ಭಾರತಕ್ಕೆ ಬಲಿಷ್ಠ ಚೀನಾ ಸವಾಲು

7
ಇಂದು ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್‌ ಪಂದ್ಯ: ಸುನಿಲ್‌ ಚೆಟ್ರಿ ಆಕರ್ಷಣೆ: ಜಿಂಗಾನ್‌ಗೆ ನಾಯಕತ್ವ

ಭಾರತಕ್ಕೆ ಬಲಿಷ್ಠ ಚೀನಾ ಸವಾಲು

Published:
Updated:
Deccan Herald

ಮುಂಬೈ: ಇದೇ ಮೊದಲ ಬಾರಿಗೆ ಚೀನಾ ಪ್ರವಾಸ ಕೈಗೊಂಡಿರುವ ಭಾರತ ಫುಟ್‌ಬಾಲ್‌ ತಂಡದವರು ಇತಿಹಾಸ ರಚಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಶನಿವಾರ ಸುಜೌ ಒಲಿಂಪಿಕ್‌ ಸ್ಪೋರ್ಟ್ಸ್‌ ಸೆಂಟರ್‌ನಲ್ಲಿ ನಡೆಯುವ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಸಂದೇಶ್‌ ಜಿಂಗಾನ್ ಸಾರಥ್ಯದ ಭಾರತ ತಂಡ ಆತಿಥೇಯ ಚೀನಾ ಸವಾಲು ಎದುರಿಸಲಿದೆ.

ಮುಂಬರುವ ಏಷ್ಯಾಕಪ್‌ಗೆ ಪೂರ್ವಸಿದ್ಧತೆ ಕೈಗೊಳ್ಳಲು ವೇದಿಕೆ ಎನಿಸಿರುವ ಈ ಪಂದ್ಯದಲ್ಲಿ ಗೆಲುವಿನ ತೋರಣ ಕಟ್ಟಲು ‘ಬ್ಲೂ ಟೈಗರ್ಸ್‌’ ಕಾತರವಾಗಿದೆ. ಭಾರತ ತಂಡ ಫಿಫಾ ರ‍್ಯಾಂಕಿಂಗ್‌ನಲ್ಲಿ 97ನೇ ಸ್ಥಾನದಲ್ಲಿದೆ. ಚೀನಾ ತಂಡ ಜಿಂಗಾನ್‌ ಬಳಗಕ್ಕಿಂತಲೂ 21 ಸ್ಥಾನ ಮೇಲಿದೆ.

‘ಚೀನಾ ಬಲಿಷ್ಠ ತಂಡ. ಆ ತಂಡವನ್ನು ಅದರದ್ದೇ ನೆಲದಲ್ಲಿ ಮಣಿಸುವುದು ಸುಲಭವಲ್ಲ ಎಂಬುದರ ಅರಿವು ನಮಗಿದೆ. ಒತ್ತಡದ ಪರಿಸ್ಥಿತಿಯಲ್ಲಿ ಹೇಗೆ ಆಡಬೇಕೆಂಬುದನ್ನು ನಮ್ಮವರು ಕಲಿತಿದ್ದಾರೆ. ಈ ಪಂದ್ಯದಲ್ಲಿ ಗೆಲ್ಲಲೇಬೇಕೆಂಬ ಗುರಿಯೊಂದಿಗೆ ನಾವು ಕಣಕ್ಕಿಳಿಯುತ್ತೇವೆ. ಒಂದೊಮ್ಮೆ ಸೋತರೂ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇವೆ’ ಎಂದು ಭಾರತ ತಂಡದ ಮುಖ್ಯ ಕೋಚ್‌ ಸ್ಟೀಫನ್‌ ಕಾನ್ಸ್‌ಟೆಂಟೈನ್‌ ತಿಳಿಸಿದ್ದಾರೆ.

ಸುನಿಲ್‌ ಚೆಟ್ರಿ ಮತ್ತು ಜೆಜೆ ಲಾಲ್‌ಪೆಕ್ಲುವಾ ಅವರು ಮುಂಚೂಣಿ ವಿಭಾಗದಲ್ಲಿ ತಂಡದ ಶಕ್ತಿಯಾಗಿದ್ದಾರೆ. ನಾಯಕ ಸಂದೇಶ್‌, ಅನಾಸ್‌ ಎಡತೋಡಿಕಾ ಅವರು ರಕ್ಷಣಾ ವಿಭಾಗದಲ್ಲಿ ತಂಡದ ಆಧಾರ ಸ್ಥಂಭಗಳಾಗಿದ್ದಾರೆ.  ಚೀನಾ ತಂಡದ ಮುಂಚೂಣಿ ವಿಭಾಗದ ಆಟಗಾರರು ಆವರಣ ಪ್ರವೇಶಿಸದಂತೆ ತಡೆಯಲು ಇವರು ಯಾವ ಬಗೆಯ ರಣನೀತಿ ಹೆಣೆದು ಅಂಗಳಕ್ಕಿಳಿಯಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ. ಅನುಭವಿ ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ಅವರ ಮೇಲೂ ಅಭಿಮಾನಿಗಳ ಕಣ್ಣುಗಳು ನೆಟ್ಟಿವೆ. ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ (ಐಎಸ್‌ಎಲ್‌) ಬೆಂಗಳೂರು ಫುಟ್‌ಬಾಲ್‌ ಕ್ಲಬ್ (ಬಿಎಫ್‌ಸಿ) ಪರ ಆಡುವ ಸಂಧು ಈ ಬಾರಿ ಉತ್ತಮ ಸಾಮರ್ಥ್ಯ ತೋರಿದ್ದಾರೆ.

ಭಾರತ ತಂಡ ಹಿಂದಿನ ಕೆಲವು ಪಂದ್ಯಗಳಲ್ಲಿ ಅಂತಿಮ ನಿಮಿಷಗಳಲ್ಲಿ ಎದುರಾಳಿಗಳಿಗೆ ಗೋಲು ಬಿಟ್ಟುಕೊಟ್ಟು ಕೈಸುಟ್ಟುಕೊಂಡಿತ್ತು. ಚೀನಾ ವಿರುದ್ಧ ಈ ತಪ್ಪು ಮರುಕಳಿಸದಂತೆ ಎಚ್ಚರವಹಿಸಬೇಕಿದೆ.

ಚೀನಾ ತಂಡ ಹೋದ ತಿಂಗಳು ಆಡಿದ ಎರಡು ಪಂದ್ಯಗಳಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಿರಲಿಲ್ಲ. ಕತಾರ್‌ ಎದುರು 0–1 ಗೋಲಿನಿಂದ ಸೋತಿದ್ದ ಈ ತಂಡ ಬಹ್ರೇನ್‌ ಎದುರು ಗೋಲುರಹಿತ ಡ್ರಾ ಮಾಡಿಕೊಂಡಿತ್ತು.

ಯು ದಬಾವೊ, ಗಾವೊ ಲಿನ್‌ ಮತ್ತು ವು ಲೆಯಿ ಅವರಂತಹ ಪ್ರತಿಭಾವಂತರು ಈ ತಂಡದಲ್ಲಿದ್ದಾರೆ. ಮಿಡ್‌ಫೀಲ್ಡರ್‌ ಚಿ ಜಾಂಗೌ ಅವರ ಮೇಲೂ ಭರವಸೆ ಇಡಬಹುದು.

ಭಾರತ ಮತ್ತು ಚೀನಾ ತಂಡಗಳು ಇದುವರೆಗೂ 17 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ ಒಮ್ಮೆಯೂ ಗೆದ್ದಿಲ್ಲ.

ಆರಂಭ: ಸಂಜೆ 5.05

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌, ಜಿಯೊ ಟಿವಿ ಮತ್ತು ಹಾಟ್‌ಸ್ಟಾರ್‌.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !