ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯ ಇಲ್ಲದವರು ಅನಾಗರಿಕರು–ಮೊಯಿಲಿ

Last Updated 28 ಫೆಬ್ರುವರಿ 2018, 6:26 IST
ಅಕ್ಷರ ಗಾತ್ರ

ಮೈಸೂರು: ‘ಪ್ರಸ್ತುತ ದಿನಗಳಲ್ಲಿ ಕೆಲವರ ಹೇಳಿಕೆಗಳು ಕ್ರೂರ ಹಾಗೂ ಕರ್ಕಶದಿಂದ ಕೂಡಿರುತ್ತಿವೆ. ದ್ವೇಷ ಕಾರುತ್ತಿದ್ದು, ಅನಾಗರಿಕರಂತೆ ವರ್ತಿಸುತ್ತಿದ್ದಾರೆ’ ಎಂದು ಸಂಸದ, ಸಾಹಿತಿ ಎಂ.ವೀರಪ್ಪ ಮೊಯಿಲಿ ಇಲ್ಲಿ ಮಂಗಳವಾರ ವಿಷಾದ ವ್ಯಕ್ತಪಡಿಸಿದರು. ಅಖಿಲ ಭಾರತ ಕನ್ನಡ ಸಾಂಸ್ಕೃತಿಕ ಪರಿಷತ್‌ ಆಯೋಜಿಸಿರುವ ಅಖಿಲ ಭಾರತ ಪ್ರಥಮ ಕನ್ನಡ ಸಾಂಸ್ಕೃತಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂಯಮದ ಗಡಿ ಕೂಡ ಇಲ್ಲದಂಥ ಹೇಳಿಕೆಗಳು ಬರುತ್ತಿವೆ. ದ್ವೇಷ ಕಾರುವವರನ್ನು ಅನಾಗರಿಕರು ಎಂದು ಹೇಳಬೇಕೇ, ಅಸಂಸ್ಕೃತರು ಎಂದು ಕರೆಯಬೇಕೇ ಎಂಬುದನ್ನು ಸಮಾಜ ನಿರ್ಧರಿಸಬೇಕು. ನನ್ನ ಪ್ರಕಾರ ಮೌಲ್ಯ ಇಲ್ಲದವರು ಅನಾಗರಿಕರು. ಇಂಥವರಿಂದ ಕನ್ನಡ ಸಂಸ್ಕೃತಿಗೆ ಅಪಾಯ ಬಂದೊದಗಿದೆ‌’ ಎಂದರು.

‘ಸಾಂಸ್ಕೃತಿಕ ಗರಿಮೆ ನಮ್ಮ ಕನ್ನಡಕ್ಕಿದೆ. ನಮ್ಮದು ಧರ್ಮ ಸಹಿಷ್ಣುತೆಗೆ ಹೆಸರಾದ ನಾಡು. ಕರ್ನಾಟಕದ ಸಾಂಸ್ಕೃತಿಕ ಒಡಲಿನಲ್ಲಿ ಧರ್ಮ, ಮೌಲ್ಯ, ಬದುಕುವ, ಪ್ರೀತಿಸುವ ಸಹಿಷ್ಣುತೆ ಇದೆ. ಇದರ ಉಳಿವಿಗಾಗಿ ನಾವು ಪ್ರಯತ್ನಿಸಬೇಕು. ಎಲ್ಲರ ಮನದಲ್ಲಿ ಸಾಂಸ್ಕೃತಿಕ ಎಚ್ಚರ ಜಾಗೃತವಾಗಬೇಕಿದೆ’ ಎಂದು ಸಲಹೆ ನೀಡಿದರು.

‘ಸಂಸ್ಕೃತಿ ಎಂದರೆ ಸಮಗ್ರ ಜನರ ಬದುಕಿನ ಅಧ್ಯಯನ. ಸಂಸ್ಕೃತಿಗೂ ಮತ್ತು ಭಾಷೆಗೂ ಹೊಕ್ಕಳ ಬಳ್ಳಿಯ ಸಂಬಂಧವಿದೆ. ಯಾವುದೇ ಭಾಷೆಯ ಸಾಹಿತ್ಯ ಹಾಗೂ ಅಲ್ಲಿನ ಚಿಂತನೆಗಳನ್ನು ಅಧ್ಯಯನ ಮಾಡಿದರೆ ಸಮಗ್ರ ಸಂಸ್ಕೃತಿಯ ಮಜಲುಗಳನ್ನು ತಿಳಿಯಬಹುದು. ಭಾರತದ ಸಂಸ್ಕೃತಿಗೆ 5,000 ವರ್ಷಗಳ ಗತ ಇತಿಹಾಸ ಗೊತ್ತಾಗುತ್ತದೆ. ಕನ್ನಡ ಸಂಸ್ಕೃತಿಯ ಮೂಲಕ 2,000 ವರ್ಷಗಳ ಜನಜೀವನ ತಿಳಿಯಬಹುದು’ ಎಂದು ಹೇಳಿದರು.

‘ಇಂಗ್ಲಿಷ್‌ ಇಂದು ಕೇವಲ ಭಾಷೆಯಾಗಿ ಉಳಿದಿಲ್ಲ. ಅದೀಗ ಪ್ರತಿಷ್ಠೆಯ ವಿಷಯವಾಗಿದೆ. ಹಾಗೆಯೇ, ಕನ್ನಡ ಕೇವಲ ಭಾಷೆ ಅಲ್ಲ; ಅದೊಂದು ಸಂಸ್ಕೃತಿ. ಆಗ ಮಾತ್ರ ಅದು ಬದುಕಿನ ಬ್ರ್ಯಾಂಡ್‌ ಆಗುತ್ತದೆ, ಪ್ರತಿಷ್ಠೆಯ ಸಂಕೇತವಾಗುತ್ತದೆ. ಇಂಗ್ಲಿಷ್‌ ಇಂಗ್ಲೆಂಡಿನಾಚೆಗೆ ಬೆಳೆದಂತೆ ಕನ್ನಡ ಭಾಷೆಯು ರಾಜ್ಯ, ರಾಷ್ಟ್ರದಾಚೆಗೂ ಬೆಳೆಯಬೇಕಿದೆ’ ಎಂದು ನುಡಿದರು.

‘ಈಗ ಇತಿಹಾಸ ಗೊತ್ತಿಲ್ಲದವರು ಇತಿಹಾಸವನ್ನು ಪರಿಷ್ಕರಿಸಲು ಮುಂದಾಗಿದ್ದಾರೆ. ಇದು ಕರ್ನಾಟಕಕ್ಕೆ ಭೂಷಣವಲ್ಲ’ ಎಂದು ಎಚ್ಚರಿಸಿದರು. ಸಮ್ಮೇಳನಾಧ್ಯಕ್ಷೆ ಪದ್ಮಾ ಶೇಖರ್‌ ಮಾತನಾಡಿ, ‘ಕನ್ನಡ ಸಾಹಿತ್ಯ ಜನಜೀವನದ ಮೇಲೆ ಗಾಢ ಪ್ರಭಾವ ಬೀರಿದೆ. 12ನೇ ಶತಮಾನದಲ್ಲೇ ಸಾಹಿತ್ಯ ಹಾಗೂ ಹೋರಾಟ ಆರಂಭವಾಯಿತು’ ಎಂದರು.‌

ಸಾಹಿತ್ಯವು ವ್ಯಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ಜೀವನ ಮೌಲ್ಯದ ಮಹತ್ವವನ್ನು ಸ್ಥಾಪಿಸುವ ಪ್ರಯತ್ನ ಮಾಡುತ್ತದೆ. ಒಂದೊಂದು ಸಂದರ್ಭದಲ್ಲಿ ಜೀವ ವಿರೋಧಿಯಾಗಿಯೂ, ಕೆಲವೊಮ್ಮೆ ಜೀವ ಪರವಾಗಿಯೂ ಪ್ರತಿಬಿಂಬಿಸಿಕೊಳ್ಳುತ್ತಾ ಇರುತ್ತದೆ. ಈ ಎರಡೂ ಸಂದರ್ಭಗಳಲ್ಲಿ ಸಮಕಾಲೀನ ಧೋರಣೆಗಳು, ಪ್ರಚಲಿತ ಸಾಮಾಜಿಕ ವ್ಯವಸ್ಥೆಯ ಆಗುಹೋಗುಗಳು ಪ್ರಧಾನ ಪಾತ್ರ ವಹಿಸುತ್ತವೆ‌’ ಎಂದು ಪ್ರತಿಪಾದಿಸಿದರು.

ಬೆಳಿಗ್ಗೆ ಜಾನಪದ ಕಲಾಮೇಳಗಳ ಪ್ರದರ್ಶನ ನಡೆಯಿತು. ಮಧ್ಯಾಹ್ನ ಜಾದುಗಾರ ಎಂ.ಡಿ.ಕೌಶಿಕ್‌ ಅವರಿಂದ ಡಿವಿಜಿ ಕೃತಿ ಮಂಕುತಿಮ್ಮನ ಕಗ್ಗ ಆಧರಿಸಿದ ‘ಕಗ್ಗ ಮ್ಯಾಜಿಕ್‌ ಪ್ರದರ್ಶನ’ ಇತ್ತು. ಬಳಿಕ ಗೋಷ್ಠಿಗಳು ನಡೆದವು.

ಶಾಸಕ ವಾಸು, ಸಾಹಿತಿ ಸಿ.ಪಿ.ಕೃಷ್ಣಕುಮಾರ್‌, ಶಾರದಾವಿಲಾಸ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎಸ್‌.ಪಾರ್ಥಸಾರಥಿ, ಪರಿಷತ್ತಿನ ಗೌರವಾಧ್ಯಕ್ಷ ಪ್ರೊ.ನಿ.ಗಿರಿಗೌಡ, ಅಧ್ಯಕ್ಷ ಪ್ರಭುಸ್ವಾಮಿ ಚಿಕ್ಕಹಳ್ಳಿ, ಪ್ರಧಾನ ಕಾರ್ಯದರ್ಶಿ ದೇವರಾಜು ಪಿ.ಚಿಕ್ಕಹಳ್ಳಿ ಇದ್ದರು.

* * 

ದೇಶದ ಪ್ರಮುಖ ಸಾಂಸ್ಕೃತಿಕ ಕೇಂದ್ರ ಕರ್ನಾಟಕ. ಈ ಶ್ರೇಯವನ್ನು ನಾವು ಕಳೆದುಕೊಳ್ಳಬಾರದು. ಇದು ಸಾಂಸ್ಕೃತಿಕ ಫಲವತ್ತಾದ ಕೇಂದ್ರ
ಎಂ.ವೀರಪ್ಪ ಮೊಯಿಲಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT