ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಫಾ ವಿಶ್ವಕಪ್‌ ಟೂರ್ನಿ: ಫ್ರಾನ್ಸ್‌ಗೆ ಎಂಬಾಪೆ ಬಲ

16ರ ಘಟ್ಟದಲ್ಲಿ ಇಂದು ಪೋಲೆಂಡ್‌ ವಿರುದ್ಧ ಸೆಣಸು
Last Updated 3 ಡಿಸೆಂಬರ್ 2022, 13:27 IST
ಅಕ್ಷರ ಗಾತ್ರ

ದೋಹಾ (ರಾಯಿಟರ್ಸ್‌): ಸತತ ಎರಡನೇ ಟ್ರೋಫಿಯ ಮೇಲೆ ಕಣ್ಣಿಟ್ಟಿರುವ ಫ್ರಾನ್ಸ್‌ ತಂಡ ಫಿಫಾ ವಿಶ್ವಕಪ್‌ ಟೂರ್ನಿಯ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಭಾನುವಾರ ಪೋಲೆಂಡ್‌ ತಂಡದ ಸವಾಲು ಎದುರಿಸಲಿದೆ.

ಅಲ್‌ ತುಮಾಮಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಫ್ರಾನ್ಸ್‌, ಗೆಲ್ಲುವ ‘ಫೇವರಿಟ್‌’ ಎನಿಸಿಕೊಂಡಿದೆ. ಆದರೆ ಪೋಲೆಂಡ್‌ ಅಚ್ಚರಿಯ ಫಲಿತಾಂಶ ನೀಡಬಲ್ಲ ತಾಕತ್ತು ಹೊಂದಿರುವುದರಿಂದ ತುರುಸಿನ ಪೈಪೋಟಿ ನಡೆಯುವುದರಲ್ಲಿ ಅನುಮಾನವಿಲ್ಲ.

ಲೀಗ್‌ ಹಂತದಲ್ಲಿ ಇನ್ನೂ ಒಂದು ಪಂದ್ಯ ಬಾಕಿಯಿರುವಂತೆಯೇ ನಾಕೌಟ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದ್ದ ಫ್ರಾನ್ಸ್‌, ಕೊನೆಯ ಪಂದ್ಯದಲ್ಲಿ ಟುನೀಷಿಯಾ ಕೈಯಲ್ಲಿ 0–1 ರಲ್ಲಿ ಸೋತಿತ್ತು. ಆದರೆ ಆ ಪಂದ್ಯದಲ್ಲಿ ಪ್ರಮುಖರಿಗೆ ವಿಶ್ರಾಂತಿ ನೀಡಲಾಗಿತ್ತು.

ಮೊದಲ ಪಂದ್ಯವನ್ನು ಅರ್ಜೆಂಟೀನಾ ಕೈಯಲ್ಲಿ 0–2 ರಲ್ಲಿ ಸೋತಿದ್ದ, ಪೋಲೆಂಡ್‌ ಆ ಬಳಿಕ ಚೇತರಿಕೆಯ ಆಟವಾಡಿ 16ರ ಘಟ್ಟ ತಲುಪಿದೆ. ಸ್ಟ್ರೈಕರ್‌ ರಾಬರ್ಟ್‌ ಲೆವನ್‌ಡೊವ್‌ಸ್ಕಿ ಮೇಲೆ ಈ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

ಮತ್ತೊಂದೆಡೆ ಫ್ರಾನ್ಸ್‌ ತಂಡ ಸ್ಟಾರ್‌ ಸ್ಟೈಕರ್‌ ಕೈಲಿಯಾನ್‌ ಎಂಬಾಪೆ, ಆಂಟೋನ್‌ ಗ್ರೀಸ್‌ಮನ್‌ ಮತ್ತು ಉಸ್ಮಾನ್‌ ದೆಂಬೆಲೆ ಅವರ ಬಲದಿಂದ ಕಣಕ್ಕಿಳಿಯಲಿದೆ.

ಎಂಬಾಪೆ ಮತ್ತು ದೆಂಬೆಲೆ ಅವರನ್ನು ಕಟ್ಟಿಹಾಕಲು ಪೋಲೆಂಡ್‌ ಡಿಫೆಂಡರ್‌ಗಳಿಗೆ ಹೆಚ್ಚಿನ ಶ್ರಮವಹಿಸಬೇಕಿದೆ. ಅನುಭವಿ ಆಟಗಾರ ಒಲಿವಿಯೆರ್‌ ಗಿರೋಡ್‌ ಅವರೂ ಮಿಂಚುವ ವಿಶ್ವಾಸದಲ್ಲಿದ್ದಾರೆ.

ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಫ್ರಾನ್ಸ್‌ ಪರ ಅತ್ಯಧಿಕ ಗೋಲು ಗಳಿಸಿದ ಆಟಗಾರ ಎನಿಸಿಕೊಳ್ಳಲು ಗಿರೋಡ್‌ಗೆ ಇನ್ನೊಂದು ಗೋಲು ಬೇಕು. 51 ಗೋಲುಗಳನ್ನು ಗಳಿಸಿರುವ ಅವರು ಥಿಯರಿ ಹೆನ್ರಿ ಜತೆ ದಾಖಲೆಯನ್ನು ಹಂಚಿಕೊಂಡಿದ್ದಾರೆ.

‘ಪೋಲೆಂಡ್‌ ತಂಡ ಅನುಭವಿ ಆಟಗಾರರನ್ನು ಹೊಂದಿದೆ. ಲೆವನ್‌ಡೊವ್‌ಸ್ಕಿ ವಿಶ್ವದ ಅತ್ಯುತ್ತಮ ಸ್ಟ್ರೈಕರ್‌ಗಳಲ್ಲಿ ಒಬ್ಬರು. ಎದುರಾಳಿಗಳನ್ನು ಹಗುರವಾಗಿ ಕಂಡಿಲ್ಲ’ ಎಂದು ಫ್ರಾನ್ಸ್‌ ಕೋಚ್‌ ದಿದಿಯೆ ದೆಶಾಂಪ್‌ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ.

ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಇಂಗ್ಲೆಂಡ್‌ ಅಥವಾ ಸೆನೆಗಲ್‌ ಸವಾಲು ಎದುರಿಸಲಿದೆ

ಬಲಾಬಲ: ಫ್ರಾನ್ಸ್‌ ತಂಡ ಪೋಲೆಂಡ್‌ ವಿರುದ್ಧ ಆಡಿದ ಕಳೆದ ಏಳು ಪಂದ್ಯಗಳಲ್ಲಿ ಸೋತಿಲ್ಲ. 1982 ರಲ್ಲಿ ನಡೆದಿದ್ದ ಸ್ನೇಹಪರ ಪಂದ್ಯದಲ್ಲಿ ಕೊನೆಯದಾಗಿ ಮಣಿದಿತ್ತು. ವಿಶ್ವಕಪ್‌ನಲ್ಲಿ ಇವೆರಡು ತಂಡಗಳು ಒಮ್ಮೆ ಮಾತ್ರ ಎದುರಾಗಿದ್ದು, 1982ರ ಟೂರ್ನಿಯಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯವನ್ನು ಪೋಲೆಂಡ್‌ 3–2 ರಲ್ಲಿ ಜಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT