ಶನಿವಾರ, ಡಿಸೆಂಬರ್ 7, 2019
16 °C

ಐಎಸ್‌ಎಲ್‌: ಪುಣೆಗೆ ಗೋವಾ ಸವಾಲು

Published:
Updated:
Deccan Herald

ಪುಣೆ: ಪ್ಲೇ ಆಫ್‌ ಹಂತದ ಹಾದಿಯಲ್ಲಿರುವ ಗೋವಾ ಎಫ್‌ಸಿ ತಂಡ ಮತ್ತು ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವ ಎಫ್‌ಸಿ ಪುಣೆ ಸಿಟಿ ತಂಡಗಳು ಮಂಗಳವಾರ ಇಲ್ಲಿ ಮುಖಾಮುಖಿಯಾಗಲಿವೆ.

ಬಾಲೇವಾಡಿ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.

ತವರಿನಲ್ಲಿ ಸತತ ಯಶಸ್ಸು ಕಂಡಿರುವ ಪುಣೆ ತಂಡದ ಆಟಗಾರರು ಈ ಪಂದ್ಯದಲ್ಲಿ ಗೋವಾದ ಸವಾಲು ಮೆಟ್ಟಿನಿಲ್ಲಲು ಬೆವರು ಸುರಿಸಬೇಕಾದೀತು. 11 ಪಂದ್ಯಗಳಿಂದ ಎಂಟು ಪಾಯಿಂಟ್ ಕಲೆ ಹಾಕಿರುವ ತಂಡಕ್ಕೆ ಮುಂದಿನ ಹಾದಿ ಸುಗಮವಾಗಬೇಕಾದರೆ ಇಲ್ಲಿ ಜಯ ಅನಿವಾರ್ಯ.

ಕಳೆದ ಬಾರಿ ಪ್ಲೇ ಆಫ್‌ ಹಂತಕ್ಕೇರಿದ್ದ ಪುಣೆ ತಂಡ ಈ ಬಾರಿ ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರಿಲ್ಲ. ಕಳೆದ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್‌ ಎದುರು ಗೆದ್ದು ಲಯಕ್ಕೆ ಮರಳಿರುವ ತಂಡ ನಾಕೌಟ್ ಹಂತ ತಲುಪುವ ಕನಸಿನೊಂದಿಗೆ ಮಂಗಳವಾರ ಕಣಕ್ಕೆ ಇಳಿಯಲಿದೆ.

12 ದಿನಗಳ ವಿಶ್ರಾಂತಿಯ ನಂತರ ಅಂಗಣಕ್ಕೆ ಇಳಿಯಲಿರುವ ಗೋವಾ ಹಿಂದಿನ ಎರಡು ಪಂದ್ಯಗಳ ಪೈಕಿ ಮೊದಲು ಬಿಎಫ್‌ಸಿ ವಿರುದ್ಧ 2–1ರಿಂದ ಸೋತಿದ್ದು ನಂತರ ಎಟಿಕೆ ಜೊತೆ ಗೋಲು ರಹಿತ ಡ್ರಾ ಸಾಧಿಸಿತ್ತು.

‘ಗೋವಾ ಎಫ್‌ಸಿ ಈ ಬಾರಿಯೂ ಉತ್ತಮ ತಂಡವಾಗಿ ಹೊರಹೊಮ್ಮಿದೆ. ಆಕ್ರಮಣಕಾರಿ ಆಟಕ್ಕೆ ಹೆಸರಾಗಿರುವ ತಂಡದ ಶಕ್ತಿ ಮತ್ತು ದೌರ್ಬಲ್ಯಗಳು ನಮ್ಮ ತಂಡದ ಆಟಗಾರರಿಗೆ ಗೊತ್ತಿವೆ. ಹೀಗಾಗಿ ಜಯದ ಭರವಸೆ ಇದೆ’ ಎಂದು ಪುಣೆ ಎಫ್‌ಸಿಯ ಕೋಚ್‌ ಪ್ರದ್ಯುಮ್ನ ರೆಡ್ಡಿ ತಿಳಿಸಿದರು.

ಪ್ರತಿಕ್ರಿಯಿಸಿ (+)