7

ಪಂದ್ಯ ಸೋತರೂ ಜನಮನ ಗೆದ್ದ ಐಸ್‌ಲ್ಯಾಂಡ್‌

Published:
Updated:
ಕ್ರೊವೇಷ್ಯಾ ಎದುರಿನ ಪಂದ್ಯ ವೀಕ್ಷಿಸಿದ ಐಸ್‌ಲ್ಯಾಂಡ್‌ ಬೆಂಬಲಿಗರು ಸಂಭ್ರಮಿಸಿದ ಪರಿ ಎಎಫ್‌ಪಿ ಚಿತ್ರ

ರೊಸ್ತೊವ್‌ (ಎಎಫ್‌ಪಿ): ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಸೋತರೂ ಐಸ್‌ಲ್ಯಾಂಡ್‌ ತಂಡ ಫುಟ್‌ಬಾಲ್ ಪ್ರೇಮಿಗಳ ಹೃದಯ ಗೆದ್ದಿತು. ಮಂಗಳವಾರ ರಾತ್ರಿ ರೊಸ್ತೊವ್‌ ಅರೆನಾದಲ್ಲಿ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ಈ ತಂಡವನ್ನು ಕ್ರೊವೇಷ್ಯಾ 2–1ರಿಂದ ಮಣಿಸಿತ್ತು.

ಚೊಚ್ಚಲ ವಿಶ್ವಕಪ್ ಆಡಿದ ಐಸ್‌ಲ್ಯಾಂಡ್‌ ಮೊದಲ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟೀನಾ ಜೊತೆ 1–1ರಿಂದ ಡ್ರಾ ಸಾಧಿಸಿತ್ತು. ನಂತರ ನೈಜೀರಿಯಾ ವಿರುದ್ಧ 0–2ರಿಂದ ಸೋತಿತ್ತು. 2016 ಯೂರೊ ಕಪ್‌ನಲ್ಲಿ ಅಮೋಘ ಸಾಮರ್ಥ್ಯ ತೋರಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದ ಐಸ್‌ಲ್ಯಾಂಡ್ ವಿಶ್ವಕಪ್‌ಗೆ ಅರ್ಹತೆ ಗಳಿಸಿತ್ತು.

ಮಂಗಳವಾರದ ಪಂದ್ಯದಲ್ಲಿ ತಂಡ ಛಲದಿಂದ ಕಾದಾಡಿತ್ತು. ಆದರೆ ಅಂತಿಮ ನಿಮಿಷದಲ್ಲಿ ಕ್ರೊವೇಷ್ಯಾದ ಐವನ್ ಪೆರಿಸಿಕ್‌ ಗಳಿಸಿದ ಗೋಳು ಐಸ್‌ಲ್ಯಾಂಡ್‌ ಪಾಳಯದಲ್ಲಿ ನಿರಾಸೆ ಮೂಡಿಸಿತ್ತು.

ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳಿಗೆ ಗೋಲು ಗಳಿಸಲು ಆಗಲಿಲ್ಲ. 53ನೇ ನಿಮಿಷದಲ್ಲಿ ಮಿಲನ್ ಬೆಡೆಲ್ಸ್ ಚೆಂಡನ್ನು ಗುರಿ ಸೇರಿಸಿ ಕ್ರೊವೇಷ್ಯಾಗೆ ಮುನ್ನಡೆ ಗಳಿಸಿಕೊಟ್ಟರು. ಸಿಗುರ್‌ಸನ್‌ ಅವರು 76ನೇ ನಿಮಿಷದಲ್ಲಿ ತಿರುಗೇಟು ನೀಡಿದರು. ನಂತರ ಪಟ್ಟು ಬಿಡದೆ ಸೆಣಸಿದ ಎರಡೂ ತಂಡಗಳು ಅವಕಾಶಗಳನ್ನು ಕೈಚೆಲ್ಲಿದವು. 90ನೇ ನಿಮಿಷದಲ್ಲಿ ಐವನ್ ಅವರು ಐಸ್‌ಲ್ಯಾಂಡ್ ಬಳಿಯಿಂದ ಜಯ ಕಸಿದುಕೊಂಡರು.

ಸಾವಿರಾರು ಅಭಿಮಾನಿಗಳು:

ಕೇವಲ 3,30,000 ಜನಸಂಖ್ಯೆ ಇರುವ ಐಸ್‌ಲ್ಯಾಂಡ್‌ ವಿಶ್ವಕಪ್‌ಗೆ ಅರ್ಹತೆ ಗಳಿಸಿದ ಅತ್ಯಂತ ಕಿರಿಯ ದೇಶವಾಗಿತ್ತು. ತಂಡದ ನಿರ್ಣಾಯಕ ಪಂದ್ಯ ವೀಕ್ಷಿಸಲು ಸಾವಿರಾರು ಅಭಿಮಾನಿಗಳು ರಷ್ಯಾಗೆ ಬಂದಿದ್ದರು. ಪಂದ್ಯ ಸೋತಿದ್ದರಿಂದ ನಿರಾಸೆಗೊಂಡರೂ ಒಟ್ಟಾರೆ ತಂಡದ ಸಾಧನೆಗೆ ಅವರು ಅಭಿಮಾನಪಟ್ಟುಕೊಂಡರು.

ಅರ್ಜೆಂಟೀನಾ ಎದುರಿನ ಪಂದ್ಯದಲ್ಲಿ ಲಯೊನೆಲ್ ಮೆಸ್ಸಿ ಅವರ ಪೆನಾಲ್ಟಿ ಗೋಲು ತಡೆದು ಗಮನ ಸೆಳೆದಿದ್ದ ಗೋಲ್‌ಕೀ‍ಪರ್‌ ಹ್ಯಾನ್ಸ್‌ ಹಲ್ದೊರ್ಸನ್‌ ‘ತಂಡ ಭವಿಷ್ಯದಲ್ಲಿ ಉನ್ನತ ಸಾಧನೆ ಮಾಡಲಿದೆ’ ಎಂದು ಭರವಸೆಯಿಂದ ನುಡಿದರು. 

‘ಗುಂಪು ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿರುವುದು ಬೇಸರ ತಂದಿದೆ. ತಂಡಕ್ಕೆ ಅಮೋಘ ಸಾಧನೆ ಮಾಡುವ ಸಾಮರ್ಥ್ಯ ಇದೆ’ ಎಂದು ಸೆವಿರ್‌ ಇಂಗಸನ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !