ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿ ‘ಓಟ’ಕ್ಕೆ ಮೆರುಗು ಉದಾಂತ ಆಟ

Last Updated 23 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ನಿಮ್ಮ ಹುಟ್ಟೂರು, ಬಾಲ್ಯದ ಬಗ್ಗೆ ತಿಳಿಸುವಿರಾ...ಫುಟ್‌ಬಾಲ್‌ಗೆ ನಿಮ್ಮ ಪ್ರವೇಶ ಹೇಗಾಯಿತು?

ಮಣಿಪುರದ ಸಣ್ಣ ಪಟ್ಟಣದಿಂದ ಬಂದವ ನಾನು. ನನ್ನೂರಿನಲ್ಲಿ ಮಕ್ಕಳ ಬಾಲ್ಯ ಫುಟ್‌ಬಾಲ್ ಜೊತೆಯಲ್ಲೇ ಸಾಗುತ್ತದೆ. ಹೀಗಾಗಿ ನೂರಾರು ಸಮರ್ಥ ಫುಟ್‌ಬಾಲ್ ಆಟಗಾರರು ಅಲ್ಲಿ ಬೆಳೆಯುತ್ತಿದ್ದಾರೆ. ಕ್ರೀಡೆಯಲ್ಲಿ ತುಂಬ ಆಸಕ್ತಿ ಇದ್ದುದರಿಂದ ನಾನು ಫುಟ್‌ಬಾಲ್ ಅಂಗಣದಲ್ಲಿ ಮಿಂಚಿದೆ. ಈಗ ವೃತ್ತಿಪರ ಫುಟ್‌ಬಾಲ್ ಆಟಗಾರನಾಗಿ ಬೆಳೆಯಲು ಸಾಧ್ಯವಾದದ್ದು ಖುಷಿ ನೀಡಿದೆ.

ಸಣ್ಣ ವಯಸ್ಸಿನಲ್ಲೇ ಟಾಟಾ ಫುಟ್‌ಬಾಲ್ ಅಕಾಡೆಮಿಯಲ್ಲಿ ತರಬೇತಿ ಪಡೆದವರು ನೀವು. ಅಲ್ಲಿನ ಅನುಭವವನ್ನು ಹಂಚಿಕೊಳ್ಳುವಿರಾ?

ನನ್ನನ್ನು ವೃತ್ತಿಪರ ಆಟಗಾರನನ್ನಾಗಿ ಮಾಡಿದ್ದರಲ್ಲಿ ಟಾಟಾ ಅಕಾಡೆಮಿಯ ಪಾತ್ರ ಮಹತ್ವದ್ದು. ಅಲ್ಲಿ ತರಬೇತಿ ಪಡೆದ ಕಾರಣ ಡಾರ್ಜಿಲಿಂಗ್ ಗೋಲ್ಡ್ ಕಪ್‌, ಸಾರಾಸ್ ಗೋಲ್ಡ್‌ ಕಪ್‌, 19 ವರ್ಷದೊಳಗಿನವರ ಲೀಗ್‌ ಮತ್ತಿತರ ಟೂರ್ನಿಗಳಲ್ಲಿ ಆಡಲು ಅವಕಾಶ ಲಭಿಸಿತು. ಈ ಅವಕಾಶಗಳೆಲ್ಲವೂ ನನ್ನನ್ನು ಹೊರ ಜಗತ್ತಿಗೆ ಪರಿಚಯಿಸಿದವು.

ಮೊದಲ ಬಾರಿ (ಎಎಫ್‌ಸಿ 19 ವರ್ಷದೊಳಗಿನವರ ಟೂರ್ನಿ) ಭಾರತವನ್ನು ಪ್ರತಿನಿಧಿಸಿದ ಅನುಭವ ಹೇಗಿತ್ತು?

ಯಾವುದೇ ಹಂತದಲ್ಲಾಗಲಿ, ದೇಶವನ್ನು ಪ್ರತಿನಿಧಿಸುವುದು ಎಂದರೆ ದೊಡ್ಡ ಗೌರವ. ನನ್ನನ್ನು 19 ವರ್ಷದೊಳಗಿನವರ ಎಎಫ್‌ಸಿ ಕಪ್ ಟೂರ್ನಿಯಲ್ಲಿ ಆಡಲು ಆರಿಸಿದಾಗ ತುಂಬ ರೋಮಾಂಚನಗೊಂಡಿದ್ದೆ. ತುರ್ಕ್‌ಮೆನಿಸ್ತಾನ ವಿರುದ್ಧ ಗಳಿಸಿದ ಮೊತ್ತ ಮೊದಲ ಗೋಲನ್ನು ಎಂದೂ ಮರೆಯಲು ಸಾಧ್ಯವಿಲ್ಲ.

ಸುನಿಲ್ ಚೆಟ್ರಿ ಅವರಂತ ಅಪ್ರತಿಮ ಆಟಗಾರರ ಜೊತೆ ಆಡುವಾಗ ಏನನಿಸುತ್ತದೆ?

ಚೆಟ್ರಿ ಭಾಯ್‌ ನನ್ನ ಪಾಲಿಗೆ ಕೇವಲ ಒಬ್ಬ ಸಹ ಆಟಗಾರ ಅಥವಾ ತಂಡದ ನಾಯಕ ಮಾತ್ರ ಅಲ್ಲ. ಪ್ರತಿ ಹಂತದಲ್ಲೂ ನನ್ನನ್ನು ಹುರಿದುಂಬಿಸುತ್ತಿರುವ ಅವರು, ಸಾಮರ್ಥ್ಯ ವೃದ್ಧಿಸುವುದರ ಬಗ್ಗೆ ಸದಾ ಸಲಹೆ ನೀಡುತ್ತಿರುತ್ತಾರೆ. ಅಂಗಣದಲ್ಲಿ ಮತ್ತೆ ಡ್ರೆಸಿಂಗ್ ಕೊಠಡಿಯಲ್ಲಿ ಇಂಥ ಆಟಗಾರರ ಜೊತೆ ಇರಲು ಸಾಧ್ಯವಾದದ್ದು ನನ್ನ ಪುಣ್ಯ.

ಐಎಸ್‌ಎಲ್‌ನಲ್ಲಿ ಆಡುತ್ತಿರುವ ವಿದೇಶಿ ಆಟಗಾರರಿಂದ ನೀವು ಪಡೆದ ಬಳುವಳಿ ಏನು?

ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುವ ಲೀಗ್‌ಗಳಲ್ಲಿ ಆಡಿದ ಅನುಭವ ಸಂಪತ್ತಿನೊಂದಿಗೆ ವಿದೇಶಿ ಆಟಗಾರರು ಇಲ್ಲಿಗೆ ಬರುತ್ತಾರೆ. ಅವರೊಂದಿಗೆ ಆಡುವುದರಿಂದ ನಮ್ಮ ಆಟದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ವಿದೇಶದ ಒಳ್ಳೆಯ ಡಿಫೆಂಡರ್‌ಗಳ ವಿರುದ್ಧ ಆಡುತ್ತಿದ್ದಂತೆ ನಮ್ಮ ಆಕ್ರಮಣದ ಶೈಲಿ ಸುಧಾರಿಸುತ್ತದೆ. ವಿದೇಶದ ಉತ್ತಮ ಆಕ್ರಮಣಕಾರಿ ಆಟಗಾರರ ಎದುರು ಆಡುವುದರಿಂದ ನಮ್ಮ ಡಿಫೆಂಡಿಂಗ್‌ ಸಾಮರ್ಥ್ಯ ವೃದ್ಧಿಸುತ್ತದೆ. ಐಎಸ್‌ಎಲ್‌ನಲ್ಲಿ ವಿದೇಶಿ ಆಟಗಾರರು ಆಡುತ್ತಿರುವುದರಿಂದ ಭಾರತದ ಫುಟ್‌ಬಾಲ್‌ಗೆ ಲಾಭವೇ ಆಗಿದೆ.

ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ನಲ್ಲಿ ಆಡುವಾಗ ಏನನಿಸುತ್ತದೆ?

ಅತ್ಯಂತ ನಾಜೂಕಾಗಿ ವೃತ್ತಿಪರ ಫುಟ್‌ಬಾಲ್ ಆಡುತ್ತಿರುವ ಕ್ಲಬ್ ಇದು. ಇಂಥ ಕ್ಲಬ್‌ನಲ್ಲಿ ಆಡುತ್ತಿರುವುದು ಗೌರವದ ವಿಷಯ. ಸಹ ಆಟಗಾರರು, ಕೋಚ್‌ಗಳು ಮತ್ತು ಆಡಳಿತದವರು ಒಟ್ಟಾಗಿ ತಂಡದ ಶ್ರೇಯಸ್ಸಿಗಾಗಿ ದುಡಿಯುತ್ತಿದ್ದಾರೆ. ಬಿಎಫ್‌ಸಿಯ ಬೆಳವಣಿಗೆಯಲ್ಲಿ ಅಭಿಮಾನಿಗಳ ಪಾತ್ರವೂ ದೊಡ್ಡದಿದೆ.

ಫುಟ್‌ಬಾಲ್‌ನಲ್ಲಿ ಸ್ಟ್ರೈಕರ್‌ಗಳಿಗೆ ಗೋಲು ಗಳಿಸುವ ಅವಕಾಶಗಳು ಹೆಚ್ಚು. ಮಿಡ್‌ಫೀಲ್ಡರ್‌ಗಳಾಗಿ ನೀವು ಈ ಬಗ್ಗೆ ಏನು ಹೇಳಲು ಇಷ್ಟಪಡುತ್ತೀರಿ?

ಹಾಗೇನಿಲ್ಲ. ವಿಶ್ವದಾದ್ಯಂತ ಈಗ ಫುಟ್‌ಬಾಲ್‌ನಲ್ಲಿ ಮಿಡ್‌ಫೀಲ್ಡರ್‌ಗಳು ಕೂಡ ಹೆಚ್ಚು ಗೋಲು ಗಳಿಸುತ್ತಿದ್ದಾರೆ. ನಾನೂ ಗೋಲು ಗಳಿಸಬಲ್ಲೆ ಎಂದು ಅಂಗಣಕ್ಕೆ ಕಾಲಿಡುವಾಗಲೇ ಅಂದುಕೊಳ್ಳಬೇಕು. ನಂತರ ಅದಕ್ಕೆ ತಕ್ಕಂತೆ ಅವಕಾಶಗಳನ್ನು ಕಂಡುಕೊಳ್ಳಬೇಕು.

ಭಾರತದ ಕೆಲವೇ ರಾಜ್ಯಗಳಲ್ಲಿ ಮಾತ್ರ ಫುಟ್‌ಬಾಲ್‌ ಜನಪ್ರಿಯವಾಗಿದೆ. ಎಲ್ಲ ಕಡೆಯಲ್ಲೂ ಈ ಕ್ರೀಡೆಯನ್ನು ಬೆಳೆಸಲು ಏನು ಮಾಡಬೇಕು?

ಫುಟ್‌ಬಾಲ್‌ ಕ್ರೀಡೆ ನಿಧಾನವಾಗಿ ಎಲ್ಲ ಕಡೆ ಜನಪ್ರಿಯವಾಗುತ್ತಿದೆ. ಪ್ರಮುಖ ನಗರಗಳಲ್ಲಿ ಮೂಲಸೌಲಭ್ಯಗಳೂ ಅಭಿವೃದ್ಧಿಯಾಗುತ್ತಿವೆ. ಫುಟ್‌ಬಾಲ್‌ ಕ್ರೀಡೆ ಭಾರತದಲ್ಲಿ ಬೆಳೆಯುತ್ತಿರುವುದರ ಲಕ್ಷಣ ಇದು.

ನಿಮ್ಮ ಫಿಟ್‌ನೆಸ್ ಮಂತ್ರವೇನು?

ಸರಿಯಾದ ಸಮಯದಲ್ಲಿ ಸಮರ್ಪಕ ಕಾರ್ಯಗಳನ್ನು ಮಾಡುವುದರಿಂದ ಪ್ರತಿಯೊಬ್ಬರೂ ಫಿಟ್‌ ಆಗಿರಬಹುದು. ಸಾಕಷ್ಟು ವ್ಯಾಯಾಮ ಮತ್ತು ಸುಖವಾದ ನಿದ್ದೆ ನನ್ನ ಫಿಟ್‌ನೆಸ್ ಮಂತ್ರ. ಫುಟ್‌ಬಾಲ್ ಆಟಗಾರನಾಗಿ ಹೆಚ್ಚು ಕಾಲ ಜಿಮ್‌ನಲ್ಲಿ ವರ್ಕೌಟ್ ಮಾಡಬೇಕಾಗುತ್ತದೆ. ಹಾಗೆ ಮಾಡುವುದರಿಂದ ಹೆಚ್ಚು ಫಿಟ್ ಆಗಿರಲು ಸಾಧ್ಯವಾಗುತ್ತದೆ.

ಸಣ್ಣ ವಯಸ್ಸಿನಲ್ಲೇ ಫುಟ್‌ಬಾಲ್‌ ಪ್ರೀತಿಯ
‘ಬಲೆಗೆ’ ಬಿದ್ದ ಉದಾಂತ ಸಿಂಗ್‌
14ನೇ ವಯಸ್ಸಿನಲ್ಲಿ ಪ್ರತಿಷ್ಠಿತ
ಟಾ ಫುಟ್‌ಬಾಲ್ ಅಕಾಡೆಮಿ ಸೇರಿದ್ದು
ಕ್ರೀಡಾ ಜೀವನದ ದೊಡ್ಡ ತಿರುವು.
ಇದಾಗಿ ನಾಲ್ಕೇ ವರ್ಷಗಳಲ್ಲಿ
19 ವರ್ಷದೊಳಗಿನವರ ಎಎಫ್‌ಸಿ ಕಪ್‌
ಅರ್ಹತಾ ಟೂರ್ನಿಯಲ್ಲಿ ಆಡಿ
ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ
ಪದಾರ್ಪಣೆ ಮಾಡಿದರು.

ಐಎಸ್‌ಎಲ್‌ನ ಕಳೆದ ಆವೃತ್ತಿಯಲ್ಲಿ
ಏಳು ಗೋಲುಗಳಿಗೆ ‘ಅಸಿಸ್ಟ್‌’ ಮಾಡಿದ
ಅವರು ಭಾರತದ ಆಟಗಾರನೊಬ್ಬ
ಒಂದೇ ಆವೃತ್ತಿಯಲ್ಲಿ ಮಾಡಿದ
ಅತಿ ಹೆಚ್ಚು ‘ಅಸಿಸ್ಟ್‌’ಗಳು
ಎಂಬ ದಾಖಲೆ ಬರೆದಿದ್ದರು.‌

ಆ 2 ಗೋಲುಗಳು...

1–ನವೆಂಬರ್‌ 30. ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್)‌ ಏಳು ಪಂದ್ಯಗಳಲ್ಲಿ ಅಜೇಯವಾಗಿದ್ದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಎಫ್‌ಸಿ ಪುಣೆ ಸಿಟಿ ತಂಡದ ಪ್ರಬಲ ಪೈಪೋಟಿಗೆ ಸಜ್ಜಾಗಿತ್ತು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 11ನೇ ನಿಮಿಷ. ಬಲಿಷ್ಠ ರಕ್ಷಣಾ ವಿಭಾಗವನ್ನು ಹೊಂದಿದ್ದ ಪುಣೆ ತಂಡದ ವಿರುದ್ಧ ಗೋಲು ಗಳಿಸಿದ ಉದಾಂತ ಸಿಂಗ್‌ ಗ್ಯಾಲರಿಯಲ್ಲಿ ಸಂಭ್ರಮದ ಅಲೆ ಎಬ್ಬಿಸಿದ್ದರು.

ದೂರದಿಂದ ದಿಮಾಸ್ ಡೆಲ್ಗಾಡೊ ನೀಡಿದ ಪಾಸ್‌ ನಿಯಂತ್ರಿಸಿದ ಹರ್ಮನ್‌ಜೋತ್ ಕಾಬ್ರಾ ಚೆಂಡನ್ನು ಉದಾಂತ ಬಳಿಗೆ ತಳ್ಳಿದ್ದರು. ಡಿಫೆಂಡರ್‌ಗಳ ಮಧ್ಯದಲ್ಲೇ ಡ್ರಿಬಲ್ ಮಾಡುತ್ತ ಸಾಗಿದ್ದ ಉದಾಂತ ಗೋಲು ಗಳಿಸಿದ ವಿಧಾನ ರೋಮಾಂಚನಕಾರಿಯಾಗಿತ್ತು.

2– ಒಂದು ವಾರದ ನಂತರ ಇದೇ ಕ್ರೀಡಾಂಗಣದಲ್ಲಿ ಉದಾಂತ ಮತ್ತೊಮ್ಮೆ ಮ್ಯಾಜಿಕ್ ಮಾಡಿದರು. ಡಿಸೆಂಬರ್‌ ಒಂಬತ್ತರಂದು ನಡೆದ ಆ ಪಂದ್ಯದಲ್ಲಿ ಬಿಎಫ್‌ಸಿ ಎದುರಾಳಿಯಾಗಿದ್ದದ್ದು ಮುಂಬೈ ಸಿಟಿ ಎಫ್‌ಸಿ. 23ನೇ ನಿಮಿಷದಲ್ಲಿ ನಡೆದಿತ್ತು ಉದಾಂತ ಮ್ಯಾಜಿಕ್‌. ಚೆಂಚೊ ಗೆಲ್ಶೆನ್ ಮತ್ತು ರಾಹುಲ್ ಭೆಕೆ ಹೆಣೆದ ತಂತ್ರದ ಕೊನೆಯಲ್ಲಿ ಗೋಲು ಗಳಿಸಿದ್ದು ಉದಾಂತ ಸಿಂಗ್‌.

ಎಡಭಾಗದ ಮೂಲೆಯಿಂದ ಭೆಕೆ ಗಾಳಿಯಲ್ಲಿ ತೂರಿದ ಚೆಂಡಿಗಾಗಿ ಗೋಲುಬಲೆಯ ಮುಂದೆ ಕಾಯುತ್ತಿದ್ದ ಉದಾಂತ ಎದುರಾಳಿ ತಂಡದ ಡಿಫೆಂಡರ್‌ಗಳ ಮಧ್ಯದಿಂದ ಮೇಲೆ ಜಿಗಿದು ತಲೆಯ ಹಿಂಭಾಗದಿಂದ ಚೆಂಡಿಗೆ ಮೃದುವಾದ ‘ಸ್ಪರ್ಷ’ ನೀಡಿದರು. ಮನಮೋಹಕ ಗೋಲಿಗೆ ಸಾಕ್ಷಿಯಾದ ಪ್ರೇಕ್ಷಕರು ಮುದಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT