ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಫುಟ್‌ಬಾಲ್‌ನಲ್ಲಿ ಹೊಸ ಹೊನಲು

Last Updated 14 ಜೂನ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

‘ಮಹಿಳಾ ಫುಟ್‌ಬಾಲ್ ತಂಡಕ್ಕೆ ಅತ್ಯುನ್ನತ ಮಟ್ಟದ ಸಾಮರ್ಥ್ಯ ತೋರಲು ಸಾಧ್ಯವಿದೆ ಎಂಬುದನ್ನು ನಾವು ಪದೇ ಪದೇ ಹೇಳುತ್ತಲೇ ಇದ್ದೇವೆ. ಈ ಮಾತಿಗೆ ಅಂಗಣದಲ್ಲೇ ಸಾಕ್ಷಿ ಕೊಡಲು ಈಗ ಅಪೂರ್ವ ಅವಕಾಶ ಒದಗಿದೆ. ಮಹಿಳಾ ಫುಟ್‌ಬಾಲ್‌ಗೆ ಮನ್ನಣೆ ಸಿಗುವಂತೆ ಮಾಡುವ ಗುರುತರ ಜವಾಬ್ದಾರಿಯೂ ನಮ್ಮ ಮೇಲೆ ಇದ್ದು ಅದನ್ನು ಸಮರ್ಥವಾಗಿ ನಿಭಾಯಿಸುವ ಭರವಸೆ ಇದೆ...’

ಎಎಫ್‌ಸಿ ಮಹಿಳೆಯರ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿಯ 2022ರ ಆವೃತ್ತಿಯ ಆತಿಥ್ಯವನ್ನು ಭಾರತ ವಹಿಸಲಿದೆ ಎಂದು ಜೂನ್ ಮೊದಲ ವಾರ ಘೋಷಣೆಯಾದ ನಂತರ ಭಾರತ ತಂಡದ ಗೋಲ್‌ಕೀಪರ್ ಅದಿತಿ ಚೌಹಾನ್ ಆಡಿದ ಮಾತು ಇದು.

ಏಷ್ಯಾಕಪ್ ಟೂರ್ನಿಗೂ ಮೊದಲು, ಮುಂದಿನ ವರ್ಷ 17 ವರ್ಷದೊಳಗಿನ ಮಹಿಳೆಯರ ವಿಶ್ವಕಪ್‌ ಟೂರ್ನಿಯೂ ಭಾರತದಲ್ಲಿ ನಡೆಯಲಿದೆ. ಇದು, ಮಹಿಳೆಯರ ವಿಶ್ವಕಪ್‌ ಟೂರ್ನಿಯೊಂದಕ್ಕೆ ಆತಿಥ್ಯ ವಹಿಸಲು ಭಾರತಕ್ಕೆ ಲಭಿಸಿದ ಮೊದಲ ಅವಕಾಶವೂ ಆಗಿದೆ. ಈ ಎರಡು ಟೂರ್ನಿಗಳು ಭಾರತದ ಮಹಿಳಾ ಫುಟ್‌ಬಾಲ್‌ನಲ್ಲಿ ಹೊಸ ಬೆಳಕು ಮೂಡಲು ನೆರವಾಗಲಿದೆ ಎಂಬುದು ಫುಟ್‌ಬಾಲ್ ವಲಯದ ಭರವಸೆ.

70ರ ದಶಕದಲ್ಲಿ ಏಷ್ಯಾದ ಪ್ರಬಲ ತಂಡಗಳಲ್ಲಿ ಒಂದಾಗಿದ್ದ ಭಾರತ ಮಹಿಳಾ ತಂಡ ಮತ್ತೆ ಕಳೆಗುಂದುತ್ತಾ ಸಾಗಿತು. ಈಚಿನ ಐದು ಆವೃತ್ತಿಗಳಲ್ಲಿ ಏಷ್ಯಾಕಪ್‌ಗೆ ಅರ್ಹತೆ ಗಳಿಸುವುದಕ್ಕೂ ಸಾಧ್ಯವಾಗಲಿಲ್ಲ. ಈ ಬಾರಿ ಆತಿಥೇಯ ರಾಷ್ಟ್ರ ಎಂಬ ಕಾರಣಕ್ಕೆ ಕಣಕ್ಕೆ ಇಳಿಯಲು ಆಯ್ಕೆಯಾಗಿದೆ. ಈ ಅವಕಾಶ ಸದುಪಯೋಗಪಡಿಸಿಕೊಂಡು ಏಷ್ಯಾದಲ್ಲಿ ಬಲ ಪ್ರದರ್ಶಿಸುವ ಸವಾಲು ತಂಡದ ಮುಂದಿದೆ.

ರತನ್ ಬಾಲಾ ದೇವಿ

ಎಎಫ್‌ಸಿ ಮಹಿಳೆಯರ ಏಷ್ಯಾಕಪ್‌ನ ಮೂರನೇ ಆವೃತ್ತಿ 1979ರಲ್ಲಿ ಭಾರತದಲ್ಲೇ ನಡೆದಿತ್ತು. ಆಗ ಭಾರತ ತಂಡ ಚೀನಾ ತೈಪೆಗೆ 0–2ರಲ್ಲಿ ಮಣಿದು ರನ್ನರ್ ಅಪ್‌ ಆಗಿತ್ತು. ನಂತರದ ಎರಡು ಆವೃತ್ತಿಗಳಲ್ಲೂ ಗಮನ ಸೆಳೆದಿತ್ತು. 1981ರಲ್ಲಿ ಹಾಂಗ್‌ಕಾಂಗ್ ಎದುರು 2–0ಯಿಂದ ಗೆಲುವು ಸಾಧಿಸಿ ಮೂರನೇ ಸ್ಥಾನ ಗಳಿಸಿದರೆ, 1983ರಲ್ಲಿ ಥಾಯ್ಲೆಂಡ್‌ ವಿರುದ್ಧ 0–3 ಅಂತರದಿಂದ ಸೋತು ಮತ್ತೊಮ್ಮೆ ರನ್ನರ್ ಅಪ್‌ ಆಗಿತ್ತು. ನಂತರ ಅರ್ಹತೆ ಗಳಿಸಿದ್ದು 1995ರಲ್ಲಿ. ಸತತ ಐದು ಬಾರಿ (2003ರ ವರೆಗೆ) ಮೊದಲ ಸುತ್ತಿನಲ್ಲೇ ಹೊರಬಿತ್ತು. ಆ ಮೇಲೆ ತಂಡದ ಮೇಲೆ ನಿರ್ವಹಣೆ ಮಸುಕಾಗುತ್ತಾ ಸಾಗಿತು.

2022ರ ಟೂರ್ನಿಯ ಬಳಿಕ ಕೆಲವು ಆಟಗಾರ್ತಿಯರು ನಿವೃತ್ತಿಯ ಅಂಚಿಗೆ ತಲುಪಲಿದ್ದಾರೆ. 32 ವರ್ಷ ತುಂಬಲಿರುವ ಗಂಗೊಮ್ ಬಾಲಾ ದೇವಿ (45ಕ್ಕೂ ಹೆಚ್ಚು ಪಂದ್ಯ ಆಡಿದ್ದಾರೆ), 30ನೇ ವರ್ಷಕ್ಕೆ ಕಾಲಿಡಲಿರುವ ಅದಿತಿ ಚೌಹಾಣ್‌, 29 ವರ್ಷ ತುಂಬಲಿರುವ ಆಶಾಲತಾ ದೇವಿ (45ಕ್ಕೂ ಹೆಚ್ಚು ಪಂದ್ಯ) ಮುಂತಾದವರ ಬದಲಿಗೆ ಆಟಗಾರ್ತಿಯರನ್ನು ಅಣಿಗೊಳಿಸಬೇಕಾಗಿದೆ.

ಆ ಟೂರ್ನಿಗೂ ಮೊದಲು 17 ವರ್ಷದವರ ವಿಶ್ವಕಪ್ ನಡೆಯಲಿರುವುದರಿಂದ ಹೊಸ ಆಟಗಾರ್ತಿಯರ ಶೋಧಕಾರ್ಯ ಸುಲಭವಾಗಲಿದೆ.ಗೋಲ್‌ಕೀಪರ್ ಅಂಶಿಕಾ, ಡಿಫೆಂಡರ್‌ಗಳಾದ ಅಸ್ತಾಮ್ ಒರಾನ್, ಫಂಜಬಮ್ ನಿರ್ಮಲಾ ದೇವಿ, ತಾಕ್ಜಮ್ ಮಾರ್ಟಿನಾ, ಸುಧಾ ಅಂಕಿತಾ ಟರ್ಕಿ, ಮಿಡ್‌ಫೀಲ್ಡರ್‌ಗಳಾದ ಅವೇಕಾ ಸಿಂಗ್, ನೌರೆಮ್ ಪ್ರಿಯಾಂಕಾ ದೇವಿ, ಫಾರ್ವರ್ಡ್‌ಗಳಾದ ಬಿ.ಮರಿಯಮ್ಮಾಳ್, ಸುಮತಿ ಕುಮಾರಿ, ಡೇಸಿ ಲಿಸಿ ಕ್ರಾಸ್ಟೊ ಮುಂತಾದವರ ಸಾಮರ್ಥ್ಯ ಸಾಬೀತುಪಡಿಸಿ ಸೀನಿಯರ್ ತಂಡದತ್ತ ದೃಷ್ಟಿ ನೆಡುವಂತೆ ಮಾಡುವ ಜವಾಬ್ದಾರಿಕೋಚ್ ಥಾಮಸ್ ಲೆನಾರ್ಟ್ ಡೆನ್ನರ್‌ಬಿ ಮೇಲೆ ಇದೆ.2017ರಲ್ಲಿ ಭಾರತದಲ್ಲಿ ನಡೆದ 17 ವರ್ಷದೊಳಗಿನ ಪುರುಷರ ವಿಶ್ವಕಪ್‌ನಲ್ಲಿ ಮಿಂಚಿದ ಆಟಗಾರರು ಭಾರತ ತಂಡದ ಬಾಗಿಲು ಬಡಿಯುತ್ತಿದ್ದಾರೆ. ಮಹಿಳಾ ತಂಡದಲ್ಲೂ ಅಂಥ ಪ್ರತಿಭೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಖುಷಿ ತಂದ ವಿಷಯ

ಏಷ್ಯಾಕಪ್‌ ಟೂರ್ನಿಯ ಆತಿಥ್ಯ ನಮ್ಮ ದೇಶಕ್ಕೆ ಲಭಿಸಿದ್ದು ಖುಷಿ ತಂದ ವಿಷಯ. ಇದಕ್ಕೆ ಕಾರಣವಾದ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ಗೆ ಕೃತಜ್ಞತೆಗಳು ಸಲ್ಲಬೇಕು. ಟೂರ್ನಿಗೆ ಸಿದ್ಧಗೊಳ್ಳಲು ಇನ್ನೂ ಒಂದೂವರೆ ವರ್ಷದ ಅವಧಿ ಇದೆ. ಅಷ್ಟರಲ್ಲಿ ಬಲಿಷ್ಠ ತಂಡ ಕಟ್ಟಲು ಪ್ರಯತ್ನಿಸಲಿದ್ದೇನೆ. ಜನರು ಕ್ರೀಡಾಂಗಣಗಳಿಗೆ ಬಂದು ನಮ್ಮ ತಂಡವನ್ನು ಹುರಿದುಂಬಿಸುವ ವಿಶ್ವಾಸವಿದೆ.

ಭಾರತದ ಮಹಿಳಾ ಕ್ರಿಕೆಟ್‌ನಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಜನರಲ್ಲಿ ಈಗ ಹೆಚ್ಚು ಅರಿವು ಉಂಟಾಗಿದೆ. ಎಎಫ್‌ಸಿ ಕಪ್ ಟೂರ್ನಿಯಲ್ಲಿ ಏಷ್ಯಾದ ಬಲಿಷ್ಠ ತಂಡಗಳ ವಿರುದ್ಧ ಆಡುವ ಅವಕಾಶ ನಮ್ಮ ಆಟಗಾರ್ತಿಯರಿಗೆ ಲಭಿಸಿದ್ದು ಜಪಾನ್‌, ಆಸ್ಟ್ರೇಲಿಯಾ, ಕೊರಿಯಾ ಮತ್ತು ಚಿನಾದಂಥ ತಂಡಗಳ ಆಟಗಾರ್ತಿಯರ ಸಾಮರ್ಥ್ಯಕ್ಕೆ ಸಾಕ್ಷಿಯಾಗುವ ಅವಕಾಶ ಪ್ರೇಕ್ಷಕರಿಗೂ ಸಿಗಲಿದೆ. ಇದು, ಹೊಸ ತಲೆಮಾರಿನ ಆಟಗಾರ್ತಿಯರಲ್ಲಿ ಆಸಕ್ತಿ ಮೂಡಲು ನೆರವಾಗಲಿದೆ.

- ಮೆಯ್ಮೋಳ್ ರಾಕಿ, ಭಾರತ ಮಹಿಳಾ ತಂಡದ ಕೋಚ್

***

ಏಷ್ಯಾಕಪ್‌ನಲ್ಲಿ ಆಡಬೇಕೆಂಬ ಆಸೆ ಪ್ರತಿಯೊಬ್ಬ ಆಟಗಾರ್ತಿಗೂ ಇರುತ್ತದೆ. ಈ ಬಾರಿ ಟೂರ್ನಿ ನಮ್ಮ ನೆಲದಲ್ಲೇ ನಡೆಯುತ್ತಿರುವುದರಿಂದ ಹುಮ್ಮಸ್ಸು ಹೆಚ್ಚಿದೆ. ನಾನು ಆಡಿದ ಯಾವುದೇ ಪಂದ್ಯವನ್ನು ತಾಯಿ ನೇರವಗಿ ವೀಕ್ಷಿಸಿರಲಿಲ್ಲ. ಈ ಟೂರ್ನಿಯಲ್ಲಿ ಏಷ್ಯಾದ ಬಲಿಷ್ಠ ತಂಡಗಳ ಎದುರಿನ ಪಂದ್ಯಗಳನ್ನು ಆಕೆಗೆ ತೋರಿಸಲಿದ್ದೇನೆ.

- ಆಶಾಲತಾ ದೇವಿ ಭಾರತ ತಂಡದ ನಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT