ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ

Last Updated 21 ಮೇ 2018, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಇಂದಿರಾ ಗಾಂಧಿ ಅಧಿಕಾರಾವಧಿಯಲ್ಲಿ ದೇಶದಲ್ಲಿ ಘೋಷಿತ ತುರ್ತು ಪರಿಸ್ಥಿತಿ ಇತ್ತು. ಆದರೆ, ಈಗ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ ತಲೆದೋರಿದ್ದು, ಶತ್ರುವಿನ ಮುಖ ಗುರುತಿಸಲಾಗದಂತಿದೆ’ ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲೆ, ಮಾನವ ಹಕ್ಕುಗಳ ಹೋರಾಟಗಾರ್ತಿ ಇಂದಿರಾ ಜೈಸಿಂಗ್‌ ಸೋಮವಾರ ಇಲ್ಲಿ ಅಭಿಪ್ರಾಯಪಟ್ಟರು.

ಘೋಷಿತ ತುರ್ತು ಪರಿಸ್ಥಿತಿಗಿಂತ ಅಘೋಷಿತ ತುರ್ತು ಪರಿಸ್ಥಿತಿ ತುಂಬಾ ಅಪಾಯಕಾರಿಯಾದದ್ದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.

‘ಸ್ವಾತಂತ್ರ್ಯ ಚಳವಳಿಯ ಫಲವಾಗಿ ರೂಪುಗೊಂಡಿರುವ ದೇಶದ ಸಂವಿಧಾನವನ್ನು ಪ್ರಶ್ನಿಸುವ ಮತ್ತು ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಪ್ರಯತ್ನಗಳನ್ನು ಹಿಂದುತ್ವವಾದಿ ಮತೀಯ ಶಕ್ತಿಗಳು ನಿರಂತರವಾಗಿ ನಡೆಸುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆಯಾಗಿದೆ’ ಎಂದರು.

ರಾಜ್ಯಪಾಲರ ನಡೆ ನಿರೀಕ್ಷಿತ: ಕರ್ನಾಟಕದ ರಾಜ್ಯಪಾಲರು ಸಂವಿಧಾನದ ಆಶಯಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿರುವುದರಲ್ಲಿ ಅಂತಹ ವಿಶೇಷ ಮತ್ತು ಆಶ್ಚರ್ಯ ಎನಿಸದು. ಕಾರಣ ಅವರು ಮೂಲತಃ ಬಿಜೆಪಿ, ಸಂಘಪರಿವಾರಕ್ಕೆ ಸೇರಿರುವುದರಿಂದ ನಿರೀಕ್ಷೆಯಂತೆಯೇ ನಡೆದುಕೊಂಡಿದ್ದಾರೆ ಎಂದು ಹೇಳಿದರು.

ದೇಶಪ್ರೇಮ, ತತ್ವ, ಸಿದ್ಧಾಂತದ ಬಗ್ಗೆ ಮಾತನಾಡುವ ಬಿಜೆಪಿಯ ಬೊಗಳೆತನ ಮತ್ತು ಅದರ ಟೊಳ್ಳುತನ ಏನೆಂಬುದು ಕರ್ನಾಟಕದ ಇತ್ತೀಚಿನ ರಾಜಕೀಯ ಬೆಳವಣಿಗೆಯಿಂದ ಜಗಜ್ಜಾಹೀರವಾಗಿದೆ. ಇದರಿಂದ ರಾಷ್ಟ್ರಮಟ್ಟದಲ್ಲಿ ಬಿಜೆಪಿ ತನ್ನ ಘನತೆಯನ್ನು ಮತ್ತಷ್ಟು ಕಳೆದುಕೊಂಡಿದೆ ಎಂದರು.

‘ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಕುರಿತು ಸುಪ್ರೀಂ ಕೋರ್ಟ್‌ನ ನಿರ್ಧಾರವನ್ನು ನಾನು ಸ್ವಾಗತಿಸಲು ಹೋಗುವುದಿಲ್ಲ. ಕಾರಣ, ಅದು ತನ್ನ ಕರ್ತವ್ಯವನ್ನು ನಿರ್ವಹಿಸಿದೆ ಅಷ್ಟೆ’ ಎಂದು ವಿಶ್ಲೇಷಿಸಿದರು.

ಮಾತು ನಿಲ್ಲಿಸಿಲ್ಲ: ಕೇಂದ್ರ ಸರ್ಕಾರ ತನ್ನ ವಿರುದ್ಧದ ಧ್ವನಿಯನ್ನು ಹತ್ತಿಕ್ಕಲು ಸದಾ ಪ್ರಯತ್ನಿಸುತ್ತಿದೆ. ಹೀಗಿದ್ದರೂ ಕೇಂದ್ರದ ಜನವಿರೋಧಿ ನಡೆಯ ಬಗ್ಗೆ ಮಾತನಾಡುವ ಯಾರೊಬ್ಬರೂ ತಮ್ಮ ಮಾತನ್ನು ನಿಲ್ಲಿಸಿಲ್ಲ. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದು ಆಶಾದಾಯಕ ಬೆಳವಣಿಗೆ ಎಂದರು.

ಮುಕ್ತ ಭಾರತ ಮತ್ತು ಎಲ್ಲರನ್ನೂ ಒಳಗೊಂಡ ಭಾರತ ಎಂಬುದು ಸಂವಿಧಾನದ ಆಶಯವಾಗಿದೆ. ಆದರೆ, ಈ ಕಲ್ಪನೆ ಮತ್ತು ಆಶಯದಮೇಲೆ ಕೇಂದ್ರ ಸರ್ಕಾರದ ಪ್ರಾಯೋಜಿತ ದಾಳಿಗಳು ನಡೆಯುತ್ತಲೇ ಇವೆ ಎಂದು ಆರೋಪಿಸಿದರು.

ತಾಳಕ್ಕೆ ಕುಣಿಯುವವರ ಸಂಖ್ಯೆ ಹೆಚ್ಚಳ: ದೇಶದ ಪತ್ರಿಕಾರಂಗದಲ್ಲೂ ಅಧಿಕಾರಶಾಹಿಯ ತಾಳಕ್ಕೆ ತಕ್ಕಂತೆ ಕುಣಿಯುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಆದರೂ ಕೆಲವು ಪತ್ರಿಕೆ ಮತ್ತು ಪತ್ರಕರ್ತರಿಂದ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ನಡೆದಿದೆ. ಇಂತಹ ಸುದ್ದಿ ಮಾಧ್ಯಮಗಳ ಮೇಲೂ ಬಿಜೆಪಿ ಪ್ರಾಯೋಜಿತ ದಾಳಿಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT