20 ವರ್ಷದೊಳಗಿನವರ ಫುಟ್‌ಬಾಲ್‌ ಟೂರ್ನಿ: ಭಾರತ ಎದುರು ಅರ್ಜೆಂಟೀನಾಗೆ ಆಘಾತ

7

20 ವರ್ಷದೊಳಗಿನವರ ಫುಟ್‌ಬಾಲ್‌ ಟೂರ್ನಿ: ಭಾರತ ಎದುರು ಅರ್ಜೆಂಟೀನಾಗೆ ಆಘಾತ

Published:
Updated:

ವಲೆನಿಕಾ, ಸ್ಪೇನ್‌: ಇಲ್ಲಿ ನಡೆಯುತ್ತಿರುವ 20 ವರ್ಷದೊಳಗಿನವರ ಕೋಟಿಫ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಭಾರತ ತಂಡದ ಎದುರು ಅರ್ಜೆಂಟೀನಾ ತಂಡವು ಆಘಾತ ಅನುಭವಿಸಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಭಾರತ ತಂಡವು 2–1ರಿಂದ ಆರು ಬಾರಿ ಚಾಂಪಿಯನ್‌ ಆಗಿದ್ದ ಅರ್ಜೆಂಟೀನಾ ತಂಡವನ್ನು ಮಣಿಸಿತು. 

ಪಂದ್ಯದ ಆರಂಭದಿಂದಲೂ ಉತ್ತಮ ಆಟ ಆಡಿದ ಭಾರತವು ನಾಲ್ಕನೇ ನಿಮಿಷದಲ್ಲಿ ತನ್ನ ಖಾತೆ ತೆರೆಯಿತು. ದೀಪಕ್‌ ತಂಗ್ರಿ ಅವರ ಹೆಡರ್‌ ಮೂಲಕ ಅರಳಿದ ಗೋಲಿನಿಂದ ಭಾರತ ತಂಡವು 1–0ಯ ಮುನ್ನಡೆ ಗಳಿಸಿತು. ಇದರಿಂದಾಗಿ ಉತ್ತೇಜನಗೊಂಡ ಭಾರತ ತಂಡವು ಆಕ್ರಮಣಕಾರಿ ಆಟಕ್ಕಿಳಿಯಿತು. 

ಸುರೇಶ್‌ ಸಿಂಗ್‌ ವಾಂಗ್ಜಮ್‌, ಬೋರಿಸ್‌ ಸಿಂಗ್‌ ತಾಂಗ್ಜಮ್‌ ಹಾಗೂ ಅನಿಕೇತ್‌ ಜಾಧವ್‌ ಅವರು ಮೊದಲಾರ್ಧದಲ್ಲಿ ಗೋಲು ಗಳಿಸಲು ಪ್ರಯತ್ನಿಸಿದರು. ಆದರೆ, ಎದುರಾಳಿ ತಂಡದ ರಕ್ಷಣಾ ವಿಭಾಗದ ಆಟಗಾರರು ಅದನ್ನು ವಿಫಲಗೊಳಿಸಿದರು. ಮೊದಲಾರ್ಧದ ಅಂತ್ಯಕ್ಕೆ ಭಾರತವು 1–0ಯ ಮುನ್ನಡೆ ಹೊಂದಿತ್ತು.

ದ್ವಿತೀಯಾರ್ಧದಲ್ಲಿ ಭಾರತದ ಅನ್ವರ್‌ ಅಲಿ ಅವರು ಗೋಲು ಗಳಿಸಲು ಸಿಕ್ಕ ಅವಕಾಶದಲ್ಲಿ ವಿಫಲವಾದರು. 54ನೇ ನಿಮಿಷದಲ್ಲಿ ಕೆಂಪು ಕಾರ್ಡ್‌ ಪಡೆದ ಭಾರತದ ಜಾಧವ್‌ ಅವರು ಅಂಗಳದಿಂದ ಹೊರನಡೆದರು.

ಮುಂದಿನ ಕೆಲವು ನಿಮಿಷಗಳಲ್ಲಿ ಅರ್ಜೆಂಟೀನಾ ತಂಡವು ಗೊಲು ಗಳಿಸಲು ಹರಸಾಹಸಪಟ್ಟಿತು. ಆದರೆ, ಭಾರತದ ಗೊಲ್‌ಕೀಪರ್‌ ಪ್ರಭುಶುಕನ್‌ ಗಿಲ್‌ ಅವರು ಅದಕ್ಕೆ ತಡೆಯಾದರು.

68ನೇ ನಿಮಿಷದಲ್ಲಿ ಸಿಕ್ಕ ಫ್ರೀ ಕಿಕ್‌ ಅವಕಾಶವನ್ನು ಅನ್ವರ್‌ ಅಲಿ ಅವರು ಸದುಪಯೋಗಪಡಿಸಿಕೊಂಡರು. ಅವರ ಅಮೋಘ ಗೋಲಿನ ನೆರವಿನಿಂದ ಭಾರತವು 2–0ಯ ಮುನ್ನಡೆ ಗಳಿಸಿತು. ಮುಂದಿನ ನಾಲ್ಕು ನಿಮಿಷದೊಳಗೆ ಅರ್ಜೆಂಟೀನಾ ತಂಡವು ಗೋಲು ದಾಖಲಿಸಿ ಮುನ್ನಡೆಯನ್ನು ತಗ್ಗಿಸಿಕೊಂಡಿತು. 

ಇದಾದ ನಂತರದ ಅವಧಿಯಲ್ಲಿ ಭಾರತ ತಂಡವು ಎಚ್ಚರಿಕೆಯ ಆಟ ಆಡಿ ಗೆಲುವಿನ ಸಂಭ್ರಮದಲ್ಲಿ ಮುಳುಗಿತು. ಭಾರತದ ರಕ್ಷಣಾ ಕೋಟೆಯನ್ನು ಬೇಧಿಸಲು ವಿಫಲವಾದ ಅರ್ಜೆಂಟೀನಾ ನಿರಾಸೆ ಅನುಭವಿಸಿತು.

ಫ್ಲಾಯ್ಡ್‌ ಪಿಂಟೊ ಅವರ ಮಾರ್ಗದರ್ಶನದ ಭಾರತ ತಂಡವು ಈ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಮರ್ಸಿಯಾ ತಂಡದ ವಿರುದ್ಧ 0–2ರಿಂದ ಸೋತಿತ್ತು. ಎರಡನೇ ಪಂದ್ಯದಲ್ಲಿ 0–3ರಿಂದ ಮೌರಿಟೇನಿಯಾ ಎದುರು ನಿರಾಸೆ ಅನುಭವಿಸಿತ್ತು. ವೆನೆಜುವೆಲಾದೊಂದಿಗಿನ ಮೂರನೇ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು.  

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !