3
ಫಿಫಾ ವಿಶ್ವಕಪ್‌ ಫುಟ್‌ಬಾಲ್‌

ಪ್ರಬಲರ ಕಾದಾಟ, ಫೈನಲ್‌ನತ್ತ ನೋಟ: ಇಂದು ಬೆಲ್ಜಿಯಂ–ಫ್ರಾನ್ಸ್‌ ಸೆಮಿಫೈನಲ್‌

Published:
Updated:

ಸೇಂಟ್‌ ಪೀಟರ್ಸ್‌ಬರ್ಗ್‌: ಬಲಿಷ್ಠ ತಂಡಗಳ ಹಣಾಹಣಿ ಮತ್ತು ಪ್ರಬಲ ಆಟಗಾರರ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಮೊದಲ ಸೆಮಿಫೈನಲ್‌ಗೆ ಇಲ್ಲಿನ ಸೇಂಟ್ ಪೀಟರ್ಸ್‌ಬರ್ಗ್‌ ಕ್ರೀಡಾಂಗಣ ಸಿದ್ಧವಾಗಿದ್ದು ಮಂಗಳವಾರ ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಫ್ರಾನ್ಸ್ ತಂಡ ಬೆಲ್ಜಿಯಂ ಎದುರು ಸೆಣಸಲಿದೆ.

ಮಿಂಚಿನ ಆಕ್ರಮಣ ನಡೆಸುವ ಬೆಲ್ಜಿಯಂ ಮತ್ತು ರಕ್ಷಣೆಯ ಗೋಡೆ ನಿರ್ಮಿಸಿ ಎದುರಾಳಿಗಳನ್ನು ನಿಯಂತ್ರಿಸುವ ಫ್ರಾನ್ಸ್‌ ತಂಡಗಳ ಈ ಕದನವು ಕುತೂಹಲ ಕೆರಳಿಸಿದೆ.ಆಕ್ರಮಣಕಾರಿ ಆಟಕ್ಕೆ ಹೆಸರಾಗಿರುವ ಈ ತಂಡಗಳ ಹೋರಾಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ಈಡನ್‌ ಹಜಾರ್ಡ್‌ ಸಾರಥ್ಯದ ಬೆಲ್ಜಿಯಂ ತಂಡ ಈ ಬಾರಿ ಅಜೇಯವಾಗಿ ನಾಲ್ಕರ ಘಟ್ಟ ಪ್ರವೇಶಿಸಿದೆ. ಐದು ಪಂದ್ಯಗಳನ್ನು ಆಡಿರುವ ಹಜಾರ್ಡ್‌ ಪಡೆ 14 ಗೋಲುಗಳನ್ನು ದಾಖಲಿಸಿದೆ. ಕ್ವಾರ್ಟರ್‌ ಫೈನಲ್‌ನಲ್ಲಿ ಈ ತಂಡ ಬ್ರೆಜಿಲ್‌ ತಂಡವನ್ನು ಮಣಿಸಿತ್ತು. ಇದು ಆಟಗಾರರ ಮನೋಬಲ ಹೆಚ್ಚುವಂತೆ ಮಾಡಿದೆ. ರೊಮೆಲು ಲುಕಾಕು ಮತ್ತು ನಾಯಕ ಹಜಾರ್ಡ್‌ ಅವರ ಕಾಲ್ಚಳಕದ ಸೊಬಗು ಸೇಂಟ್‌ ಪೀಟರ್ಸ್‌ಬರ್ಗ್‌ ಕ್ರೀಡಾಂಗಣದಲ್ಲೂ ಅನಾವರಣಗೊಳ್ಳುವ ನಿರೀಕ್ಷೆ ಇದೆ. ಮಿಡ್‌ಫೀಲ್ಡರ್‌ಗಳಾದ ಕೆವಿನ್‌ ಡಿ ಬ್ರ್ಯೂನ್‌, ನೆಸೆರ್‌ ಚಾಡ್ಲಿ ಮತ್ತು ಆ್ಯಕ್ಸೆಲ್‌ ವಿಷಲ್‌ ಅವರೂ ಅಭಿಮಾನಿಗಳ ಕಣ್ಮಣಿಗಳಾಗಿದ್ದಾರೆ. ಫ್ರಾನ್ಸ್‌ ಕೂಡಾ ವಿಶ್ವಾಸದ ಗಣಿಯಾಗಿದೆ. 1998ರಲ್ಲಿ ವಿಶ್ವಕಪ್‌ನಲ್ಲಿ ಟ್ರೋಫಿ ಗೆದ್ದಿದ್ದ ಈ ತಂಡ ಈ ಬಾರಿಯೂ ಪ್ರಶಸ್ತಿಗೆ ಮುತ್ತಿಕ್ಕುವ ಛಲದಲ್ಲಿದೆ.

‍ಪಾಲ್‌ ಪೊಗ್ಬಾ, ಆ್ಯಂಟೋಯಿನ್‌ ಗ್ರೀಜ್‌ಮನ್‌ ಮತ್ತು 19ರ ಹರೆಯದ ಕೈಲಿಯನ್‌ ಬಾಪೆ ಅವರ ಆಟ ಮತ್ತೊಮ್ಮೆ ರಂಗೇರುವ ನಿರೀಕ್ಷೆ ಯಲ್ಲಿ ಅಭಿಮಾನಿಗಳು ಇದ್ದಾರೆ.

ಪ್ರಮುಖ ಮಾಹಿತಿಗಳು

* ಉಭಯ ತಂಡಗಳು ಇದುವರೆಗೂ 73 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಫ್ರಾನ್ಸ್‌ 24 ಪಂದ್ಯಗಳಲ್ಲಿ ಗೆದ್ದರೆ, ಬೆಲ್ಜಿಯಂ 30ರಲ್ಲಿ ಎದುರಾಳಿಗಳ ಸವಾಲು ಮೀರಿದೆ. 19 ಪಂದ್ಯಗಳು ಡ್ರಾ ಆಗಿವೆ.

* ವಿಶ್ವಕಪ್‌ನಲ್ಲಿ ಬೆಲ್ಜಿಯಂ ಎದುರು ಆಡಿರುವ ಎರಡೂ ಪಂದ್ಯಗಳಲ್ಲೂ ಫ್ರಾನ್ಸ್‌ ಗೆದ್ದಿದೆ. 1938ರಲ್ಲಿ ನಡೆದಿದ್ದ ಟೂರ್ನಿಯ ಮೊದಲ ಸುತ್ತಿನ ಹಣಾಹಣಿಯಲ್ಲಿ 3–1 ಗೋಲುಗಳಿಂದ ಗೆದ್ದಿದ್ದ ಫ್ರಾನ್ಸ್‌, 1986ರಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ‘ಪ್ಲೇ ಆಫ್‌’ ಹೋರಾಟದಲ್ಲಿ 4–2 ಗೋಲುಗಳಿಂದ ವಿಜಯಿಯಾಗಿತ್ತು.

* ಉಭಯ ತಂಡಗಳು 2015ರಲ್ಲಿ ಕೊನೆಯ ಬಾರಿ ಎದುರಾಗಿದ್ದವು. ಪ್ಯಾರಿಸ್‌ನಲ್ಲಿ ನಡೆದಿದ್ದ ಸೌಹಾರ್ದ ಪಂದ್ಯದಲ್ಲಿ ಬೆಲ್ಜಿಯಂ 4–3 ಗೋಲುಗಳಿಂದ ಗೆದ್ದಿತ್ತು.

* ಬೆಲ್ಜಿಯಂ ತಂಡ ಎರಡನೇ ಬಾರಿ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ. 1986ರ ಟೂರ್ನಿಯ ನಾಲ್ಕರ ಘಟ್ಟದ ಪೈಪೋಟಿಯಲ್ಲಿ ಈ ತಂಡ ಅರ್ಜೆಂಟೀನಾ ವಿರುದ್ಧ ಸೋತಿತ್ತು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !