ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ರಂದು ಕಡ್ತೂರಿನಲ್ಲಿ ‘ಸುವರ್ಣ ಸಂಭ್ರಮ’

ಅಮೃತ ಮಹೋತ್ಸವಕ್ಕೆ ಅಣಿಯಾದ ಕಡ್ತೂರು ಸರ್ಕಾರಿ ಪ್ರಾಥಮಿಕ ಶಾಲೆ
Last Updated 1 ಮಾರ್ಚ್ 2018, 11:40 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ನಿತ್ಯ ಹರಿದ್ವರ್ಣ ಪಶ್ಚಿಮ ಘಟ್ಟ ಸಾಲಿನ ಕಡು ಹಸಿರು ಕಾನನದ ನಡುವೆ ಸ್ವಾತಂತ್ರ್ಯಪೂರ್ವದಲ್ಲಿ ಆರಂಭಗೊಂಡ ಹಳೇಕೆಸಲೂರು (ಕಡ್ತೂರು) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತಳಹದಿ ಹಾಕುವ ಮೂಲಕ ಅನೇಕರ ಬದುಕಲ್ಲಿ ಜ್ಞಾನದ ಬೆಳಕನ್ನು ಮೂಡಿಸಿದೆ.

ತೀರ್ಥಹಳ್ಳಿಯಿಂದ ಕಮ್ಮರಡಿ ಮಾರ್ಗವಾಗಿ ಶೃಂಗೇರಿಗೆ ಹೋಗುವ ದಾರಿಯಲ್ಲಿನ ಕಡ್ತೂರಿನಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲವು ಹಿರಿಮೆಯನ್ನು ತನ್ನದಾಗಿಸಿಕೊಂಡಿದೆ. 1942ರಲ್ಲಿ ಕಡ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮದ ಶಿಕ್ಷಣ ಪ್ರೇಮಿಗಳ ಉತ್ಸಾಹ ಹಾಗೂ ಆಸಕ್ತಿಯಿಂದ ಆರಂಭವಾದ ಶಾಲೆ ಈಗ ಅಮೃತ ಮಹೋತ್ಸವ ಸಂಭ್ರಮದ ಹೊಸ್ತಿಲಿನಲ್ಲಿದೆ.

75 ವಸಂತಗಳನ್ನು ಕಂಡ ಕಡ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ಕಲಿತ ಸಾವಿರಾರು ಮಂದಿ ಘನತೆಯ ಬದುಕನ್ನು ಕಟ್ಟಿಕೊಂಡಿದ್ದಾರೆ. ಆರಂಭದಲ್ಲಿ ಶಿಕ್ಷಣ ಪಡೆದ ಅನೇಕರು ಕಾಲವಾಗಿದ್ದರೂ ಶಾಲೆಯೊಂದಿಗಿನ ನಂಟನ್ನು ಅವರ ಕುಟುಂಬಗಳು ಇನ್ನೂ ತೊರೆದಿಲ್ಲ. ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ, ಬದುಕಿಗೆ ಭದ್ರ ನೆಲೆ ಕಲ್ಪಿಸಿರುವ ಈ ಶಾಲೆ ‘ಅಮೃತ ಸಂಭ್ರಮ’ ಆಚರಿಸುತ್ತಿರುವುದು ಸುತ್ತಮುತ್ತಲಿನ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡುವಂತಾಗಿದೆ.

ಮಾರ್ಚ್‌ 3ರಂದು ನಡೆಯಲಿರುವ ಅಮೃತ ಮಹೋತ್ಸವಕ್ಕೆ ಕಡ್ತೂರು ಸಜ್ಜುಗೊಂಡಿದೆ. ಅಮೃತ ಮಹೋತ್ಸವದ ಸವಿನೆನಪಿಗಾಗಿ ಶಾಲೆಗೆ ಭವ್ಯ ರಂಗಮಂದಿರ ನಿರ್ಮಿಸಲಾಗುತ್ತಿದ್ದು, ಅದರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಶಾಲೆಯಲ್ಲಿ ಹೆಚ್ಚಾಗಿ ಬಡ ವಿದ್ಯಾರ್ಥಿಗಳೇ ವ್ಯಾಸಂಗ ಮಾಡುತ್ತಿದ್ದು, ಅವರ ಕಲಿಕೆಗೆ ಪೂರಕವಾಗುವಂಥ ನೂತನ ಪರಿಕರಗಳನ್ನು ಅಳವಡಿಸಿಕೊಳ್ಳಲು ಚಿಂತಿಸಲಾಗಿದೆ. ವಿದ್ಯಾರ್ಥಿಗಳ ಗುಣಾತ್ಮಕ ಕಲಿಕೆಗೆ ಅವಶ್ಯವಿರುವ ಆಧುನಿಕ ಕಲಿಕಾ ಸಾಮಗ್ರಿಗಳನ್ನು ದಾನಿಗಳಿಂದ ಪಡೆಯಲು ನಿರ್ಧರಿಸಲಾಗಿದೆ. ಗ್ರಾಮೀಣ ಭಾಗದ ಶೈಕ್ಷಣಿಕ ಉನ್ನತಿಗೆ ಕೊಡುಗೆಯಾಗಬಲ್ಲ ದಾನಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಹಕಾರ ನೀಡಲು ಮುಂದೆ ಬರುತ್ತಿದ್ದಾರೆ ಎಂದು ಶಾಲೆಯ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ, ಹಳೆ ವಿದ್ಯಾರ್ಥಿ ಕಡ್ತೂರು ಶ್ರೀನಿವಾಸಗೌಡ ಹೆಮ್ಮೆಯಿಂದ ಹೇಳುತ್ತಾರೆ.

ಬೆಂಗಳೂರಿನ ಸೆಲ್ಕೊ ಸೋಲಾರ್‌ ಪ್ರೈ. ಲಿಮಿಟೆಡ್‌ನ ಸಹಕಾರದಿಂದ ಶಾಲೆಗೆ ಸ್ಮಾರ್ಟ್‌ ಕ್ಲಾಸ್‌ ಸೌಲಭ್ಯವನ್ನು ಜೋಡಿಸಲಾಗಿದೆ. ಈ ಸೌಲಭ್ಯವನ್ನು ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಉದ್ಘಾಟನೆಗೆ ಸಿದ್ಧಪಡಿಸಿಕೊಳ್ಳಲಾಗಿದೆ. ಶಾಲೆಯ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ದುಡಿದ ಎಸ್‌.ಬಿ.ಸಿ ಮತ್ತು ಎಸ್‌ಡಿಎಂಸಿ ಮಾಜಿ ಅಧ್ಯಕ್ಷರು, ಶಿಕ್ಷಕರನ್ನು ಸುವರ್ಣ ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು ಎನ್ನುತ್ತಾರೆ ಅವರು.

ಶಾಲೆಯ ಸಮಗ್ರ ಪ್ರಗತಿಗೆ ಮತ್ತು ಅಭಿವೃದ್ಧಿಗೆ ವಿಶೇಷ ಕಾಳಜಿ ಹಾಗೂ ಸಹಕಾರ ನೀಡಿದ ಸ್ಥಳೀಯ ಜನಪ್ರತಿನಿಧಿಗಳು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಇಲಾಖೆಯ ಅಧಿಕಾರಿ ಸಿಬ್ಬಂದಿ, ಹಿಂದಿನ ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರ ಸಹಕಾರವನ್ನು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎಚ್‌.ಎ.ದಿವಾಕರ್‌, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಬಿ.ಗಣಪತಿ, ಮುಖ್ಯ ಶಿಕ್ಷಕಿ ಕೆ.ಆಶಾಬಿ ಸ್ಮರಿಸುತ್ತಾರೆ.

ಅಮೃತ ಸಂಭ್ರಮ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಪ್ರೌಢ ಶಾಲೆ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದೊಂದಿಗೆ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂಭ್ರಮಾಚರಣೆಯಲ್ಲಿ ವಿದ್ಯಾಭಿಮಾನಿಗಳು, ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು ಪಾಲ್ಗೊಳ್ಳುವಂತೆ ಅಮೃತ ಮಹೋತ್ಸವ ಸಮಿತಿ ಮನವಿಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT