ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿದ್ದಿನ ಕಾದಾಟದಲ್ಲಿ ಗೆದ್ದ ಬಿಎಫ್‌ಸಿ

ಇಂಡಿಯನ್ ಸೂಪರ್‌ ಲೀಗ್‌ ಫುಟ್‌ಬಾಲ್ ಟೂರ್ನಿ
Last Updated 30 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ಡಿಫೆಂಡರ್‌ಗಳು ಮೆರೆದಾಡಿದ ಪಂದ್ಯದ ಆರಂಭದಿಂದ ಅಂತ್ಯದ ವರೆಗೂ ಪ್ರೇಕ್ಷಕರು ರೋಮಾಂಚನದ ರಸಗಡಲಲ್ಲಿ ಮಿಂದರು. ಕಂಠೀರವ ಕ್ರೀಡಾಂಗಣದಲ್ಲಿ ಬಲಿಷ್ಠ ತಂಡಗಳ ಪೈಪೋಟಿಗೆ ಸಾಕ್ಷಿಯಾದ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಶುಕ್ರವಾರದ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡ ಎಫ್‌ಸಿ ಪುಣೆ ಸಿಟಿ ತಂಡವನ್ನು 2–1ರಿಂದ ಮಣಿಸಿತು. ಈ ಮೂಲಕ ಟೂರ್ನಿಯಲ್ಲಿ ಅಜೇಯ ಓಟವನ್ನು ಮುಂದುವರಿಸಿತು.

ಎರಡೂ ತಂಡಗಳು 4–2–3–1ರ ವಿನ್ಯಾಸದಲ್ಲಿ ಅಂಗಣಕ್ಕೆ ಇಳಿದಿದ್ದವು. ಆದರೆ ಪುಣೆ ತಂಡದ ರಕ್ಷಣಾ ಪಡೆಯ ವೈಫಲ್ಯ 11ನೇ ನಿಮಿಷದಲ್ಲೇ ಜಾಹೀರಾಯಿತು.ಉದಾಂತ ಸಿಂಗ್‌, ದಿಮಾಸ್ ಡೆಲ್ಗಾಡೊ ಮತ್ತು ಹರ್ಮನ್‌ಜೋತ್ ಖಾಬ್ರಾ ಅವರು ಹೆಣೆದ ತಂತ್ರಗಳಿಗೆ ಎದುರಾಳಿ ತಂಡದ ಆಟಗಾರರು ಅವಾಕ್ಕಾದರು. ಪುಣೆ ಆಟಗಾರರ ಮಧ್ಯದಲ್ಲಿ ಚೆಂಡನ್ನು ಡ್ರಿಬಲ್ ಮಾಡುತ್ತ ಸಾಗಿದ ಉದಾಂತ ಮಿಂಚಿನ ವೇಗದಲ್ಲಿ ಗೋಲುಪೆಟ್ಟಿಗೆಯ ಒಳಗೆ ತೂರಿಬಿಟ್ಟರು. ಗ್ಯಾಲರಿಗಳಲ್ಲಿ ಮೆಕ್ಸಿಕನ್ ಅಲೆ ಎದ್ದಿತು.

ನಾಲ್ಕೇ ನಿಮಿಷಗಳಲ್ಲಿ ಬಿಎಫ್‌ಸಿ ಮತ್ತೊಂದು ಗೋಲು ಹೊಡೆಯಿತು. ಆದರೆ ಚೆಂಡು ಸಾಗಿದ್ದು ತಮ್ಮದೇ ಗೋಲುಪೆಟ್ಟಿಗೆಯೊಳಗೆ!

ಎದುರಾಳಿಗಳಿಗೆ ಗೋಲಿನ ಉಡುಗೊರೆ ನೀಡಿದ ರಾಹುಲ್ ಭೆಕೆ, ತವರಿನ ಪ್ರೇಕ್ಷಕರ ಕೋಪಕ್ಕೆ ತುತ್ತಾದರು. ನಿರಾಸೆಯಿಂದ ಹೊರಬರಲು ಬಿಎಫ್‌ಸಿ ನಡೆಸಿದ ಪ್ರಯತ್ನಗಳನ್ನು ಗೋಲ್‌ಕೀಪರ್ ಕಮಲ್‌ಜೀ‌ತ್‌ ಸಿಂಗ್ ವಿಫಲಗೊಳಿಸಿದರು.

ನಿರಂತರ ಆಕ್ರಮಣ: ದ್ವಿತೀಯಾರ್ಧದ ಆರಂಭದಿಂದಲೇ ಬಿಎಫ್‌ಸಿ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಹೆಚ್ಚು ಕಾಲ ಚೆಂಡನ್ನು ತಮ್ಮ ಬಳಿಯಲ್ಲಿಯೇ ಇರಿಸಿಕೊಂಡು ಸತತ ಆಕ್ರಮಣ ನಡೆಸಿದರೂ ಫಲ ಸಿಗಲಿಲ್ಲ. ಗ್ಯಾಲರಿಯಲ್ಲಿ ಎಫ್‌ಸಿ...ಬಿಎಫ್‌ಸಿ...ಎಂಬ ಕೂಗು ಜೋರಾದಂತೆ ಬಿಎಫ್‌ಸಿ ಆಟಗಾರರು ಚುರುಕಾದರು. 88ನೇ ನಿಮಿಷದಲ್ಲಿ ಎದುರಾಳಿ ಪಾಳಯಕ್ಕೆ ನುಗ್ಗಿದ ರಾಹುಲ್‌ ಭೆಕೆ ಚೆಂಡನ್ನು ಗುರಿ ಮುಟ್ಟಿಸಿ ಕೇಕೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT