ಫ್ರಾನ್ಸ್ ತಂಡದ ಕೈ ಹಿಡಿದ ‘ಯುವ’ಶಕ್ತಿ

7
ಮೊದಲ ಪ್ರೀ ಕ್ವಾರ್ಟರ್ ಫೈನಲ್‌ ಪಂದ್ಯ; ಟೂರ್ನಿಯಿಂದ ಹೊರಬಿದ್ದ ಲಯೊನೆಲ್‌ ಮೆಸ್ಸಿ ಬಳಗ

ಫ್ರಾನ್ಸ್ ತಂಡದ ಕೈ ಹಿಡಿದ ‘ಯುವ’ಶಕ್ತಿ

Published:
Updated:

ಕಜಾನ್‌ (ಎಎಫ್‌ಪಿ): ಗುಂಪು ಹಂತದಲ್ಲಿ ಪ್ರಯಾಸದಿಂದ ಗೆದ್ದು ನಾಕೌಟ್ ಹಂತಕ್ಕೆ ಪ್ರವೇಶಿಸಿದ್ದ ಅರ್ಜೆಂಟೀನಾ ತಂಡ ಯುವ ಆಟಗಾರ ಕಿಲಿಯನ್‌ ಬಾಪೆ ಅವರ ಮುಂದೆ ಮಂಕಾಯಿತು. ಒಟ್ಟು ಏಳು ಗೋಲುಗಳು ಮೂಡಿ ಬಂದ ರೋಮಾಂಚಕ ಪಂದ್ಯದಲ್ಲಿ 19 ವರ್ಷದ ಈ ಆಟಗಾರ ಲಯೊನೆಲ್‌ ಮೆಸ್ಸಿ ಬಳಗವನ್ನು ದಂಗುಬಡಿಸಿದರು. ಅವರು ಗಳಿಸಿದ ಎರಡು ಗೋಲುಗಳು ಫ್ರಾನ್ಸ್ ತಂಡವನ್ನು ವಿಶ್ವಕಪ್‌ ಟೂರ್ನಿಯ ಕ್ವಾರ್ಟರ್ ಫೈನಲ್‌ಗೆ ಮುನ್ನಡೆಸಿದವು.

ಫುಟ್‌ಬಾಲ್ ಪ್ರಿಯರಿಂದ ಕಿಕ್ಕಿರಿದು ತುಂಬಿದ್ದ ಕಜಾನ್ ಅರೆನಾದಲ್ಲಿ ಶನಿವಾರ ರಾತ್ರಿ ನಡೆದ ಮೊದಲ ಪ್ರೀ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ 1998ರ ವಿಶ್ ಚಾಂಪಿಯನ್‌ ಫ್ರಾನ್ಸ್‌ 4–3ರಿಂದ  ಅರ್ಜೆಂಟೀನಾವನ್ನು ಮಣಿಸಿತು.

13ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಅಂಟೋಯ್ನ್‌ ಗ್ರೀಜ್‌ಮನ್ ಗಳಿಸಿಕೊಟ್ಟ ಮುನ್ನಡೆಯ ಬಲದಲ್ಲಿ ಬೆಂಜಮಿನ್‌ ಪವಾರ್ಡ್‌ ಮತ್ತು ಬಾಪೆ ಸುಲಭ ಗೋಲುಗಳನ್ನು ಗಳಿಸಿ ಫ್ರಾನ್ಸ್‌ಗೆ ಜಯ ದೊರಕಿಸಿಕೊಟ್ಟರು.

ಅರ್ಜೆಂಟೀನಾ ರಕ್ಷಣಾ ವಿಭಾಗದ ದೌರ್ಬಲ್ಯದ ಲಾಭ ಪಡೆದುಕೊಂಡ ಫ್ರಾನ್ಸ್‌ ಆರಂಭದಲ್ಲೇ ಆಕ್ರಮಣಕ್ಕೆ ಮುಂದಾಯಿತು. ಆದರೆ ಮೆಸ್ಸಿ ಬಳಗದ ಫಾರ್ವರ್ಡ್ ಆಟಗಾರರು ಕೂಡ ದಾಳಿ ಚುರುಕುಗೊಳಿಸಿದರು. ಹೀಗಾಗಿ ಹಣಾಹಣಿ ರಂಗೇರಿತು. ಐದನೇ ನಿಮಿಷದಲ್ಲಿ ಫ್ರಾನ್ಸ್‌ನ ರಕ್ಷಣಾ ಗೋಡೆಯನ್ನು ಭೇದಿಸಿದ ಡಿ ಮಾರಿಯಾ ಅವರು ಬಲಭಾಗದಿಂದ ಚೆಂಡನ್ನು ಬಲವಾಗಿ ಒದ್ದರು. ಆದರೆ ಚೆಂಡು ಗೋಲು ಪೆಟ್ಟಿಗೆಯ ಮೇಲ್ಭಾಗದಿಂದ ಹೊರಗೆ ಚಿಮ್ಮಿತು.

ಒಂಬತ್ತನೇ ನಿಮಿಷದಲ್ಲಿ ಫ್ರಾನ್ಸ್‌ಗೆ ಮುನ್ನಡೆ ಸಾಧಿಸಲು ಅಪೂರ್ವ ಅವಕಾಶ ಲಭಿಸಿತ್ತು. ಫ್ರೀ ಕಿಕ್‌ನಲ್ಲಿ ಗೋಲು ಗಳಿಸಲು ಅಂಟೋಯ್ನ್‌ ಗ್ರೀಜ್‌ಮನ್‌ಗೆ ಸಾಧ್ಯವಾಗಲಿಲ್ಲ. ಆದರೆ 13ನೇ ನಿಮಿಷದಲ್ಲಿ ಲಭಿಸಿದ ಅವಕಾಶವನ್ನು ಅವರು ಕೈಚೆಲ್ಲಲಿಲ್ಲ. ಮಾರ್ಕೋಸ್‌ ರೋಜೊ ಎಸಗಿದ ತಪ್ಪಿಗೆ ಅರ್ಜೆಂಟೀನಾ ಬೆಲೆ ತೆತ್ತಿತು. ತಂಡದ ಆವರಣದಲ್ಲಿ ಬಾಪೆ ಅವರನ್ನು ಮಾರ್ಕೋಸ್‌ ತಳ್ಳಿ ನೆಲಕ್ಕೆ ಕೆಡವಿದರು. ರೆಫರಿ ಒಂದು ಕ್ಷಣವೂ ಯೋಚಿಸದೆ ಪೆನಾಲ್ಟಿ ವಿಧಿಸಿದರು. ಗ್ರೀಜ್‌ಮನ್‌ ಎಡಗಾಲಿನಿಂದ ಒದ್ದ ಚೆಂಡನ್ನು ತಡೆಯಲು ಗೋಲ್ ಕೀಪರ್‌ ಎಡ ಬದಿಗೆ ಜಿಗಿದರೂ ಚೆಂಡು ಬಲಭಾಗದಿಂದ ನುಗ್ಗಿ ಗುರಿ ಸೇರಿತು.

ಕಿಲಿಯನ್ ಬಾಪೆ ಅವರ ಆಕ್ರಮಣಕಾರಿ ಆಟಕ್ಕೆ ಬೆರಗಾದ ಅರ್ಜೆಂಟೀನಾ 19ನೇ ನಿಮಿಷದಲ್ಲಿ ಮತ್ತೊಂದು ಎಡವಟ್ಟು ಮಾಡಿತು. ತಗ್ಲಾಫಿಕೊ ಎಸಗಿದ ತಪ್ಪಿನಿಂದಾಗಿ ಫ್ರೀ ಕಿಕ್ ಅವಕಾಶವನ್ನು ಬಿಟ್ಟುಕೊಟ್ಟಿತು. ಆದರೆ ಪಾಲ್ ಪೊಗ್ಬಾ ಮಿಂಚಿನ ವೇಗದಲ್ಲಿ ಒದ್ದ ಚೆಂಡು ಗೋಲುಪೆಟ್ಟಿಗೆಯ ಮೇಲ್ಭಾಗದಿಂದ ಹೊರಗೆ ಸಾಗಿತು.

ತಿರುಗೇಟು ನೀಡಿದ ಅರ್ಜೆಂಟೀನಾ: ಮೊದಲಾರ್ಧದ ಮುಕ್ತಾಯಕ್ಕೆ ನಾಲ್ಕು ನಿಮಿಷಗಳು ಬಾಕಿ ಇರುವಾಗ ತಿರುಗೇಟು ನೀಡಿದ ಅರ್ಜೆಂಟೀನಾ, ಸಮಬಲದೊಂದಿಗೆ ವಿರಾಮಕ್ಕೆ ತೆರಳಿತು. ಚೆಂಡನ್ನು ಪಾಸ್ ಮಾಡುತ್ತ ಎದುರಾಳಿ ತಂಡದ ಆವರಣಕ್ಕೆ ನುಗ್ಗಿದ ಮೆಸ್ಸಿ ಬಳಗದ ಆಟಗಾರರು ಬಲಭಾಗದಿಂದ ಚೆಂಡನ್ನು ಮಧ್ಯಭಾಗದಲ್ಲಿದ್ದ ಏಂಜೆಲ್‌ ಡಿ ಮಾರಿಯೊಗೆ ಲಾಫ್ಟ್ ಮಾಡಿದರು. 25 ಗಜ ದೂರದಿಂದ ಮಾರಿಯೊ ಒದ್ದ ಚೆಂಡು ನಿಖರವಾಗಿ ಗುರಿ ಸೇರಿತು; ಅರ್ಜೆಂಟೀನಾ ಬಳಗದಲ್ಲಿ ಸಂಭ್ರಮ ಮನೆ ಮಾಡಿತು.

ಮಧ್ಯಂತರ ಅವಧಿಯ ನಂತರದ ಮೂರೇ ನಿಮಿಷದಲ್ಲಿ ಗ್ಯಾಬ್ರಿಯೆಲ್‌ ಮರ್ಕಾಡೊ ಗಳಿಸಿದ ಗೋಲಿನ ಮೂಲಕ ಅರ್ಜೆಂಟೀನಾ ಮುನ್ನಡೆ ಸಾಧಿಸಿತು. ಆದರೆ ನಂತರ ಪಂದ್ಯದ ದಿಕ್ಕು ಬದಲಾಯಿತು. 64 ಮತ್ತು 68ನೇ ನಿಮಿಷದಲ್ಲಿ ಮಿಂಚಿನ ಗೋಲು ಗಳಿಸಿದ ಬಾಪೆ ಅವರು ಫ್ರಾನ್ಸ್‌ಗೆ ಅಮೋಘ ಮುನ್ನಡೆ ಗಳಿಸಿಕೊಟ್ಟರು. 90+3ನೇ ನಿಮಿಷದಲ್ಲಿ ಅರ್ಜೆಂಟೀನಾದ ಕುನ್ ಅಗೆರೊ ಗೋಲು ಗಳಿಸಿ ಪಂದ್ಯವನ್ನು ರೋಚಕ ಘಟ್ಟಕ್ಕೆ ಕೊಂಡೊಯ್ದರು. ಆದರೆ ಕೊನೆಗೆ ತಂಡ ನಿರಾಸೆಗೆ ಒಳಗಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !