ಪೋರ್ಚುಗಲ್‌ಗೆ ಮಹತ್ವದ ಪಂದ್ಯ

7
ಪ್ರೀ ಕ್ವಾರ್ಟರ್‌ ಹಂತಕ್ಕೇರುವ ಭರವಸೆ; ಇರಾನ್‌ಗೆ ಗೆಲುವು ಅನಿವಾರ್ಯ

ಪೋರ್ಚುಗಲ್‌ಗೆ ಮಹತ್ವದ ಪಂದ್ಯ

Published:
Updated:

ಸರಾನ್‌ಸ್ಕ್‌ : ಐದು ದಾಖಲೆಗಳ ಬೆನ್ನತ್ತಿ ವಿಶ್ವಕಪ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಸೋಮವಾರ ಅಂಗಣಕ್ಕೆ ಇಳಿಯಲಿರುವ ಇರಾನ್ ತಂಡ ಪೋರ್ಚುಗಲ್‌ನ ಸವಾಲು ಮೀರಿ ನಿಲ್ಲಬೇಕಾಗಿದೆ.

ಮಾರ್ಡೊವಿಯಾ ಅರೆನಾದಲ್ಲಿ ನಡೆಯಲಿರುವ ‘ಬಿ’ ಗುಂಪಿನ ಪಂದ್ಯದಲ್ಲಿ ಗೆದ್ದರೆ ಇರಾನ್‌ ವಿಶ್ವಕಪ್‌ ನಲ್ಲಿ ಮೊದಲ ಬಾರಿ ಪ್ರೀ ಕ್ವಾರ್ಟರ್ ಫೈನಲ್ ಹಂತಕ್ಕೆ ಏರಿದ ಸಾಧನೆ ಮಾಡಿದಂತಾಗಲಿದೆ. ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಪಾಯಿಂಟ್ ಗಳಿಸಿದ ಸಾಧನೆಯೂ ತಂಡದ ಪಾಲಾಗಲಿದೆ. ಗುಂಪು ಹಂತದಲ್ಲಿ ಹೆಚ್ಚು ಜಯ ಮತ್ತು ಕನಿಷ್ಠ ಸೋಲು ಕಂಡ ಸಾಧನೆಯೂ ಆ ತಂಡದ್ದಾಗಲಿದೆ. ಯುರೋಪಿಯನ್ ರಾಷ್ಟ್ರವೊಂದನ್ನು ಮೊದಲ ಬಾರಿ ಸೋಲಿಸಿದ ಹಿರಿಮೆಗೂ ಪಾತ್ರವಾಗಲಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಫಿಫಾ ರ‍್ಯಾಂಕಿಂಗ್‌ನಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸಿದ ಸಾಧನೆಯೂ ಮಾಡಲಿದೆ.

ಈ ದಾಖಲೆಗಳಿಗೆ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಬಳಗದವರು ಅಡ್ಡಿ ಯಾಗುವ ಸಾಧ್ಯತೆ ಇದೆ. ಟೂರ್ನಿಯ ಮೊದಲ ಪಂದ್ಯಲ್ಲೇ ಹ್ಯಾಟ್ರಿಕ್ ಗೋಲು ಗಳಿಸಿ ಮಿಂಚಿದ್ದ ರೊನಾಲ್ಡೊ ನಂತರದ ಪಂದ್ಯದಲ್ಲಿ ಏಕೈಕ ಗೋಲು ಗಳಿಸಿ ತಂಡಕ್ಕೆ ಜಯದ ಕಾಣಿಕೆ ನೀಡಿದ್ದರು.

ಈ ತಂಡಗಳು ವಿಶ್ವಕಪ್‌ನಲ್ಲಿ ಒಂದು ಬಾರಿ ಮಾತ್ರ ಮುಖಾಮುಖಿ ಆಗಿವೆ. 2006ರಲ್ಲಿ ನಡೆದ ಆ ಪಂದ್ಯದಲ್ಲಿ ಪೋರ್ಚುಗಲ್‌ 2–0ಯಿಂದ ಗೆದ್ದಿತ್ತು. ಒಂದು ಗೋಲು ಕ್ರಿಸ್ಟಿಯಾನೊ ರೊನಾಲ್ಡೊ ಗಳಿಸಿದ್ದರು. ‍ಸೋಮವಾರದ ಪಂದ್ಯದಲ್ಲಿ ಜಯ ಗಳಿಸಿದರೆ ಪೋರ್ಚುಗಲ್‌ 16ರ ಘಟ್ಟದಲ್ಲಿ ಸ್ಥಾನ ಭದ್ರ ಪಡಿಸಿಕೊಳ್ಳಲಿದೆ. ಇರಾನ್‌ ಈ ಹಂತ ತಲುಪಬೇಕಾದರೆ ಜಯ ಅನಿವಾರ್ಯವಾಗಿದೆ.

ಮೊದಲ ಎರಡು ಪಂದ್ಯಗಳಲ್ಲಿ ಇರಾನ್‌ ಅಮೋಘ ಸಾಮರ್ಥ್ಯ ತೋರಿದೆ. ಸ್ಪೇನ್ ಎದುರು 0–1ರಿಂದ ಸೋತಿದ್ದ ತಂಡ ಮೊರೊಕ್ಕೊವನ್ನು 1–0ಯಿಂದ ಮಣಿಸಿತ್ತು. ತಂಡದ ರಕ್ಷಣಾ ವಿಭಾಗ ಬಲಿಷ್ಠವಾಗಿದೆ. ಹೀಗಾಗಿ ಸ್ಪೇನ್‌ಗೆ ಕೇವಲ ಒಂದೇ ಗೋಲು ಬಿಟ್ಟುಕೊಟ್ಟಿದೆ. ಮೊರೊಕ್ಕೊಗೆ ಪ್ರಬಲ ಸ್ಪರ್ಧೆ ಒಡ್ಡಿದ ಇರಾನ್‌ ಗೆಲುವಿನ ತೋರಣ ಕಟ್ಟಿತ್ತು.

ರೊನಾಲ್ಡೊ ಮೇಲೆ ನಿರೀಕ್ಷೆ ಭಾರ: ಪೋರ್ಚುಗಲ್‌ ತಂಡ ಸಂಪೂರ್ಣವಾಗಿ ರೊನಾಲ್ಡೊ ಅವರನ್ನು ಅವಲಂಬಿಸಿದೆ ಎಂಬುದು ಕಳೆದ ಎರಡು ಪಂದ್ಯಗಳಿಂದ ಸಾಬೀತಾಗಿದೆ. ತಂಡ ಈ ವರೆಗೆ ಗಳಿಸಿದ ನಾಲ್ಕೂ ಗೋಲುಗಳು ಅವರ ಖಾತೆಗೆ ಸೇರಿವೆ. ಆದ್ದರಿಂದ ಈ ಪಂದ್ಯದಲ್ಲೂ ಅವರ ಮೇಲೆ ನಿರೀಕ್ಷೆಯ ಭಾರವಿದೆ.

ಕಳೆದ ಬಾರಿ ಗುಂಪು ಹಂತದಲ್ಲೇ ಹೊರಬಿದ್ದ ಪೋರ್ಚುಗಲ್‌ ತಂಡ ಈ ಬಾರಿಯೂ ಆತಂಕದಲ್ಲಿದೆ. ಸೋಮ ವಾರ ಇರಾನ್ ವಿರುದ್ಧ ಸೋತರೆ ತಂಡ ನಿರಾಸೆಯ ಕಡಲಿಗೆ ಬೀಳಲಿದೆ. ಹೀಗಾಗಿ ಮಾಡು ಇಲ್ಲವೇಮಡಿ ಪಂದ್ಯದಲ್ಲಿ ರೊನಾಲ್ಡೊ ಬಳಗ ಪುಟಿದೇಳುವ ಭರವಸೆಯೊಂದಿಗೆ ಕಣಕ್ಕೆ ಇಳಿಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !