4

ಫುಟ್‌ಬಾಲ್‌ ರಣಾಂಗಣದ ಎಂಟೆದೆ ಭಂಟರು...

Published:
Updated:

ಈ ತಿಂಗಳ ಆರಂಭದಲ್ಲಿ ಮಾಸ್ಕೊದ ಲುಜ್‌ನಿಕಿ ಕ್ರೀಡಾಂಗಣದಲ್ಲಿ ನಡೆದಿದ್ದ ರಷ್ಯಾ ಮತ್ತು ಸ್ಪೇನ್‌ ನಡುವಣ ರೋಚಕ ಪ್ರೀ ಕ್ವಾರ್ಟರ್‌ಫೈನಲ್‌ ಪಂದ್ಯವನ್ನು ಯಾರೂ ಮರೆತಿರಲಿಕ್ಕಿಲ್ಲ. ಆ ಹೋರಾಟದಲ್ಲಿ ರಷ್ಯನ್ನರ ಕಣ್ಮಣಿಯಾಗಿದ್ದು ಗೋಲ್‌ಕೀಪರ್‌ ಈಗರ್‌ ಅಕಿನ್‌ಫೀವ್‌.

ಪೆನಾಲ್ಟಿ ಶೂಟೌಟ್‌ನಲ್ಲಿ ಈಗರ್‌, ಸ್ಪೇನ್‌ ತಂಡದ ಇಯಾಗೊ ಅಸ್ಪಸ್‌ ಬಾರಿಸಿದ ಚೆಂಡನ್ನು ಪಾದದಿಂದ ತಡೆದು ರಷ್ಯಾ ಗೆಲುವಿಗೆ ಕಾರಣರಾಗಿದ್ದರು. ಅಕಿನ್‌‍ಫೀವ್‌ ‘ದೇವರ ಪಾದ’ಗಳನ್ನು ಹೊಂದಿದ್ದಾರೆ ಎಂದು ಅಭಿಮಾನಿಗಳು ಕೊಂಡಾಡಿದ್ದರು. ಈಗರ್‌ ಅವರು ರಷ್ಯಾದ ದೇವರು ಎಂದೂ ಹಲವರು ಬಣ್ಣಿಸಿದ್ದರು. 

ಫುಟ್‌ಬಾಲ್‌ ಎಂದಾಕ್ಷಣ ಪೆಲೆ, ಮರಡೋನಾ, ರೊನಾಲ್ಡೊ, ಲಯೊನೆಲ್‌ ಮೆಸ್ಸಿ ಮತ್ತು ನೇಮರ್‌ ಅವರಂತಹ ಘಟಾನುಘಟಿಗಳು ನೆನಪಾಗುತ್ತಾರೆ. ಇವರೆಲ್ಲಾ ಅದ್ಭುತ ಕಾಲ್ಚಳಕದ ಮೂಲಕ ಅಭಿಮಾನಿಗಳ ಮನಗೆದ್ದ ಮೋಡಿಗಾರರು. ಇವರಂತೆ ಗೋಲ್‌ಕೀಪರ್‌ಗಳು ಕೂಡಾ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ ಸಾಕಷ್ಟು ಉದಾಹರಣೆಗಳಿವೆ. ಲೆವ್‌ ಯಾಶಿನ್‌, ಡಿನೊ ಜೊಫ್‌, ಇಕರ್‌ ಕ್ಯಾಸಿಲಸ್‌ ಹೀಗೆ ಅನೇಕರು ಅಮೋಘ ಗೋಲ್‌ಕೀಪಿಂಗ್‌ ಮೂಲಕ ಫುಟ್‌ಬಾಲ್‌ ಜಗತ್ತಿನಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದಾರೆ. ಆದರೆ ಇಂದಿಗೂ ಬಹುತೇಕರಿಗೆ ಈ ದಿಗ್ಗಜರ ಬಗ್ಗೆ ತಿಳಿದಿಲ್ಲ.

ತಂಡವೊಂದರ ಸೋಲು, ಗೆಲುವಿನಲ್ಲಿ ಗೋಲ್‌ಕೀಪರ್‌ಗಳ ಪಾತ್ರ ನಿರ್ಣಾಯಕವಾಗಿರುತ್ತದೆ. ಹೀಗಾಗಿಯೇ ಅವರನ್ನು ರಕ್ಷಣಾ ವಿಭಾಗದ ಕಮಾಂಡರ್‌ ಎಂದು ಕರೆಯಲಾಗುತ್ತದೆ. ‘ಮ್ಯಾನ್‌ ವಿಥ್‌ ದಿ ಮ್ಯಾಜಿಕ್‌ ಹ್ಯಾಂಡ್ಸ್‌’ ಎಂದೂ ಬಣ್ಣಿಸಲಾಗುತ್ತದೆ.

ಪೆನಾಲ್ಟಿ, ಪೆನಾಲ್ಟಿ ಶೂಟೌಟ್‌ ಮತ್ತು ಸಡನ್‌ ಡೆತ್‌ ಸಂದರ್ಭಗಳಲ್ಲಿ ಎದುರಾಳಿ ಆಟಗಾರರು ಮಿಂಚಿನ ಗತಿಯಲ್ಲಿ ಒದ್ದ ಚೆಂಡನ್ನು ತಡೆದು ತಂಡಕ್ಕೆ ಗೆಲುವು ತಂದುಕೊಡುವ ಸಂಪೂರ್ಣ ಜವಾಬ್ದಾರಿ ಗೋಲ್‌ಕೀಪರ್‌ಗಳದ್ದಾಗಿರುತ್ತದೆ. ಹೀಗಾಗಿ ಅವರ ಮೇಲೆ ಕೋಟ್ಯಂತರ ಅಭಿಮಾನಿಗಳ ಕಣ್ಣುಗಳು ನೆಟ್ಟಿರುತ್ತವೆ. ಇವರು ಸಂದಿಗ್ಧ ಪರಿಸ್ಥಿತಿಯಲ್ಲೂ ಒತ್ತಡವನ್ನು ಮೀರಿ ನಿಂತು ತಂಡಕ್ಕೆ ಜಯದ ಸಿಹಿ ಉಣಬಡಿಸಿದ್ದಾರೆ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಇದು ಮನದಟ್ಟಾಗುತ್ತದೆ.

ಕ್ರಾಂತಿಯ ನಾಡು ರಷ್ಯಾದಲ್ಲೂ ಗೋಲ್‌ಕೀಪರ್‌ಗಳು ಜಾದೂ ಮಾಡಿದ್ದಾರೆ. ಮಾಸ್ಕೊದಲ್ಲಿ ನಡೆದಿದ್ದ ರಷ್ಯಾ ಮತ್ತು ಸ್ಪೇನ್‌ ನಡುವಣ ಪಂದ್ಯ, ಕ್ರೊವೇಷ್ಯಾ ಮತ್ತು ಡೆನ್ಮಾರ್ಕ್‌ ನಡುವಣ ಹಣಾಹಣಿ ಹಾಗೂ ಇಂಗ್ಲೆಂಡ್‌ ಮತ್ತು ಕೊಲಂಬಿಯಾ ನಡುವಣ ಪೈಪೋಟಿಗಳು ಇದಕ್ಕೆ ಸಾಕ್ಷಿಯಾಗಿವೆ.

**
ಸಾರ್ವಕಾಲಿಕ ಶ್ರೇಷ್ಠ ಗೋಲ್‌ಕೀಪರ್‌ಗಳು

ಲೆವ್‌ ಯಾಶಿನ್‌ : ಸೋವಿಯತ್‌ ಯೂನಿಯನ್‌
ಯಾಶಿನ್‌ ಅವರು ವಿಶ್ವದ ಶ್ರೇಷ್ಠ ಆಟಗಾರರಿಗೆ ನೀಡುವ ಬ್ಯಾಲನ್‌ ಡಿ ಓರ್‌ ಗೌರವಕ್ಕೆ ಪಾತ್ರರಾದ ಏಕೈಕ ಗೋಲ್‌ಕೀಪರ್ ಎಂಬ ಹಿರಿಮೆ ಹೊಂದಿದ್ದಾರೆ. 1963ರಲ್ಲಿ ಅವರಿಗೆ ಈ ಗೌರವ ಸಂದಿತ್ತು. 1994ರಿಂದ 2006ರ ಅವಧಿಯಲ್ಲಿ ನಡೆದ ವಿಶ್ವಕಪ್‌ ಟೂರ್ನಿಗಳಲ್ಲಿ ಶ್ರೇಷ್ಠ ಗೋಲ್‌ಕೀಪರ್‌ಗಳಿಗೆ ‘ಯಾಸಿನ್‌ ಟ್ರೋಫಿ’ ನೀಡಲಾಗುತ್ತಿತ್ತು. ಈಗ ಇದನ್ನು ‘ಗೋಲ್ಡನ್‌ ಗ್ಲೌ’ ಎಂದು ಕರೆಯಲಾಗುತ್ತದೆ.

ಪಂದ್ಯಗಳು 13 
ಗೆಲುವು:6 
ಡ್ರಾ:2 
ಸೋಲು:5 
ಭಾಗವಹಿಸಿದ ವಿಶ್ವಕಪ್‌: 4 
ಕ್ಲೀನ್‌ ಶೀಟ್‌: 4

****
ಡಿನೊ ಜೋಫ್‌: ಇಟಲಿ 
ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದ ತಂಡವೊಂದರಲ್ಲಿ ಆಡಿದ ಅತಿ ಹಿರಿಯ ಆಟಗಾರ ಎಂಬ ದಾಖಲೆ ಜಾಫ್‌ ಅವರ ಹೆಸರಿನಲ್ಲಿದೆ.  40ರ ಹರೆಯದ ಡಿನೊ ಅವರ ನಾಯಕತ್ವದಲ್ಲಿ ಇಟಲಿ ತಂಡ 1982ರಲ್ಲಿ ವಿಶ್ವಕಪ್‌ ಜಯಿಸಿತ್ತು. ಆ ಟೂರ್ನಿಯಲ್ಲಿ ಡಿನೊ ‘ಗೋಲ್ಡನ್‌ ಬಾಲ್‌’ ಗೌರವಕ್ಕೆ ಪಾತ್ರರಾಗಿದ್ದರು. 
ಪಂದ್ಯ: 17 
ಗೆಲುವು:9 
ಡ್ರಾ:5 
ಸೋಲು:3 
ಭಾಗವಹಿಸಿದ ವಿಶ್ವಕಪ್‌: 4 
ಕ್ಲೀನ್‌ ಶೀಟ್‌: 5

****


ಡೇನಿಜೆಲ್‌ ಸುಬಾಸಿಕ್‌

ಇಕರ್‌ ಕ್ಯಾಸಿಲಾಸ್‌ : ಸ್ಪೇನ್‌ 
ವಿಶ್ವಕಪ್‌ನಲ್ಲಿ ತಂಡವೊಂದನ್ನು ಪ್ರಶಸ್ತಿಯೆಡೆಗೆ ಮುನ್ನಡೆಸಿದ ವಿಶ್ವದ ಮೂರನೇ ಗೋಲ್‌ಕೀಪರ್‌ ಎಂಬ ಹಿರಿಮೆ ಇಕರ್‌ ಅವರದ್ದು. ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ 100ಕ್ಕೂ ಹೆಚ್ಚು ಕ್ಲೀನ್‌ ಶೀಟ್‌ ಪಡೆದ ಮೊದಲ ಗೋಲ್‌ಕೀಪರ್‌ ಎಂಬ ದಾಖಲೆ ಇವರ ಹೆಸರಿನಲ್ಲಿದೆ. 
ಪಂದ್ಯ: 17 
ಗೆಲುವು: 11 
ಡ್ರಾ: 2 
ಸೋಲು: 4 
ವಿಶ್ವಕಪ್‌ನಲ್ಲಿ ಆಡಿದ್ದು: 3 
ಕ್ಲೀನ್‌ ಶೀಟ್ಸ್‌: 7
****
ಪೀಟರ್‌ ಶಿಲ್ಟನ್‌ : ಇಂಗ್ಲೆಂಡ್‌ 
1986ರ ವಿಶ್ವಕಪ್‌ನ ಇಂಗ್ಲೆಂಡ್‌ ಎದುರಿನ ಕ್ವಾರ್ಟರ್‌ ಫೈನಲ್‌ನಲ್ಲಿ ಅರ್ಜೆಂಟೀನಾದ ಡೀಗೊ ಮರಡೋನಾ ‘ಹ್ಯಾಂಡ್‌ ಆಫ್‌ ಗಾಡ್‌’ (ಕೈ ತಾಗಿಸಿ ಚೆಂಡನ್ನು ಗುರಿ ಮುಟ್ಟಿಸಿದ್ದು) ಗೋಲು ಗಳಿಸಿದ್ದಾಗ ಇಂಗ್ಲೆಂಡ್‌ ತಂಡದ ಗೋಲ್‌ಕೀಪರ್‌ ಆಗಿದ್ದವರು ಶಿಲ್ಟನ್‌. ವಿಶ್ವಕಪ್‌ನಲ್ಲಿ 10 ಕ್ಲೀನ್‌ ಶೀಟ್‌ ಪಡೆದು ಫ್ರಾನ್ಸ್‌ನ ಫಾಬಿಯಾನ್‌ ಬರ್ಥೆಜ್‌ ಹೆಸರಿನಲ್ಲಿದ್ದ (ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಕ್ಲೀನ್‌ ಶೀಟ್‌ ಪಡೆದ ಗೋಲ್‌ಕೀಪರ್‌) ದಾಖಲೆಯನ್ನು ಸರಿಗಟ್ಟಿದ್ದಾರೆ. 
ಪಂದ್ಯ: 17 
ಗೆಲುವು: 8  
ಡ್ರಾ: 6 
ಸೋಲು: 3 
ವಿಶ್ವಕಪ್‌ನಲ್ಲಿ ಭಾಗವಹಿಸಿದ್ದು: 3 
ಕ್ಲೀನ್‌ ಶೀಟ್‌: 10

****
ಸೆಪ್‌ ಮೇಯರ್‌ : ಜರ್ಮನಿ 
1974ರ ವಿಶ್ವಕಪ್‌ನಲ್ಲಿ ವೆಸ್ಟ್‌ ಜರ್ಮನಿ ತಂಡ ಪ್ರಶಸ್ತಿ ಗೆದ್ದಾಗ ಸೆಪ್‌ ತಂಡದಲ್ಲಿ ಆಡಿದ್ದರು. ಇವರು 1974ರಲ್ಲಿ ಫಿಫಾ ವಿಶ್ವಕಪ್‌ ಆಲ್‌ ಸ್ಟಾರ್ಸ್‌ ತಂಡದಲ್ಲಿ ಸ್ಥಾನ ಗಳಿಸಿದ್ದರು.
ಪಂದ್ಯ: 18 
ಗೆಲುವು: 11 
ಡ್ರಾ: 4 
ಸೋಲು: 3 
ವಿಶ್ವಕಪ್‌ನಲ್ಲಿ ಭಾಗವಹಿಸಿದ್ದು: 4 
ಕ್ಲೀನ್‌ ಶೀಟ್‌: 6

***
ಪೆನಾಲ್ಟಿ ಹೀರೊಗಳು  
ಪೆನಾಲ್ಟಿ ಅವಕಾಶಗಳಲ್ಲಿ ಎದುರಾಳಿ ಆಟಗಾರರ ಗೋಲುಗಳಿಕೆಯ ಪ್ರಯತ್ನಗಳನ್ನು ವಿಫಲಗೊಳಿಸಿ ತಮ್ಮ ತಂಡಗಳಿಗೆ ಗೆಲುವು ತಂದುಕೊಟ್ಟ ಪ್ರಮುಖ ಗೋಲ್‌ಕೀಪರ್‌ಗಳ ಪರಿಚಯ ಇಲ್ಲಿದೆ. 

ಸರ್ಜಿಯೊ ಗೊಯಕೊಚಿಯಾ: ಅರ್ಜೆಂಟೀನಾ 
1990ರ ವಿಶ್ವಕಪ್‌ನ ಯುಗೊಸ್ಲೇವಿಯಾ ಎದುರಿನ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಸರ್ಜಿಯೊ ಮೋಡಿ ಮಾಡಿದ್ದರು. ಎರಡು ಪೆನಾಲ್ಟಿ ಅವಕಾಶಗಳಲ್ಲಿ ಎದುರಾಳಿ ಆಟಗಾರರು ಬಾರಿಸಿದ ಚೆಂಡನ್ನು ಅಮೋಘ ರೀತಿಯಲ್ಲಿ ತಡೆದು ಅರ್ಜೆಂಟೀನಾ ಗೆಲುವಿನ ರೂವಾರಿಯಾಗಿದ್ದರು. ಇಟಲಿ ಎದುರಿನ ಸೆಮಿಫೈನಲ್‌ನಲ್ಲೂ ಮೋಡಿ ಮಾಡಿ ಅರ್ಜೆಂಟೀನಾ ತಂಡ ಫೈನಲ್‌ ಪ್ರವೇಶಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.
ಪಂದ್ಯ: 6  
ಗೆಲುವು: 2 
ಡ್ರಾ: 3 
ಸೋಲು: 1 
ವಿಶ್ವಕಪ್‌ನಲ್ಲಿ ಆಡಿದ್ದು: 1 
ಕ್ಲೀನ್‌ ಶೀಟ್‌: 1

***
ಜೊಯೆಲ್‌ ಬ್ಯಾಟ್ಸ್‌: ಫ್ರಾನ್ಸ್‌ 
1986ರಲ್ಲಿ ನಡೆದಿದ್ದ ವಿಶ್ವಕಪ್‌ನ ಕ್ವಾರ್ಟರ್‌ ಫೈನಲ್‌ ಪಂದ್ಯದ ನಿಗದಿತ ಅವಧಿಯಲ್ಲಿ ಬ್ರೆಜಿಲ್‌ಗೆ ಪೆನಾಲ್ಟಿ ಸಿಕ್ಕಿತ್ತು. ಈ ಅವಕಾಶದಲ್ಲಿ ಜಿಕೊ ಬಾರಿಸಿದ್ದ ಚೆಂಡನ್ನು ತಡೆದಿದ್ದ ಬ್ಯಾಟ್ಸ್‌, ಅಭಿಮಾನಿಗಳ ಮನ ಗೆದ್ದಿದ್ದರು. ಪೆನಾಲ್ಟಿ ಶೂಟೌಟ್‌ನಲ್ಲಿ ಥ್ರಾಟ್‌ ಸಾಕ್ರಟೀಸ್‌ ಅವರ ಪ್ರಯತ್ನ ವಿಫಲಗೊಳಿಸಿ ಫ್ರಾನ್ಸ್‌ ತಂಡ ಜಯಿಸಲು ನೆರವಾಗಿದ್ದರು. 
ಪಂದ್ಯ: 6 
ಗೆಲುವು: 3 
ಡ್ರಾ: 2 
ಸೋಲು:1 
ವಿಶ್ವಕಪ್‌ನಲ್ಲಿ ಆಡಿದ್ದು: 1 
ಕ್ಲೀನ್ ಶೀಟ್‌: 3

****
ಟಿಮ್‌ ಕ್ರುಲ್‌ : ನೆದರ್ಲೆಂಡ್ಸ್‌ 
2014ರ ವಿಶ್ವಕಪ್‌ ಟೂರ್ನಿಯ ಕೋಸ್ಟರಿಕಾ ಎದುರಿನ ಕ್ವಾರ್ಟರ್‌ ಫೈನಲ್‌ ಪಂದ್ಯದ ಹೆಚ್ಚುವರಿ ಅವಧಿಯಲ್ಲಿ ಕಣಕ್ಕಿಳಿದಿದ್ದ ಟಿಮ್‌, ಕೈಚಳಕ ತೋರಿದ್ದರು. ಪೆನಾಲ್ಟಿ ಶೂಟೌಟ್‌ನಲ್ಲಿ ಬ್ರಯಾನ್‌ ರುಯಿಜ್ ಮತ್ತು ಮೈಕಲ್ ಉಮಾನ ಅವರು ಒದ್ದ ಚೆಂಡುಗಳನ್ನು ತಡೆದು ನೆದರ್ಲೆಂಡ್ಸ್‌ ತಂಡ ಸೆಮಿಫೈನಲ್‌ಗೆ ಲಗ್ಗೆ ಇಡಲು ನೆರವಾಗಿದ್ದರು. 
ಪಂದ್ಯ: 1  
ಡ್ರಾ: 1 
ವಿಶ್ವಕಪ್‌ನಲ್ಲಿ ಆಡಿದ್ದು: 1 
ಕ್ಲೀನ್‌ ಶೀಟ್‌: 1

*******
ಕೇಲರ್‌ ನವಾಸ್‌: ಕೋಸ್ಟರಿಕಾ 
2014ರ ವಿಶ್ವಕಪ್‌ನಲ್ಲಿ ಕೋಸ್ಟರಿಕಾ ತಂಡ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವಲ್ಲಿ ನವಾಸ್‌ ಪಾತ್ರ ಮಹತ್ವದ್ದಾಗಿತ್ತು. ನೆದರ್ಲೆಂಡ್ಸ್‌ ಎದುರಿನ ಪ್ರೀ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಥೆಯೊಫಾನಿಸ್‌ ಜಿಕಾಸ್‌ ಬಾರಿಸಿದ ಚೆಂಡನ್ನು ನವಾಸ್‌ ಆಕರ್ಷಕ ರೀತಿಯಲ್ಲಿ ತಡೆದು ಅಭಿಮಾನಿಗಳ ಮನ ಗೆದ್ದಿದ್ದರು. 
ಪಂದ್ಯ: 8 
ಗೆಲುವು: 2 
ಡ್ರಾ: 4 
ಸೋಲು: 2 
ವಿಶ್ವಕಪ್‌ನಲ್ಲಿ ಆಡಿದ್ದು: 2 
ಕ್ಲೀನ್‌ ಶೀಟ್‌: 3

***
ಶತಮಾನದ ಶ್ರೇಷ್ಠ ‘ಸೇವ್‌’ 
ಗೋರ್ಡನ್‌ ಬ್ಯಾಂಕ್ಸ್‌: ಇಂಗ್ಲೆಂಡ್‌ 
1970ರಲ್ಲಿ ನಡೆದಿದ್ದ ಬ್ರೆಜಿಲ್‌ ಎದುರಿನ ವಿಶ್ವಕಪ್‌ ಪಂದ್ಯದಲ್ಲಿ ಪೆಲೆ ಅವರು ತಲೆತಾಗಿಸಿ (ಹೆಡರ್‌) ಗುರಿಯೆಡೆಗೆ ಕಳುಹಿಸಿದ ಚೆಂಡನ್ನು  ಬ್ಯಾಂಕ್ಸ್‌ ತಮ್ಮ ಬಲ ಭಾಗಕ್ಕೆ ಜಿಗಿದು ಆಕರ್ಷಕ ರೀತಿಯಲ್ಲಿ ತಡೆದಿದ್ದರು. ಇದನ್ನು ‘ಸೇವ್‌ ಆಫ್‌ ದಿ ಸೆಂಚೂರಿ’ ಎಂದೇ ಕರೆಯಲಾಗುತ್ತದೆ. 
ಪಂದ್ಯ: 9 
ಗೆಲುವು: 7 
ಡ್ರಾ: 1 
ಸೋಲು: 1 
ವಿಶ್ವಕಪ್‌ನಲ್ಲಿ ಆಡಿದ್ದು: 3 
ಕ್ಲೀನ್‌ ಶೀಟ್‌: 6

******


ಜೋರ್ಡನ್‌ ಪಿಕ್‌ಫೋರ್ಡ್‌

ಈ ಬಾರಿಯ ಪೆನಾಲ್ಟಿ ಹೀರೊಗಳು

ಇಗರ್‌ ಅಕಿನ್‌ಫೀವ್‌: ರಷ್ಯಾ 
ಈ ಬಾರಿಯ ವಿಶ್ವಕ‍‍ಪ್‌ನ ಮೊದಲ ಶೂಟೌಟ್‌ನಲ್ಲಿ ರಷ್ಯಾ ತಂಡ ಸ್ಪೇನ್‌ ಸವಾಲು ಮೀರಿತ್ತು. ಈ ಹಣಾಹಣಿಯಲ್ಲಿ ಆತಿಥೇಯರ ಜಯದ ರೂವಾರಿಯಾಗಿದ್ದು ನಾಯಕ ಹಾಗೂ ಗೋಲ್‌ಕೀಪರ್‌ ಅಕಿರ್‌ ಇಕಾನಫೀವ್‌. ಶೂಟೌಟ್‌ನಲ್ಲಿ ಅವರು ಕೊಕೆ ಮತ್ತು ಇಯಾಗೊ ಅಸ್ಪಸ್‌ ಅವರ ಪ್ರಯತ್ನಗಳನ್ನು ವಿಫಲಗೊಳಿಸಿದ್ದರು.

***
ಡೇನಿಜೆಲ್‌ ಸುಬಾಸಿಕ್‌: ಕ್ರೊವೇಷ್ಯಾ 
‌ಈ ಬಾರಿ ಕ್ರೊವೇಷ್ಯಾ ತಂಡ ಎಂಟರ ಘಟ್ಟ ಪ್ರವೇಶಿಸುವಲ್ಲಿ ಸುಬಾಸಿಕ್‌ ನಿರ್ಣಾಯಕ ಪಾತ್ರವಹಿಸಿದ್ದರು. ನಿಜ್ನಿ ನೊವಗೊರೊದ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಡೆನ್ಮಾರ್ಕ್‌ ಎದುರಿನ ಪ್ರೀ ಕ್ವಾರ್ಟರ್‌ ಫೈನಲ್‌ ಹಣಾಹಣಿಯ ಪೆನಾಲ್ಟಿ ಶೂಟೌಟ್‌ನಲ್ಲಿ ಸುಬಾಸಿಕ್‌ ಮಿಂಚಿದ್ದರು. ಅವರು ಕ್ರಿಸ್ಟಿಯನ್‌ ಎರಿಕ್ಸನ್‌, ಲಾಸೆ ಶೋನ್‌ ಮತ್ತು ನಿಕೊಲಾಯ್‌ ಜೋರ್ಗೆನ್ಸನ್‌ ಅವರು ಒದ್ದ ಚೆಂಡುಗಳನ್ನು ತಡೆದು ಕ್ರೊವೇಷ್ಯಾ ಆಟಗಾರರ ಸಂಭ್ರಮಕ್ಕೆ ಕಾರಣರಾಗಿದ್ದರು.

***
ಜೋರ್ಡನ್‌ ಪಿಕ್‌ಫೋರ್ಡ್‌: ಇಂಗ್ಲೆಂಡ್‌ 
ಕೊಲಂಬಿಯಾ ವಿರುದ್ಧದ ಪ್ರೀ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಪಿಕ್‌ಫೋರ್ಡ್‌ ಚಮತ್ಕಾರ ಮಾಡಿದ್ದರು. ಎದುರಾಳಿ ತಂಡದ ಕಾರ್ಲೊಸ್‌ ಬಾಕಾ ಅವರ ಪ್ರಯತ್ನಕ್ಕೆ ಅಡ್ಡಗಾಲಾಗಿದ್ದ ಜೋರ್ಡನ್‌, ಇಂಗ್ಲೆಂಡ್‌ ತಂಡದ ಜಯದ ರೂವಾರಿ ಎನಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !