ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಲ್ಸ್‌ಗೆ ಇರಾನ್‌ ಆಘಾತ

2–0 ಗೋಲುಗಳ ಗೆಲುವು; ಚೆಶ್ಮಿ, ರಮಿನ್‌ ಮಿಂಚು
Last Updated 25 ನವೆಂಬರ್ 2022, 14:20 IST
ಅಕ್ಷರ ಗಾತ್ರ

ಅಲ್‌ ರಯ್ಯಾನ್‌, ಕತಾರ್‌: ಇಂಜುರಿ ಅವಧಿಯಲ್ಲಿ ಗಳಿಸಿದ ಎರಡು ಗೋಲುಗಳ ನೆರವಿನಿಂದ ಇರಾನ್ ತಂಡ ವೇಲ್ಸ್‌ ವಿರುದ್ಧ ಗೆದ್ದು, ವಿಶ್ವಕಪ್‌ ಟೂರ್ನಿಯ ನಾಕೌಟ್‌ ಹಂತ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿತು.

ಅಹಮದ್‌ ಬಿನ್‌ ಅಲಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಜಿದ್ದಾಜಿದ್ದಿನ ಸೆಣಸಾಟದಲ್ಲಿ ಸೋತ ವೇಲ್ಸ್‌ ತಂಡದ ನಾಕೌಟ್‌ ಪ್ರವೇಶದ ಸಾಧ್ಯತೆ ಕ್ಷೀಣಿಸಿದೆ. ಕೊನೆಯ ನಿಮಿಷಗಳಲ್ಲಿ ಕಾಲ್ಚಳಕ ಮೆರೆದ ರೂಜ್ಬೆ ಚೆಷ್ಮಿ (90+8 ನೇ ನಿ.) ಮತ್ತು ರಮಿನ್‌ ರೆಜಿಯಾನ್ (90+11 ನೇ ನಿ.) ಅವರು ಇರಾನ್‌ ತಂಡದ ಸ್ಮರಣೀಯ ಗೆಲುವಿಗೆ ಕಾರಣರಾದರು.

ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ಕೈಯಲ್ಲಿ 2–6 ಗೋಲುಗಳ ಹೀನಾಯ ಸೋಲು ಅನುಭವಿಸಿದ್ದ ಇರಾನ್‌, ಲೀಗ್‌ ಹಂತದಲ್ಲೇ ಹೊರಬೀಳುವ ಆತಂಕ ಎದುರಿಸಿತ್ತು. ಆದರೆ ವೇಲ್ಸ್‌ ವಿರುದ್ಧ ದೊರೆತ ಗೆಲುವು ತಂಡಕ್ಕೆ ಮರುಜೀವ ನೀಡಿದೆ.

ಈ ಗೆಲುವಿನ ಮೂಲಕ ಇರಾನ್‌ ತಂಡ ‘ಬಿ’ ಗುಂಪಿನಲ್ಲಿ ಮೂರು ಪಾಯಿಂಟ್ಸ್‌ ಗಳಿಸಿ, ವೇಲ್ಸ್‌ಗಿಂತ ಮೇಲಕ್ಕೇರಿತು. ಆರಂಭಿಕ ಪಂದ್ಯದಲ್ಲಿ ಅಮೆರಿಕ ಜತೆ 1–1 ಗೋಲುಗಳ ಸಮಬಲ ಸಾಧಿಸಿದ್ದ ವೇಲ್ಸ್‌ ಬಳಿ ಒಂದು ಪಾಯಿಂಟ್‌ ಇದೆ.

ಮೊದಲ ಅವಧಿಯಲ್ಲಿ ತುರುಸಿನ ಪೈಪೋಟಿ ನಡೆದರೂ ಗೋಲುಗಳು ಬರಲಿಲ್ಲ. ಎರಡನೇ ಅವಧಿಯಲ್ಲಿ ಉಭಯ ತಂಡಗಳು ಆಕ್ರಮಣಕಾರಿ ಆಟವಾಡಿದವು. ಇರಾನ್‌ನ ಮೂವರು ಆಟಗಾರರಿಗೆ ಗೋಲು ಗಳಿಸಲು ಉತ್ತಮ ಅವಕಾಶ ದೊರೆತರೂ ಅದೃಷ್ಟ ಕೈಕೊಟ್ಟಿತು.

ಸರ್ದಾರ್‌ ಅಜ್ಮೋನ್‌ ಅವರು ಒದ್ದ ಚೆಂಡು ಗೋಲುಕಂಬಕ್ಕೆ ಬಡಿದು ವಾಪಸಾಯಿತು. ರಿಬೌಂಡ್‌ ಆಗಿ ಬಂದ ಚೆಂಡನ್ನು ಅಲಿ ಗೊಲಿಜಾದೆ ಬಲವಾಗಿ ಒದ್ದರೂ ಅದು ಗೋಲುಪೆಟ್ಟಿಗೆಯ ಇನ್ನೊಂದು ಬದಿಯ ಕಂಬಕ್ಕೆ ಬಡಿಯಿತು. ತಮ್ಮತ್ತ ಬಂದ ಚೆಂಡನ್ನು ಅಜ್ಮೋನ್‌ ಹೆಡ್‌ ಮಾಡಿದರೂ ಗೋಲ್‌ಕೀಪರ್‌ ವೇಯ್ನ್‌ ಹೆನೆಸ್ಸಿ ತಡೆದರು.

70ನೇ ನಿಮಿಷದಲ್ಲಿ ಹೆನೆಸ್ಸಿ ಮತ್ತೊಮ್ಮೆ ವೇಲ್ಸ್‌ ರಕ್ಷಣೆಗೆ ನಿಂತರು. ಸಯೇದ್ ಎಜತೊಲಾಹಿ ಅವರ ಪ್ರಯತ್ನವನ್ನು ಯಶಸ್ವಿಯಾಗಿ ತಡೆದರು. ಆದರೆ 87ನೇ ನಿಮಿಷದಲ್ಲಿ ಹೆನೆಸ್ಸಿ ರೆಡ್‌ಕಾರ್ಡ್‌ ಪಡೆದು ಹೊರನಡೆದ ಬಳಿಕ ವೇಲ್ಸ್‌ 10 ಮಂದಿಯೊಂದಿಗೆ ಆಡಬೇಕಾಯಿತು. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಇರಾನ್‌ ಅಲ್ಪ ಅಂತರದಲ್ಲಿ ಎರಡು ಗೋಲುಗಳನ್ನು ಗಳಿಸಿ ಗೆಲುವಿನ ನಗು ಬೀರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT