ಶುಕ್ರವಾರ, ಡಿಸೆಂಬರ್ 6, 2019
20 °C
ವಿಶ್ವಕಪ್ ಅರ್ಹತಾ ಸುತ್ತಿನ 4ನೇ ಪಂದ್ಯದಲ್ಲಿ ಚೆಟ್ರಿ ಪಡೆಗೆ ಅಫ್ಗಾನಿಸ್ಥಾನ ಎದುರಾಳಿ

ಫುಟ್‌ಬಾಲ್: ಭಾರತಕ್ಕೆ ಮೊದಲ ಜಯದ ಕನಸು

Published:
Updated:
Prajavani

ದುಶಾನಬೆ, ತಜಿಕಿಸ್ತಾನ: ಮೂರು ಪಂದ್ಯಗಳಲ್ಲಿ ಜಯ ಗಳಿಸಲು ವಿಫಲವಾಗಿರುವ ಭಾರತ ತಂಡ ವಿಶ್ವಕಪ್‌ ಫುಟ್‌ಬಾಲ್ ಅರ್ಹತಾ ಸುತ್ತಿನ ಹಣಾಹಣಿಯಲ್ಲಿ ಗುರುವಾರ ಅಫ್ಗಾನಿಸ್ಥಾನವನ್ನು ಎದುರಿಸಲಿದೆ. ಶೀತಲ ವಾತಾವರಣದಲ್ಲಿ ನಡೆಯುವ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಅನಿವಾರ್ಯ. ಈ ಪಂದ್ಯದಲ್ಲೂ ಮುಗ್ಗರಿಸಿದರೆ ತಂಡದ ಮುಂದಿನ ಹಾದಿ ಕಠಿಣವಾಗಲಿದೆ.

ತನಗಿಂತ ಹೆಚ್ಚಿನ ರ‍್ಯಾಂಕ್ ಹೊಂದಿರುವ ಒಮನ್ ವಿರುದ್ಧ 1–2 ಅಂತರದ ಸೋಲಿನೊಂದಿಗೆ ಎರಡನೇ ಸುತ್ತಿನ ಪಂದ್ಯವನ್ನು ಮುಗಿಸಿದ ಭಾರತ ನಂತರ ಏಷ್ಯನ್ ಚಾಂಪಿಯನ್‌ ಕತಾರ್‌ ಎದುರು 1–1 ಡ್ರಾ ಸಾಧಿಸಿತ್ತು. ಇದು ತಂಡದಲ್ಲಿ ಭರವಸೆ ಮೂಡಿಸಿತ್ತು. ಆದರೆ ಅಕ್ಟೋಬರ್ 15ರಂದು ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ತಂಡ ನಿರಾಸೆಗೆ ಒಳಗಾಗಿತ್ತು. ಕೊನೆಯ ಹಂತದ ವರೆಗೂ ಜಯದ ಹಾದಿಯಲ್ಲಿ ಸಾಗಿದ್ದ ಭಾರತ 88ನೇ ನಿಮಿಷದಲ್ಲಿ ಗೋಲು ಬಿಟ್ಟುಕೊಟ್ಟು ಕೈಸುಟ್ಟುಕೊಂಡಿತ್ತು.

‘ಇ’ ಗುಂಪಿನಲ್ಲಿರುವ ಭಾರತಕ್ಕೆ 3 ಪಂದ್ಯಗಳಲ್ಲಿ ಕೇವಲ 2 ಪಾಯಿಂಟ್ ಕಲೆ ಹಾಕಲಷ್ಟೇ ಸಾಧ್ಯವಾಗಿದೆ. ಫಿಫಾ ರ‍್ಯಾಂಕಿಂಗ್‌ನಲ್ಲಿ 106ನೇ ಸ್ಥಾನದಲ್ಲಿರುವ ಭಾರತಕ್ಕೆ 149ನೇ ಸ್ಥಾನದ ಅಫ್ಗಾನಿಸ್ಥಾನ ಹೆಚ್ಚು ಸಮಸ್ಯೆ ಒಡ್ಡಲಾರದು. ಅಫ್ಗಾನಿಸ್ಥಾನ 3 ಪಂದ್ಯಗಳಲ್ಲಿ ಒಂದನ್ನು ಗೆದ್ದಿದ್ದು ಎರಡರಲ್ಲಿ ಸೋತಿದೆ. ಒಮನ್‌ ಮತ್ತು ಕತಾರ್‌ಗೆ ಕ್ರಮವಾಗಿ 0–3, 0–6ರಲ್ಲಿ ಮಣಿದಿದ್ದ ತಂಡ ಬಾಂಗ್ಲಾದೇಶವನ್ನು 1–0ಯಿಂದ ಸೋಲಿಸಿತ್ತು.

ದುಶಾನಬೆ ತವರು: ಗಲಭೆಗ್ರಸ್ಥ ಅಫ್ಗಾನಿಸ್ಥಾನವು ತವರಿನ ಪಂದ್ಯವನ್ನು ದುಶಾನಬೆಯಲ್ಲಿ ಆಯೋಜಿಸಲು ಮುಂದಾಗಿದ್ದು ಅತಿಯಾದ ಶೀತ ವಾತಾವರಣಕ್ಕೆ ಹೊಂದಿಕೊಳ್ಳುವುದು ಕೂಡ ಭಾರತದ ಆಟಗಾರರಿಗೆ ಸವಾಲಾಗಲಿದೆ.

ಭಾರತಕ್ಕೆ ಈ ಪಂದ್ಯದಲ್ಲಿ ಅನಾಸ್ ಎಡತೋಡಿಕಾ ಲಭ್ಯರಿಲ್ಲ. ತಾಯಿ ತೀರಿಕೊಂಡ ಕಾರಣ ಅವರು ವಾಪಸಾಗಿದ್ದಾರೆ. ಸಂದೇಶ್ ಜಿಂಗಾನ್ ಜೊತೆಗೂಡಿ ತಂಡದ ರಕ್ಷಣಾ ವಿಭಾಗಕ್ಕೆ ಅನಾಸ್ ಬಲ ತುಂಬಿದ್ದರು. ಇದೀಗ ಈ ಇಬ್ಬರೂ ಆಟಗಾರರು ತಂಡದಿಂದ ದೂರವಾಗಿದ್ದಾರೆ. ಜಿಂಗಾನ್ ಗಾಯದ ಸಮಸ್ಯೆಯಿಂದಾಗಿ 3 ವಾರಗಳಿಂದ ಕಣಕ್ಕೆ ಇಳಿಯಲಿಲ್ಲ. ಮಿಡ್‌ಫೀಲ್ಡರ್ ರಾವ್ಲಿಂಗ್ ಬೋರ್ಜೆಸ್ ಕೂಡ ಚಿಕಿತ್ಸೆಯಲ್ಲಿದ್ದಾರೆ.

ಅಫ್ಗಾನ್ ವಿರುದ್ಧ ಭಾರತ ಈ ವರೆಗಿನ ಹಣಾಹಣಿಗಳಿಲ್ಲಿ ಆಧಿಪತ್ಯ ಸ್ಥಾಪಿಸಿದೆ. ಆದರೆ ಕೊನೆಯದಾಗಿ, 2013ರಲ್ಲಿ ಮುಖಾಮುಖಿಯಾಗಿದ್ದಾಗ ಭಾರತ 0–2 ಗೋಲುಗಳಿಂದ ಸೋತಿತ್ತು. ಈ ಪಂದ್ಯ ಸ್ಯಾಫ್‌ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ನಡೆದಿತ್ತು.

‘ಗೆಲುವು ನಮ್ಮತ್ತ ಬರುವುದಿಲ್ಲ. ನಾವು ಅದನ್ನು ಹುಡುಕುತ್ತ ಹೋಗಬೇಕು. ಅಂಗಣದಲ್ಲಿ ತೋರುವ ಸಾಮರ್ಥ್ಯದ ಮೇಲೆ ಇದು ನಿರ್ಧಾರವಾಗುತ್ತದೆ’ ಎಂದು ಕೋಚ್ ಐಗರ್ ಸ್ಟಿಮ್ಯಾಕ್ ಹೇಳಿದರು.

ರ‍್ಯಾಂಕಿಂಗ್‌

ಭಾರತ - 106
ಅಫ್ಗಾನಿಸ್ಥಾನ  -149

ಮುಖಾಮುಖಿ

ಒಟ್ಟು ಪಂದ್ಯ - 8
ಭಾರತದ ಜಯ - 6
ಅಫ್ಗಾನಿಸ್ತಾನ ಜಯ - 1

ಆರಂಭ: ಸಂಜೆ 7.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಪ್ರತಿಕ್ರಿಯಿಸಿ (+)