ಶನಿವಾರ, ಏಪ್ರಿಲ್ 4, 2020
19 °C

ಐಎಸ್‌ಎಲ್‌ ‘ಹೀರೊ’ಗಳು...

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ಸತತ ಐದು ತಿಂಗಳ ಕಾಲ ಭಾರತದ ಫುಟ್‌ಬಾಲ್ ಪ್ರಿಯರು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದ್ದ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಗೆ ತೆರೆ ಬಿದ್ದಿದೆ. ಆರನೇ ಆವೃತ್ತಿಯ ಕಿರೀಟ ಯಾರ ಮುಡಿಗೇರಲಿದೆ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಾಗಿದೆ. ಕೊರೊನಾ ಸೋಂಕು ಹರಡುವ ಆತಂಕದಿಂದಾಗಿ ಗೋವಾದಲ್ಲಿ ಶನಿವಾರ ಖಾಲಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಎಟಿಕೆ ಎಫ್‌ಸಿ ತಂಡ ಚೆನ್ನೈಯಿನ್‌ ಎಫ್‌ಸಿಯನ್ನು ಮಣಿಸಿದೆ. ಇದರೊಂದಿಗೆ ಮೂರನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಕೋಲ್ಕತ್ತದ ತಂಡವು ಲೀಗ್‌ನಲ್ಲಿ ಅತಿ ಹೆಚ್ಚು ಟ್ರೋಫಿ ಗೆದ್ದ ದಾಖಲೆ ನಿರ್ಮಿಸಿದೆ. ಈ ಸಲವು ಕೆಲ ಆಟಗಾರರು, ಕಾಲ್ಚಳಕದ ಮೂಲಕ ಅಭಿಮಾನಿಗಳನ್ನು ಪುಳಕಿತರನ್ನಾಗಿಸಿದ್ದಾರೆ. ತಮ್ಮ ತಂಡಗಳ ಯಶಸ್ಸಿನಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದಾರೆ. ಅಂತಹ ‘ಹೀರೊ’ಗಳ ಪರಿಚಯ ಇಲ್ಲಿದೆ. 

**** 

ನೆರಿಜಸ್‌ ವಲಸ್ಕಿಸ್‌

ಚಿನ್ನದ ಬೂಟು...

ಇದು, ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದವರಿಗೆ ನೀಡುವ ಪ್ರಶಸ್ತಿ. ಇದಕ್ಕಾಗಿ ಈ ಬಾರಿ ಮೂರು ಮಂದಿಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಹೀಗಾಗಿ ಈ ಗೌರವ ಯಾರಿಗೆ ಒಲಿಯಬಹುದೆಂಬ ಸಣ್ಣ ಕುತೂಹಲ ಅಭಿಮಾನಿಗಳಲ್ಲೂ ಮನೆ ಮಾಡಿತ್ತು. ಎಟಿಕೆ ಎದುರಿನ ಫೈನಲ್‌ನಲ್ಲಿ ಗೋಲು ಹೊಡೆದ ಚೆನ್ನೈಯಿನ್‌ ತಂಡದ ನೆರಿಜಸ್‌, ಈ ಪ್ರಶಸ್ತಿಯ ಒಡೆಯರಾದರು. 

ನೆರಿಜಸ್‌, ಲಿಥುವೇನಿಯಾದ ಪ್ರತಿಭಾವಂತ ಆಟಗಾರ. ಇವರು ವೃತ್ತಿಪರ ಫುಟ್‌ಬಾಲ್‌ಗೆ ಅಡಿ ಇಟ್ಟಿದ್ದು 2004ರಲ್ಲಿ. 2012–13ನೇ ಋತು ನೆರಿಜಸ್‌ ವೃತ್ತಿಬದುಕಿಗೆ ಮಹತ್ವದ ತಿರುವು ನೀಡಿತ್ತು. ಲಿಥುವೇನಿಯಾದ ‘ಎ’ ಲೀಗಾ ಟೂರ್ನಿಯಲ್ಲಿ ಸುದುವಾ ಕ್ಲಬ್‌ ಪರ ಆಡಿದ್ದ ಅವರು 30 ಪಂದ್ಯಗಳಿಂದ 27 ಗೋಲುಗಳನ್ನು ದಾಖಲಿಸಿ ಗಮನ ಸೆಳೆದಿದ್ದರು. ಬಳಿಕ ಬೆಲಾರಸ್‌, ಪೋಲೆಂಡ್‌, ರುಮೇನಿಯಾ, ಥಾಯ್ಲೆಂಡ್‌ ಸೇರಿ‌ದಂತೆ ವಿವಿಧ ದೇಶಗಳ ಕ್ಲಬ್‌ಗಳನ್ನು ಪ್ರತಿನಿಧಿಸಿ ಮಿಂಚಿದ್ದರು.

ಐಎಸ್‌ಎಲ್‌ ಆಯೋಜಿಸುತ್ತಿರುವ ಫುಟ್‌ಬಾಲ್‌ ಸ್ಪೋರ್ಟ್ಸ್‌ ಡೆವಲಪ್‌ಮೆಂಟ್‌ ಲಿಮಿಟೆಡ್‌ (ಎಫ್‌ಎಸ್‌ಡಿಎಲ್‌) ಕೆಲ ತಾಂತ್ರಿಕ ಕಾರಣಗಳಿಂದಾಗಿ  ನೆರಿಜಸ್‌ಗೆ ಲೀಗ್‌ನಲ್ಲಿ ಆಡಲು ಅನುಮತಿ ನಿರಾಕರಿಸಿತ್ತು. ಲಿಥುವೇನಿಯಾದ ಪರ 26 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ನೆರಿಜಸ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲೇಬೇಕೆಂದು ಹಠ ಹಿಡಿದ ಚೆನ್ನೈಯಿನ್‌ ಫ್ರಾಂಚೈಸ್‌ ಇದರಲ್ಲಿ ಯಶಸ್ವಿಯೂ ಆಯಿತು. ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್‌ ಮತ್ತು ಭಾರತದ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಮಾಲೀಕತ್ವದ ತಂಡವು, ಹೋದ ವರ್ಷದ ಜುಲೈನಲ್ಲಿ ನೆರಿಜಸ್‌ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಫ್ರಾಂಚೈಸ್‌ನ ಈ ನಂಬಿಕೆಯನ್ನು ನೆರಿಜಸ್‌ ಹುಸಿ ಮಾಡಲಿಲ್ಲ. ಈ ಬಾರಿಯ ಲೀಗ್‌ನಲ್ಲಿ ಅಮೋಘ ಆಟ ಆಡಿ ಚೆನ್ನೈಯಿನ್‌ ತಂಡ ರನ್ನರ್ಸ್‌ ಅಪ್‌ ಆಗುವಲ್ಲಿ ಮಹತ್ವದ ಪಾತ್ರ ವಹಿಸಿದರು.

ವಯಸ್ಸು: 32

ಆಡುವ ಸ್ಥಾನ: ಫಾರ್ವರ್ಡ್‌

ಪಂದ್ಯ: 20

ಆಡಿದ ಒಟ್ಟು ನಿಮಿಷ: 1,620

ಗೋಲು: 15

ಪಾಸ್‌ಗಳು: 470

ಟ್ಯಾಕಲ್‌: 12

ಟಚ್‌ಗಳು: 633

********

ರಾಯ್‌ ಕೃಷ್ಣ

ಫಿಜಿ ದೇಶದ ಪ್ರತಿಭೆ, ರಾಯ್ ಕೃಷ್ಣ. ಅವರ ಪೂರ್ವಜರು ಕೋಲ್ಕತ್ತ ಮೂಲದವರು. ಈ ಬಾರಿ ಐಎಸ್‌ಎಲ್‌ಗೆ ಪದಾರ್ಪಣೆ ಮಾಡಿದ್ದ ರಾಯ್‌, ಆಟಗಾರನಾಗಿ ಮಾತ್ರವಲ್ಲ, ನಾಯಕನಾಗಿಯೂ ಸೈ ಎನಿಸಿಕೊಂಡರು. ಎಟಿಕೆ ಎಫ್‌ಸಿಯನ್ನು ದಾಖಲೆಯ ಮೂರನೇ ಪ್ರಶಸ್ತಿಯತ್ತ ಮುನ್ನಡೆಸಿದ ಹಿರಿಮೆಗೂ ಪಾತ್ರರಾದರು.

2007ರಲ್ಲಿ ಫಿಜಿ ಸೀನಿಯರ್‌ ತಂಡದ ಪರ ಆಡುವ ಮೂಲಕ ಫುಟ್‌ಬಾಲ್ ಪಯಣ ಆರಂಭಿಸಿದ್ದ ರಾಯ್‌, ಅದೇ ವರ್ಷದ ಆಗಸ್ಟ್‌ನಲ್ಲಿ ನಡೆದಿದ್ದ ಸೌತ್‌ ಪೆಸಿಫಿಕ್‌ ಕ್ರೀಡಾಕೂಟದಲ್ಲಿ ಮೋಡಿ ಮಾಡಿದ್ದರು. ಟುವಲು ವಿರುದ್ಧದ ಪಂದ್ಯದಲ್ಲಿ ಅವರಿಂದ ‘ಹ್ಯಾಟ್ರಿಕ್‌’ ಸಾಧನೆ ಮೂಡಿಬಂದಿತ್ತು. ನ್ಯೂಜಿಲೆಂಡ್‌ನ ವೇಟ್ಕೆರ್‌ ಯುನೈಟೆಡ್‌ ಕ್ಲಬ್‌ ಪರ 75 ಪಂದ್ಯಗಳನ್ನು ಆಡಿ 55 ಗೋಲುಗಳನ್ನು ದಾಖಲಿಸಿದ್ದ ರಾಯ್‌, ಐಎಸ್‌ಎಲ್‌ನಲ್ಲೂ ‘ಮ್ಯಾಜಿಕ್‌’ ಮಾಡಿದರು. ಎಟಿಕೆ ಎಫ್‌ಸಿ ಸೋಲಿನ ಆತಂಕ ಎದುರಿಸಿದಾಗಲೆಲ್ಲಾ ತಂಡಕ್ಕೆ ಆಸೆಯಾಗಿದ್ದ ಅವರು ಕೆಲ ಪಂದ್ಯಗಳಲ್ಲಿ ಏಕಾಂಗಿಯಾಗಿ ಗೆಲುವನ್ನೂ ತಂದುಕೊಟ್ಟಿದ್ದರು. 

ವಯಸ್ಸು: 32

ಆಡುವ ಸ್ಥಾನ: ಫಾರ್ವರ್ಡ್‌

ಪಂದ್ಯ: 21

ಆಡಿದ ಒಟ್ಟು ನಿಮಿಷ: 1,834

ಗೋಲು: 15

ಪಾಸ್‌ಗಳು: 512

ಟ್ಯಾಕಲ್‌: 56

ಟಚ್‌ಗಳು: 702

**

ಬಾರ್ಥೊಲೊಮೆವ್‌ ಒಗ್‌ಬೆಚೆ  

ಈ ಬಾರಿ ಕೇರಳ ಬ್ಲಾಸ್ಟರ್ಸ್‌ ಎಫ್‌ಸಿ ತಂಡ ಗುಂಪು ಹಂತದಲ್ಲೇ ಹೊರಬಿದ್ದರೂ ಎಲ್ಲರ ಗಮನ ಸೆಳೆದಿದ್ದು ಆ ತಂಡದ ಒಗ್‌ಬೆಚೆ. ನೈಜೀರಿಯಾದ ಈ ಆಟಗಾರ, ಐದನೇ ಆವೃತ್ತಿಯಲ್ಲಿ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡದ ಸಾರಥ್ಯ ವಹಿಸಿದ್ದರು. 18 ಪಂದ್ಯಗಳಿಂದ 12 ಗೋಲುಗಳನ್ನು ದಾಖಲಿಸಿ ಮಿಂಚಿದ್ದರು. ಈ ಬಾರಿಯೂ ಆಕ್ರಮಣಕಾರಿ ಆಟದ ಮೂಲಕ ಎದುರಾಳಿ ತಂಡದ ರಕ್ಷಣಾ ವಿಭಾಗದ ಆಟಗಾರರು ಹಾಗೂ ಗೋಲ್‌ಕೀಪರ್‌ಗಳಲ್ಲಿ ನಡುಕ ಹುಟ್ಟಿಸಿದರು. ಒಗ್‌ಬೆಚೆ ಅವರು 15ನೇ ವಯಸ್ಸಿನಲ್ಲಿ ಫ್ರಾನ್ಸ್‌ನ ಪ್ರತಿಷ್ಠಿತ ಪ್ಯಾರಿಸ್‌ ಸೇಂಟ್‌ ಜರ್ಮೈನ್‌ ಯೂತ್ ಕ್ಲಬ್‌ ಪರ ಆಡಿದ್ದರು. 2002ರ ಫಿಫಾ ವಿಶ್ವಕಪ್‌ನಲ್ಲಿ ನೈಜೀರಿಯಾ ಪರ ಕಣಕ್ಕಿಳಿದ ಹಿರಿಮೆ ಇವರದ್ದು. ‌

ವಯಸ್ಸು: 35

ಆಡುವ ಸ್ಥಾನ: ಫಾರ್ವರ್ಡ್‌

ಪಂದ್ಯ: 16

ಆಡಿದ ಒಟ್ಟು ನಿಮಿಷ: 1,318

ಗೋಲು: 15

ಪಾಸ್‌ಗಳು: 301

ಟ್ಯಾಕಲ್‌: 21

ಟಚ್‌ಗಳು: 442

*****

ಫೆರಾನ್ ಕೊರೊಮಿನಾಸ್‌

ಐಎಸ್‌ಎಲ್‌ನ ಯಶಸ್ವಿ ಆಟಗಾರರಲ್ಲಿ ಕೊರೊಮಿನಾಸ್‌ ಕೂಡ ಒಬ್ಬರು. 2017ರಲ್ಲಿ ಎಫ್‌ಸಿ ಗೋವಾ ಸೇರಿದ ಅವರು ಸ್ಥಿರ ಸಾಮರ್ಥ್ಯದ ಮೂಲಕ ಗೋವಾ ತಂಡದ ಆಧಾರಸ್ಥಂಭವಾಗಿದ್ದಾರೆ. ಸ್ಪೇನ್‌ನ ಈ ಆಟಗಾರ ಇದುವರೆಗೂ ಐಎಸ್‌ಎಲ್‌ನಲ್ಲಿ 57 ಪಂದ್ಯಗಳನ್ನು ಆಡಿದ್ದಾರೆ. ಅವರ ಕಾಲ್ಚಳಕದಲ್ಲಿ 48 ಗೋಲುಗಳು ಅರಳಿವೆ.

ಹಿಂದಿನ ಎರಡು ಆವೃತ್ತಿಗಳಲ್ಲೂ (2017–18 ಮತ್ತು 2018–19) ‘ಚಿನ್ನದ ಬೂಟು’ ಪ್ರಶಸ್ತಿಗಳನ್ನು ಪಡೆದಿದ್ದ ‘ಕೊರೊ’, ಈ ಬಾರಿಯೂ ಗೋಲುಗಳ ಗೋಪುರ ಕಟ್ಟಿದ್ದಾರೆ. ಪ್ರತಿಷ್ಠಿತ ಲಾ ಲಿಗಾ ಟೂರ್ನಿಯಲ್ಲಿ ಎಸ್ಪಾನ್ಯೊಲ್‌ ಕ್ಲಬ್‌ ಪರ ಆಡುವ ಕೊರೊಮಿನಾಸ್‌, ಹೋದ ವರ್ಷ ನಡೆದಿದ್ದ ಸೂಪರ್‌ ಕಪ್‌ನಲ್ಲಿ ಗೋವಾ ತಂಡ ಕಿರೀಟ ಮುಡಿಗೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.  

ವಯಸ್ಸು: 37

ಆಡುವ ಸ್ಥಾನ: ಫಾರ್ವರ್ಡ್‌

ಪಂದ್ಯ: 17

ಆಡಿದ ಒಟ್ಟು ನಿಮಿಷ: 1,509

ಗೋಲು: 14

ಪಾಸ್‌ಗಳು: 549

ಟ್ಯಾಕಲ್‌: 24

ಟಚ್‌ಗಳು: 650 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು