನ್ (22ನೇ ನಿ), ಅಪೂರ್ಣ ನರ್ಜರಿ (10, 37, 60ನೇ ನಿ) ಹಾಗೂ ರೂಪಾಲಿ ಬೋರಾ (78ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು.

ಇಂದಿನ ಪಂದ್ಯಗಳು

ಮಿಸಾಕ ಯುನೈಟೆಡ್‌–ಮಾತೃ ಪ್ರತಿಷ್ಠಾನ: ಮಧ್ಯಾಹ್ನ 1.30; ಬೆಂಗಳೂರು ಯುನೈಟೆಡ್ ಎಫ್‌ಸಿ–ಕಿಕ್‌ಸ್ಟಾರ್ಟ್‌ ಎಫ್‌ಸಿ: 3.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT