ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಸಕರನ್ನು ಸೋಲಿಸಿ ಇತಿಹಾಸ ನಿರ್ಮಿಸಿ’

ಸೋಮವಾರಪೇಟೆಯಲ್ಲಿ ಜೆಡಿಎಸ್ ಮುಖಂಡ ಸಾಂತ್ವೇರಿ ವಸಂತ್ ಮನವಿ
Last Updated 9 ಮೇ 2018, 12:41 IST
ಅಕ್ಷರ ಗಾತ್ರ

ಸೋಮವಾರಪೇಟೆ: 1983ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಗುಂಡೂರಾವ್‌ರವರನ್ನು ಸೋಲಿಸಿದ ಕ್ಷೇತ್ರದ ಮತದಾರರು ಹಾಲಿ ಶಾಸಕರನ್ನು ಸೋಲಿಸುವ ಮೂಲಕ ಇತಿಹಾಸ ನಿರ್ಮಿಸಬೇಕು ಎಂದು ಜೆಡಿಎಸ್ ಮುಖಂಡ ಸಾಂತ್ವೇರಿ ವಸಂತ್ ಮನವಿ ಮಾಡಿದರು.

ಜೇಸಿ ವೇದಿಕೆಯಲ್ಲಿ ಸೋಮವಾರ ನಡೆದ ಜೆಡಿಎಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಳೆದ 20 ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಶಾಸಕರಾಗಿರುವ ಅಪ್ಪಚ್ಚುರಂಜನ್ ಯಾವುದೇ ಅಭಿವೃದ್ದಿ ಮಾಡದೆ, ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ತಮ್ಮನ್ನು ಪ್ರಶ್ನೆ ಮಾಡುವವರ ಮೇಲೆ ವಿರೋಧಿ ಭಾವನೆ ತಾಳುತ್ತಾರೆ. ಪಕ್ಷದಲ್ಲಿ ಎರಡನೇ ಹಂತದ ಯುವಕರನ್ನು ಬೆಳೆಸಲು ಮುಂದಾಗಿಲ್ಲ. ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದರೆ ನೀವು ನಮಗೆ ಮತ ನೀಡಿಲ್ಲ ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ಕ್ಷೇತ್ರದಲ್ಲಿ ರಸ್ತೆ ಡಾಮರು ಕಾಣದೆ ವರ್ಷಗಳೇ ಕಳೆದಿವೆ. ಪ್ರಜ್ಞಾವಂತ ಮತದಾರರು ರೈತ ಪರ ಕಾಳಜಿಯುಳ್ಳ ಮಾಜಿ ಸಚಿವ ಜೀವಿಜಯರವರನ್ನು ಗೆಲ್ಲಿಸುವ ಮೂಲಕ ಕ್ಷೇತ್ರದಲ್ಲಿ ಬದಲಾವಣೆ ತರಬೇಕೆಂದು ಮನವಿ ಮಾಡಿದರು.

ಈಗಾಗಲೇ ಬಿಜೆಪಿ ಶಾಸಕರು ಸೋಲುವ ಭೀತಿಯಿಂದ ಕ್ಷೇತ್ರದ ಸುಮಾರು 20ಸಾವಿರ ಮತಗಳನ್ನು ₹ 2ಸಾವಿರಕ್ಕೆ ಖರೀದಿ ಮಾಡುತ್ತೇನೆ ಎಂದು ಹೇಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹಾಗಾದಲ್ಲಿ ಕೇವಲ ₹2ಸಾವಿರಕ್ಕೆ ಮತಗಳನ್ನು ಖರೀದಿಸಲು ಮತದಾರರು ಮಾರುಕಟ್ಟೆಯ ಸರಕು ಎಂದು ತಿಳಿದಿರುವುದು ಮತದಾರರ ದುರಾದೃಷ್ಟ.

ಒಂದೊಮ್ಮೆ ಹಣದ ಆಸೆಗೆ ರೈತರು ಹಾಗೂ ಮತದಾರರು ಬಲಿಯಾದರೆ, ಕಡಗದಾಳು ಗ್ರಾಮದಲ್ಲಿ ಸಂಘ ಪರಿವಾರದ ಕಾರ್ಯಕರ್ತರನ್ನು ಹೊಡೆಯಲು ಮುಂದಾದ ಶಾಸಕರು ಮುಂದಿನ ದಿನಗಳಲ್ಲಿ ತಮ್ಮ ಕಚೇರಿಗೆ ಕರೆಸಿ ತನ್ನನ್ನು ವಿರೋಧಿಸಿದವರ ಮೇಲೆ ಹಲ್ಲೆ ಮಾಡುವುದು ನಿಶ್ಚಿತ ಎಂದರು.

ಕಳೆದ ಮೂರು ದಶಕಗಳಿಂದ ಕ್ಷೇತ್ರದಲ್ಲಿ ನಡೆದ ಹಲವು ಹಿಂದೂಪರ ಹೋರಾಟಗಳಲ್ಲಿ ನನ್ನನ್ನು ಸೇರಿದಂತೆ ನೂರಾರು ಅಮಾಯಕರ ಮೇಲೆ ಮಾತ್ರ ಮೊಕದ್ದಮೆ ದಾಖಲಾಗಿವೆ.

ಆದರೆ, ಈವರೆಗೂ ಶಾಸಕ ಅಪ್ಪಚ್ಚುರಂಜನ್, ಹಿರಿಯ ಸಹಕಾರಿ ಬಿ.ಡಿ.ಮಂಜುನಾಥ್, ಕ್ಷೇತ್ರ ಸಮಿತಿ ಅಧ್ಯಕ್ಷ ಎಂ.ಎನ್.ಕೊಮಾರಪ್ಪರವರುಗಳ ಮೇಲೆ ಯಾವುದೇ ಮೊಕದಮ್ಮೆ ದಾಖಲಾಗಿಲ್ಲ. ಇವರು ಮಾತ್ರ ಮನೆಯಲ್ಲಿ ಆರಾಮವಾಗಿ ಇದ್ದುಕೊಂಡು ಅಮಾಯಕ ಹುಡುಗರ ಹಾದಿ ತಪ್ಪಿಸಿ ಸಮಾಜದಲ್ಲಿ ಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಆರ್.ಸುರೇಶ್ ಮಾತನಾಡಿ, ಕಳೆದ ಎರಡು ಅವಧಿಯಲ್ಲಿ ಮಾಜಿ ಸಚಿವ ಜೀವಿಜಯನವರು ಅಲ್ಪ ಮತಗಳಿಂದ ಸೋಲು ಅನುಭವಿಸಿದರು. ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಕೆಲಸ ಮಾಡದ ಶಾಸಕ ಅಪ್ಪಚ್ಚುರಂಜನ್ರವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜನತೆಯ ಮುಂದೆ ಮತ ಕೇಳಲು ನೈತಿಕತೆಯಿಲ್ಲ ಎಂದರು.

ಜಿಲ್ಲಾ ಪ್ರಧಾನಕಾರ್ಯದರ್ಶಿ ಕೆ.ಟಿ.ಪರಮೇಶ್ ಮಾತನಾಡಿ, ಹಾರಂಗಿ ಡ್ಯಾಂನಿಂದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಅಂದಿನ ಶಾಸಕ ಬಿ.ಎ.ಜೀವಿಜಯವರ ಶ್ರಮವೇ ಕಾರಣ. ಎಂದು ಹೇಳಿದರು.

ಇದೇ ಸಂದರ್ಭ ಕಾಂಗ್ರೆಸ್ ಸೇವಾದಳದ ಮಾಜಿ ತಾಲ್ಲೂಕು ಅಧ್ಯಕ್ಷ ಬಸವರಾಜು, ದಸಂಸ ಮುಖಂಡ ಎಂ.ಪಿ.ಹೊನ್ನಪ್ಪ ಸೇರಿದಂತೆ ಹಲವರು ಪಕ್ಷಕ್ಕೆ ಸೇರ್ಪಡೆಗೊಂಡರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಪುಟ್ಟರಾಜು, ತಾಲ್ಲೂಕು ಪಂಚಾಯಿತಿ ಸದಸ್ಯೆ ಕುಸುಮ, ಪದಾಧಿಕಾರಿಗಳಾದ ಜಾನಕಿ ವೆಂಕಟೇಶ್, ಎಸ್.ಎಂ.ಡಿಸಿಲ್ವಾ, ರಾಜಾರಾವ್, ಎಂ.ಡಿ. ದೇವರಾಜಯ್ಯ, ಎಚ್.ಬಿ.ಜಯಮ್ಮ, ಬಗ್ಗನ ಅನಿಲ್‌ಕುಮಾರ್, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT