ಶುಕ್ರವಾರ, ಮೇ 14, 2021
25 °C
ವರ್ಷದ ಬಳಿಕ ಅಂತರರಾಷ್ಟ್ರೀಯ ಪಂದ್ಯ: ಯುವ ಆಟಗಾರರ ಮೇಲೆ ಭರವಸೆ

ಭಾರತಕ್ಕೆ ಒಮಾನ್ ವಿರುದ್ಧ ಮೊದಲ ಜಯದ ನಿರೀಕ್ಷೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ದುಬೈ: ಒಂದು ವರ್ಷದ ನಂತರ ಅಂತರರಾಷ್ಟ್ರೀಯ ಸ್ಪರ್ಧಾ ಕಣಕ್ಕೆ ಇಳಿಯಲಿರುವ ಭಾರತ ಫುಟ್‌ಬಾಲ್ ತಂಡ ಸೌಹಾರ್ದ ‍ಪಂದ್ಯದಲ್ಲಿ ಒಮಾನ್ ಎದುರು ಗುರುವಾರ ಸೆಣಸಲಿದೆ. ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಲು ನಾಯಕ ಸುನಿಲ್ ಚೆಟ್ರಿ ಇಲ್ಲ. ಆದರೆ ಯುವ ಆಟಗಾರರು ಗೆಲುವಿನ ಭರವಸೆಯಲ್ಲಿದ್ದಾರೆ. ಚೆಟ್ರಿ ಕೋವಿಡ್‌–19 ಸೋಂಕಿಗೆ ಒಳಗಾಗಿ ಭಾರತದಲ್ಲಿ ಸ್ವಯಂ ಪ್ರತ್ಯೇಕತಾವಾಸದಲ್ಲಿದ್ದಾರೆ.

2019ರ ನವೆಂಬರ್‌ನಲ್ಲಿ ಭಾರತ ತಂಡ ಕೊನೆಯದಾಗಿ ಅಂತರರಾಷ್ಟ್ರೀಯ ಪಂದ್ಯ ಆಡಿತ್ತು. ಈಗ ತಂಡದಲ್ಲಿ ಯುವ ಆಟಗಾರರೇ ತುಂಬಿದ್ದು ಅವರೆಲ್ಲ ಇಂಡಿಯನ್ ಸೂಪರ್ ಲೀಗ್‌ ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದಾರೆ. ಮುಕ್ತವಾಗಿ ಮತ್ತು ನಿರಾತಂಕವಾಗಿ ಆಡುವಂತೆ ಕೋಚ್ ಇಗರ್ ಸ್ಟಿಮ್ಯಾಕ್ ಆಟಗಾರರಿಗೆ ಸೂಚಿಸಿದ್ದಾರೆ.  

ಒಮಾನ್ ಕಳೆದ ಶನಿವಾರ ಜೋರ್ಡಾನ್ ವಿರುದ್ಧ ಸೌಹಾರ್ದ ಪಂದ್ಯ ಆಡಿದ್ದು ಅದು ಗೋಲು ರಹಿತ ಡ್ರಾದಲ್ಲಿ ಕೊನೆಗೊಂಡಿತ್ತು. ಅದಕ್ಕೂ ಮೊದಲು ಆ ತಂಡ 2019ರ ಡಿಸೆಂಬರ್‌ನಲ್ಲಿ ಕೊನೆಯ ಪಂದ್ಯ ಆಡಿತ್ತು. ಭಾರತ ಕೊನೆಯದಾಗಿ ಆಡಿದ ಪಂದ್ಯದಲ್ಲಿ ಏಷ್ಯನ್ ಚಾಂಪಿಯನ್ ಕತಾರ್ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿತ್ತು.  

27 ಮಂದಿಯ ತಂಡಲ್ಲಿರುವ ಬಹುತೇಕರು ಹೊಸಬರು. ಕೆಲವರು ಮೊದಲ ಬಾರಿ ತಂಡಕ್ಕೆ ಆಯ್ಕೆಯಾಗಿದ್ದರೆ ಇನ್ನು ಕೆಲವರು ತಂಡದಲ್ಲಿದ್ದರೂ ಈ ಹಿಂದಿನ ಪಂದ್ಯಗಳಲ್ಲಿ ಕಣಕ್ಕೆ ಇಳಿಯಲು ಅವಕಾಶ ಸಿಕ್ಕಿರಲಿಲ್ಲ. ಆಕಾಶ್ ಮಿಶ್ರಾ, ಲಿಸ್ಟನ್ ಕೊಲ್ಯಾಕೊ, ಇಶಾನ್ ಪಂಡಿತ, ಬಿಪಿನ್ ಸಿಂಗ್‌ ಮತ್ತು ಲಾಲೆಂಗ್‌ಮಾವಾ ಮುಂತಾದವರು ಐಎಸ್‌ಎಲ್‌ನಲ್ಲಿ ಮಿಂಚಿದ್ದಾರೆ.

ಹೀಗಾಗಿ ಒಮಾನ್ ವಿರುದ್ಧವೂ ಉತ್ತಮ ಸಾಮರ್ಥ್ಯ ತೋರುವ ಭರವಸೆಯಲ್ಲಿದ್ದಾರೆ. ಅಮರಿಂದರ್ ಸಿಂಗ್‌, ಚಿಂಗ್ಲೆನ್ಸಾನ ಸಿಂಗ್‌, ರಾವ್ಲಿನ್ ಬೋರ್ಜೆಸ್‌, ಲಾಲಿಯಂಗ್ಜ್ವಾಲ ಚಾಂಗ್ಟೆ, ಗುರುಪ್ರೀತ್‌ ಸಿಂಗ್, ಸಂದೇಶ್ ಜಿಂಗಾನ್ ಮತ್ತು ಅನಿರುದ್ಧ ಥಾಪ ಅವರ ಮೇಲೆಯೂ ಅಪಾರ ನಿರೀಕ್ಷೆ ಇದೆ.

ಫಿಫಾ ರ‍್ಯಾಂಕಿಂಗ್‌ನಲ್ಲಿ ಒಮಾನ್ 81ನೇ ಸ್ಥಾನದಲ್ಲಿದ್ದು ಭಾರತ 104ನೇ ಸ್ಥಾನದಲ್ಲಿದೆ. ಈ ಹಿಂದೆ ಉಭಯ ತಂಡಗಳು ಒಟ್ಟು ಆರು ಬಾರಿ ಮುಖಾಮುಖಿಯಾಗಿದ್ದು ಐದರಲ್ಲಿ ಒಮಾನ್ ಜಯ ಗಳಿಸಿದೆ. ಒಂದು ‍ಪಂದ್ಯ ಡ್ರಾಗೊಂಡಿದೆ.

ಭಾರತ ತಂಡ: ಗುರುಪ್ರೀತ್ ಸಿಂಗ್ ಸಂಧು, ಅಮರಿಂದರ್ ಸಿಂಗ್, ಸುಭಾಷಿಷ್ ರಾಯ್‌ ಚೌಧರಿ, ಧೀರಜ್ ಸಿಂಗ್‌, ಅಶುತೋಷ್ ಮೆಹ್ತಾ, ಆಕಾಶ್ ಮಿಶ್ರಾ, ಪ್ರೀತಂ ಕೊತಾಲ್‌, ಸಂದೇಶ್ ಜಿಂಗಾನ್‌, ಚಿಂಗ್ಲೆನ್ಸಾನ ಸಿಂಗ್‌, ಆದಿಲ್ ಖಾನ್‌, ಮಂದಾರ್ ರಾವ್ ದೇಸಾಯಿ, ಮಶೂರ್ ಶರೀಫ್‌, ರಾವ್ಲಿನ್ ಬೋರ್ಜೆಸ್‌, ಲಾಲೆಂಗ್ಮಾವಿಯ, ಜೀಕ್ಸನ್ ಸಿಂಗ್‌, ರೇನಿಯರ್‌ ಫರ್ನಾಂಡಿಸ್‌, ಅನಿರುದ್ಧ ಥಾಪಾ, ಬಿಪಿನ್ ಸಿಂಗ್‌, ಯಾಸಿರ್ ಮೊಹಮ್ಮದ್, ಸುರೇಶ್‌ ಸಿಂಗ್‌, ಹಲಿಚರಣ್ ನರ್ಜರೆ, ಲಾಲಿಯಂಗ್ಜ್ವಾಲ ಚಾಂಗ್ಟೆ, ಆಶಿಕ್ ಕುರುಣಿಯನ್‌, ಮನ್ವೀರ್ ಸಿಂಗ್‌, ಇಶಾನ್ ಪಂಡಿತ, ಹಿತೇಶ್‌ ಶರ್ಮಾ, ಲಿಸ್ಟನ್ ಕೊಲ್ಯಾಕೊ.

ಆರಂಭ: ಸಂಜೆ 7.15. ನೇರ ಪ್ರಸಾರ: ಯೂರೊಸ್ಪೋರ್ಟ್‌.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು