ಪ್ಯಾರಿಸ್: ಅರ್ಜೆಂಟೀನಾ ವಿರುದ್ಧ ಫ್ರಾನ್ಸ್‌ನ ಪ್ರತೀಕಾರದ ಪಂದ್ಯ ಶುಕ್ರವಾರ ರಾತ್ರಿ ಗಲಾಟೆ, ಗದ್ದಲಗಳಿಂದ ಅಂತ್ಯಗೊಂಡಿತು. ಜಾನ್–ಫಿಲಿಪ್ ಮಟೇಟಾ ಅವರು ಗಳಿಸಿದ ಗೋಲಿನಿಂದ ಫ್ರಾನ್ಸ್ ತೀವ್ರ ಕಾವೇರಿದ್ದ ಈ ಕ್ವಾರ್ಟರ್‌ಫೈನಲ್ ಪಂದ್ಯವನ್ನು 1–0ಯಿಂದ ಗೆದ್ದುಕೊಂಡಿತು.
ಫ್ರಾನ್ಸ್, ಈಗಾಗಲೇ ಸೆಮಿಫೈನಲ್ ತಲುಪಿರುವ ಸ್ಪೇನ್, ಮೊರಾಕೊ ಮತ್ತು ಈಜಿಪ್ಟ್ ತಂಡಗಳ ಸಾಲಿಗೆ ಸೇರಿತು.
ಆಗಸ್ಟ್ 5ರಂದು ನಡೆಯುವ ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ನ ಎದುರಾಳಿ ಈಜಿಪ್ಟ್. ಒಲಿಂಪಿಕ್ಸ್ ಇತಿಹಾಸದಲ್ಲಿ ಈಜಿಪ್ಟ್ ಇದೇ ಮೊದಲ ಬಾರಿ ನಾಲ್ಕರ ಘಟ್ಟ ತಲುಪಿದೆ. ಅದು ಮಾರ್ಸೆಯಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ‘ಪೆನಾಲ್ಟಿ ಶೂಟೌಟ್’ ನಂತರ 5–4 ಗೋಲುಗಳಿಂದ (ನಿಗದಿ ಅವಧಿ 1–1) ಪರಗ್ವೆ ತಂಡವನ್ನು ಸೋಲಿಸಿತ್ತು. ಮೊರಾಕೊ 4–0 ಗೋಲುಗಳಿಂದ ಅಮೆರಿಕವನ್ನು ಸೋಲಿಸಿತ್ತು.
ಆದರೆ ಬೊರ್ಡೊದ ಕ್ರೀಡಾಂಗಣದಲ್ಲಿ ಪಂದ್ಯದ ಮುಕ್ತಾಯವಾಗುತ್ತಿದ್ದಂತೆ, ಎದುರಾಳಿ ಆಟಗಾರರು ಮತ್ತು ನೆರವು ಸಿಬ್ಬಂದಿ ಪರಸ್ಪರ ಗಲಾಟೆಗಿಳಿದರು. ಆಟಗಾರರು ಪಿಚ್‌ನಿಂದ ಹೊರಹೋಗುವವರೆಗೆ ಉದ್ವಿಗ್ನ ವಾತಾವರಣ ನೆಲೆಸಿತು. ಆತಿಥೇಯ ಪ್ರೇಕ್ಷಕರೂ ಒಕ್ಕೊರನಿಂದ ತಮ್ಮ ತಂಡವನ್ನು ಬೆಂಬಲಿಸಿದರು.
ಜುಲೈ ಮಧ್ಯದಲ್ಲಿ ನಡೆದ ಕೊಪಾ ಅಮೆರಿಕ ಫೈನಲ್ ಪಂದ್ಯದ ನಂತರ ಅರ್ಜೆಂಟೀನಾ ಆಟಗಾರರು ಸಂಭ್ರಮಾಚರಣೆ ವೇಳೆ ಜನಾಂಗೀಯ ನಿಂದನೆಯ ಗೀತೆ ಹಾಡಿದ್ದರು. ಇದು ಫ್ರಾನ್ಸ್‌ನ ಪ್ರಮುಖ ಆಟಗಾರ ಕೀಲಿಯನ್ ಎಂಬಾಪೆ ಮತ್ತಿತರರನ್ನು ಗುರಿಯಾಗಿಸಿತ್ತು. ಈ ಬಗ್ಗೆ ತನಿಖೆ ನಡೆಸುವುದಾಗಿ ಫಿಫಾ ಹೇಳಿತ್ತು. ಹೀಗಾಗಿ ಇತ್ತಂಡಗಳು ಈ ಪಂದ್ಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದವು.
2022ರಲ್ಲಿ ವಿಶ್ವಕಪ್ ಫೈನಲ್‌ನಲ್ಲಿ ಈ ಎರಡು ತಂಡಗಳು ಎದುರಾಗಿದ್ದ ವೇಳೆ, ಅರ್ಜೆಂಟೀನಾ ಪೆನಾಲ್ಟಿಯಲ್ಲಿ ಪಂದ್ಯ ಗೆದ್ದಿತ್ತು.
ಪಂದ್ಯದ ಐದನೇ ನಿಮಿಷ ಮಟೇಟಾ ಅವರಿಂದ ಬಂದ ‘ಕಾರ್ನರ್’ನಲ್ಲಿ ಮೈಕೆಲ್ ಒಲಿಸ್ ಗೋಲ್‌ಪೋಸ್ಟ್ ಸನಿಹದಿಂದ ಚೆಂಡನ್ನು ಬಲೆಯೊಳಕ್ಕೆ ಆಕರ್ಷಕವಾಗಿ ಹೆಡ್ ಮಾಡಿದರು.
ಪಂದ್ಯ ಮುಗಿದ ಕೆಲವೇ ಕ್ಷಣಗಳಲ್ಲಿ ಅರ್ಜೆಂಟೀನಾ ಆಟಗಾರರ ಬೆಂಚ್‌ನತ್ತ ತೆರಳಿ ಪ್ರಚೋದಿಸಿದ್ದಕ್ಕೆ ಫ್ರೆಂಚ್ ಮಿಡ್‌ಫೀಲ್ಡರ್ ಎಂಜೊ ಮಿಲೊಟ್ ಅವರಿಗೆ ‘ರೆಡ್ ಕಾರ್ಡ್’ ದರ್ಶನವಾಯಿತು.
ಆದರೆ ಈ ನಿರ್ಧಾರದ ಬಗ್ಗೆ ಫ್ರೆಂಚ್ ಕೋಚ್ ಥಿಯರಿ ಹೆನ್ರಿ ಅಸಮಾಧಾನಗೊಂಡರು. ‘ಹೂಟರ್’ ನಂತರ ಪಿಚ್‌ನಿಂದ ಆಚೆಯಿರುವಾಗ ಈ ರೀತಿ ಕಾರ್ಡ್ ತೋರಿಸಿದ್ದಕ್ಕೆ ಆಕ್ಷೇಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.