ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಎಫ್‌ಸಿಗೆ ಅಜೇಯ ಓಟ ಮುಂದುವರಿಸುವ ತವಕ

ಇಂಡಿಯನ್‌ ಸೂಪರ್ ಲೀಗ್ ಫುಟ್‌ಬಾಲ್‌ ಟೂರ್ನಿ: ಇಂದು ಜಮ್ಶೆಡ್‌ಪುರ ಎದುರಾಳಿ
Last Updated 1 ಡಿಸೆಂಬರ್ 2020, 13:04 IST
ಅಕ್ಷರ ಗಾತ್ರ

ವಾಸ್ಕೊ: ಹೈದರಾಬಾದ್ ಎಫ್‌ಸಿ ತಂಡವು ಜಮ್ಶೆಡ್‌ಪುರ ಎಫ್‌ಸಿ ವಿರುದ್ಧದ ಅಜೇಯ ಓಟವನ್ನು ಮುಂದುವರಿಸುವ ತವಕದಲ್ಲಿದೆ. ಇಂಡಿಯನ್‌ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಬುಧವಾರ ಉಭಯ ತಂಡಗಳು ಮುಖಾಮುಖಿಯಾಗಲಿವೆ. ತಿಲಕ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.

ಕೋಚ್‌ ಮ್ಯಾನೊಲೊ ಮಾರ್ಕ್‌ವೆಜ್‌ ಗರಡಿಯಲ್ಲಿ ಪಳಗಿರುವ ಹೈದರಾಬಾದ್ ತಂಡವು ಟೂರ್ನಿಯಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಅಜೇಯವಾಗಿದೆ. ಸದ್ಯ ಅದು ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಓವೆನ್ ಕೊಯ್ಲೆ ತರಬೇತುದಾರರಾಗಿರುವ ಜಮ್ಶೆಡ್‌ಪುರ ಎಫ್‌ಸಿ 9ನೇ ಸ್ಥಾನದಲ್ಲಿದೆ.

ಜಮ್ಶೆಡ್‌ಪುರ ತಂಡವು ಮೊದಲ ಹಣಾಹಣಿಯಲ್ಲಿ 1–2ರಿಂದ ಚೆನ್ನೈಯಿನ್‌ ಎಫ್‌ಸಿ ಎದುರು ನಿರಾಸೆ ಅನುಭವಿಸಿತ್ತು. ಭಾನುವಾರ ಒಡಿಶಾ ವಿರುದ್ಧದ ಪಂದ್ಯದಲ್ಲಿ 2–2ರ ಡ್ರಾ ಸಾಧಿಸಿತ್ತು.

ಕೊಯ್ಲೆ ಗರಡಿಯಲ್ಲಿ ಅಮರ್‌ಜೀತ್‌ ಸಿಂಗ್‌, ನರೇಂದ್ರ ಗೆಹ್ಲೋಟ್‌, ಜೀತೆಂದರ್‌ ಸಿಂಗ್ ಹಾಗೂ ಇಸಾಕ್‌ ವನ್ಮಲ್ಸವಮಾ ಅವರಂತಹ ಪ್ರತಿಭಾವಂತ ಆಟಗಾರರಿದ್ದಾರೆ. ಪೀಟರ್ ಹಾರ್ಟ್‌ಲಿ, ಸ್ಟೀಫನ್‌ ಎಜೆ, ಲಾಲ್‌ದಿನ್ಲಿಯಾನಾ ರೆಂಥ್ಲೆ, ಜಾಕಿಚಂದ್‌ ಸಿಂಗ್‌ ಹಾಗೂ ರಿಕಿ ಲಲ್ಲಾವಮ್‌ವಮಾ ತಂಡದ ಶಕ್ತಿಯಾಗಿದ್ದಾರೆ.

ಲೀಗ್‌ನಲ್ಲಿ ಹೆಚ್ಚು ಗೋಲು ದಾಖಲಿಸಿರುವ ಆಟಗಾರ (ಎರಡು ಪಂದ್ಯಗಳಿಂದ ಮೂರು ಗೋಲು) ಎನಿಸಿಕೊಂಡಿರುವ ನೆರಿಜುಸ್‌ ವಲ್ಕಿಸ್ ಅವರು ಹೈದರಾಬಾದದ ತಂಡಕ್ಕೆ ಸವಾಲಾಗಲಿದ್ದಾರೆ.

ಹೈದರಾಬಾದ್‌ ತಂಡ ಹೋದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಎದುರು ಗೋಲುರಹಿತ ಡ್ರಾ ಸಾಧಿಸಿತ್ತು. ಆಟಗಾರರು ಆ ಪಂದ್ಯದಲ್ಲಿ ಅದ್ಭುತ ಆಟವಾಡಿದ್ದರು.

‘ಮೊದಲ ಎರಡು ಪಂದ್ಯಗಳಲ್ಲಿ ನಮ್ಮ ಆಟಗಾರರು ಉತ್ತಮ ಸಾಮರ್ಥ್ಯ ತೋರಿದ್ದಾರೆ. ಆದರೆ ಇದು ಎರಡು ಪಂದ್ಯಗಳಲ್ಲಿ ಮಾತ್ರ. ಹಲವು ಹಂತಗಳಲ್ಲಿ ನಾವು ಇನ್ನೂ ಸುಧಾರಿಸಬೇಕಿದೆ‘ ಎಂದು ಹೈದರಾಬಾದ್‌ ಕೋಚ್‌ ಮ್ಯಾನೊಲೊ ಮಾರ್ಕ್‌ವೆಜ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT