ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಫ್ ಚಾಂಪಿಯನ್‌ಷಿಪ್‌: ಭರವಸೆಯಲ್ಲಿ ಭಾರತ ತಂಡ

ಸುನಿಲ್ ಚೆಟ್ರಿ ಬಳಗಕ್ಕೆ 8ನೇ ಪ್ರಶಸ್ತಿ ಮೇಲೆ ಕಣ್ಣು; ನೇಪಾಳಕ್ಕೆ ಮೊದಲ ಫೈನಲ್
Last Updated 15 ಅಕ್ಟೋಬರ್ 2021, 14:20 IST
ಅಕ್ಷರ ಗಾತ್ರ

ಮಾಲಿ: ಆರಂಭದಲ್ಲಿ ನೀರಸ ಆಟವಾಡಿದರೂ ನಂತರ ಚೇತರಿಸಿಕೊಂಡು ಗೆಲುವಿನ ಹಾದಿಯಲ್ಲಿ ಹೆಜ್ಜೆ ಹಾಕಿರುವ ಭಾರತ ಫುಟ್‌ಬಾಲ್ ತಂಡ ಸ್ಯಾಫ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದೆ.

ಮಾಲ್ಡಿವ್ಸ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ ನೇಪಾಳವನ್ನು ಎದುರಿಸಲಿದೆ. ಎಂಟನೇ ಪ್ರಶಸ್ತಿಯ ಮೇಲೆ ಭಾರತ ಕಣ್ಣಿಟ್ಟಿದ್ದರೆ ಮೊದಲ ಬಾರಿ ಫೈನಲ್ ಪ್ರವೇಶಿಸಿರುವ ನೇಪಾಳ ಯಶಸ್ಸಿನ ನಿರೀಕ್ಷೆಯೊಂದಿಗೆ ಕಣಕ್ಕೆ ಇಳಿಯಲಿದೆ.

ಇದು ಸ್ಯಾಫ್ ಚಾಂಪಿಯನ್‌ಷಿಪ್‌ನ 13ನೇ ಆವೃತ್ತಿ. ಭಾರತ ಈ ವರೆಗೆ ಎಲ್ಲ ಟೂರ್ನಿಗಳಲ್ಲೂ ಆಧಿಪತ್ಯ ಸ್ಥಾಪಿಸಿದೆ. ತಂಡಕ್ಕೆ ಇದು 12ನೇ ಫೈನಲ್‌. 2003ರಲ್ಲಿ ಮೂರನೇ ಸ್ಥಾನ ಗಳಿಸಿದ್ದು ತಂಡದ ಈ ವರೆಗಿನ ಅತ್ಯಂಕ ಕಳಪೆ ಪ್ರದರ್ಶನವಾಗಿದೆ. ನೇಪಾಳ ವಿರುದ್ಧ ತಂಡ ಗೆದ್ದರೆ ಇಗರ್ ಸ್ಟಿಮ್ಯಾಚ್ ಅವರ ಮಾರ್ಗದರ್ಶನದಲ್ಲಿ ತಂಡದ ಮೊದಲ ಪ್ರಶಸ್ತಿ ಸಾಧನೆ ಆಗಲಿದೆ.

ಸ್ಟಿಮ್ಯಾಚ್ 2019ರಿಂದ ಕೋಚ್ ಆಗಿದ್ದಾರೆ. ತಂಡಕ್ಕೆ ಗೆಲುವು ತಂದುಕೊಟ್ಟರೆ ಈ ಸ್ಯಾಫ್ ಚಾಂಪಿಯನ್‌ಷಿಪ್‌ ಗೆದ್ದುಕೊಟ್ಟ ಆರನೇ ಕೋಚ್ ಮತ್ತು ಮೂರನೇ ವಿದೇಶಿ ಕೋಚ್ ಅಗಲಿದ್ದಾರೆ ಅವರು. 1993ರಲ್ಲಿ ಜಿರಿ ಪೆಸೆಕ್‌ ಮತ್ತು 2015ರಲ್ಲಿ ಸ್ಟೀಫನ್ ಕಾನ್‌ಸ್ಟಂಟೈನ್ ಈ ಸಾಧನೆ ಮಾಡಿದ್ದಾರೆ.

ಮೊದಲ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಳ್ಳಲು ಮಾತ್ರ ಭಾರತಕ್ಕೆ ಸಾಧ್ಯವಾಗಿತ್ತು. ಈ ಸಂದರ್ಭದಲ್ಲಿ ಸುನಿಲ್ ಚೆಟ್ರಿ ಬಳಗ ಫೈನಲ್ ಪ್ರವೇಶಿಸುವುದು ಕಷ್ಟ ಸಾಧ್ಯ ಎಂದೆನಿಸಿತ್ತು. ಆದರೆ ನೇಪಾಳ ಎದುರಿನ ಜಯ ತಂಡದಲ್ಲಿ ಭರವಸೆ ಮೂಡಿಸಿತ್ತು. ಕೊನೆಯ ಮತ್ತು ನಿರ್ಣಾಯಕ ಪಂದ್ಯದಲ್ಲಿ ಮಾಲ್ಡಿವ್ಸ್‌ ವಿರುದ್ಧ ಭರ್ಜರಿ ಜಯ ಗಳಿಸಿ ಫೈನಲ್ ಪ್ರವೇಶ ಖಾತರಿಪಡಿಸಿಕೊಂಡಿತ್ತು. ಈ ಜಯ ತಂಡದಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಈ ಹಿಂದಿನ ಪಂದ್ಯಗಳಲ್ಲಿ ನೇಪಾಳ ವಿರುದ್ಧ ಭಾರತ ಪಾರಮ್ಯ ಮೆರೆದಿದೆ. ಹೀಗಾಗಿ ಫೈನಲ್‌ನಲ್ಲಿ ಗೆಲ್ಲುವ ನೆಚ್ಚಿನ ತಂಡ ಎಂದೆನಿಸಿಕೊಂಡಿದೆ. ಈ ವರ್ಷ ಉಭಯ ತಂಡಗಳು ಮೂರು ಪಂದ್ಯಗಳನ್ನು ಆಡಿದ್ದು ಭಾರತ ಎರಡರಲ್ಲಿ ಗೆದ್ದು ಒಂದನ್ನು ಡ್ರಾ ಮಾಡಿಕೊಂಡಿದೆ. ಸ್ಯಾಫ್ ಚಾಂಪಿಯನ್‌ಷಿಪ್‌ಗಿಂತ ಮೊದಲು ಕಠ್ಮಂಡುವಿನಲ್ಲಿ ಎರಡು ಸ್ನೇಹಪರ ಪಂದ್ಯಗಳು ನಡೆದಿದ್ದವು. ಒಂದರಲ್ಲಿ ಭಾರತ 1–1ರ ಡ್ರಾ ಸಾಧಿಸಿದ್ದು ಮತ್ತೊಂದರಲ್ಲಿ 2–1ರ ಜಯ ಗಳಿಸಿತ್ತು.

ನೇಪಾಳ ತಂಡದಲ್ಲಿ ಹೇಳಿಕೊಳ್ಳುವಂಥ ಅಪೂರ್ವ ಪ್ರತಿಭಾವಂತರು ಇಲ್ಲ. ಆದರೆ ಆಕ್ರಮಣ ಮತ್ತು ರಕ್ಷಣಾ ವಿಭಾಗವನ್ನು ಗಮನಿಸಿದರೆ ಅವರಲ್ಲಿ ಸಂಘಟಿತ ಶ್ರಮವನ್ನು ಕಾಣಬಹುದಾಗಿದೆ.

ಸುನಿಲ್ ಚೆಟ್ರಿ ಭಾರತ ತಂಡದ ನಾಯಕ

ಟೂರ್ನಿಯಲ್ಲಿ ಭಾರತದ ಹಾದಿ

ಎದುರಾಳಿ;ಫಲಿತಾಂಶ;ಸ್ಕೋರು

ಬಾಂಗ್ಲಾದೇಶ;ಡ್ರಾ;1–1

ಶ್ರೀಲಂಕಾ;ಡ್ರಾ;0–0

ನೇಪಾಳ;ಜಯ;1–0

ಮಾಲ್ಡಿವ್ಸ್‌;ಜಯ;3–1

ನೇಪಾಳ ನಡೆದ ಬಂದ ದಾರಿ

ಎದುರಾಳಿ;ಫಲಿತಾಂಶ;ಸ್ಕೋರು

ಮಾಲ್ಡಿವ್ಸ್‌;ಜಯ;1–0

ಶ್ರೀಲಂಕಾ;ಜಯ;3–2

ಬಾಂಗ್ಲಾದೇಶ;ಡ್ರಾ;1–1

ಹೆಚ್ಚು ಗೋಲು ಗಳಿಸಿದ ಐವರು

ಆಟಗಾರ;ದೇಶ;ಗೋಲು

ಸುನಿಲ್ ಚೆಟ್ರಿ;ಭಾರತ;4

ಅಂಜನ್ ಬಿಸ್ಟ;ನೇಪಾಳ;2

ಮನೀಷ್ ಡಾಂಗಿ;ನೇಪಾಳ;1

ಆಯುಷ್‌ ಘಲನ್‌;ನೇಪಾಳ;1

ಸುಮನ್ ಲಾಮ;ನೇಪಾಳ;1

ಉಭಯ ತಂಡಗಳ ಬಲಾಬಲ

ಭಾರತ ನೇಪಾಳ

2;ಕ್ಲೀನ್ ಶೀಟ್‌;1

5;ಗೋಲುಗಳು;5

42;ಶಾಟ್ಸ್‌;35

15;ಗುರಿಯತ್ತ ಶಾಟ್‌;13

ಆರಂಭ: ರಾತ್ರಿ 8.30 (ಭಾರತೀಯ ಕಾಲಮಾನ)

ನೇರ ಪ್ರಸಾರ: ಯೂರೊ ಸ್ಪೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT