ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಮುಂಬೈ–ಗೋವಾ ಹಣಾಹಣಿಯಲ್ಲಿ ಗೋಲು ಮಳೆಯ ನಿರೀಕ್ಷೆ

Last Updated 24 ನವೆಂಬರ್ 2020, 15:16 IST
ಅಕ್ಷರ ಗಾತ್ರ

ಫತೋಡ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಮುಂಬೈ ಸಿಟಿ ಎಫ್‌ಸಿ ಮತ್ತು ಆತಿಥೇಯ ಎಫ್‌ಸಿ ಗೋವಾ ನಡುವೆ ಬುಧವಾರ ಹಣಾಹಣಿ ನಡೆಯಲಿದ್ದು ಅಭಿಮಾನಿಗಳು ಗೋಲು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಚೆಂಡನ್ನು ಪಾಸ್ ಮಾಡಿ ಗುರಿ ಮುಟ್ಟಿಸುವ ಕಲೆಯನ್ನು ಆಟಗಾರರು ಮೈಗೂಡಿಸಿಕೊಳ್ಳುವಂತೆ ಮಾಡುವಲ್ಲಿ ಪಳಗಿರುವ ಸರ್ಜಿಯೊ ಲೊಬೆರೊ ಈ ಹಿಂದೆ ಗೋವಾ ತಂಡದ ಜೊತೆ ಇದ್ದರು. ಈಗ ಮುಂಬೈ ತಂಡದ ಕೋಚ್‌.

ನಾರ್ತ್ ಈಸ್ಟ್ ವಿರುದ್ಧದ ಮೊದಲ ಪಂದ್ಯದಲ್ಲಿ ಮುಂಬೈ ಸಿಟಿ 0–1ರ ಸೋಲು ಕಂಡಿತ್ತು. ಆದರೆ ಲೊಬೆರಾ ಅವರ ಶೈಲಿಯನ್ನು ತಂಡದ ಆಟಗಾರರು ರೂಢಿಸಿಕೊಂಡಿದ್ದು ಆ ಪಂದ್ಯದಲ್ಲಿ ಕಂಡುಬಂದಿತ್ತು. ಚೆಂಡಿನ ಮೇಲಿನ ಆಧಿಪತ್ಯದಲ್ಲಿ ಶೇಕಡಾ 60ರ ಪಾಲನ್ನು ಮುಂಬೈ ತಂಡ ಆ ಪಂದ್ಯದಲ್ಲಿ ತನ್ನದಾಗಿಸಿಕೊಂಡಿತ್ತು. ನಾರ್ತ್ ಈಸ್ಟ್ 217 ಪಾಸ್‌ಗಳನ್ನು ಮಾಡಿದ್ದರೆ ಮುಂಬೈ ಮಾಡಿದ ಪಾಸ್‌ಗಳ ಸಂಖ್ಯೆ 451.

ಇತ್ತ, ಗೋವಾ ತಂಡವೂ ಮೊದಲ ಪಂದ್ಯದಲ್ಲಿ ಪಾಸ್‌ಗಳ ಮೂಲಕ ಗಮನ ಸೆಳೆದಿದೆ. ಬೆಂಗಳೂರು ಫುಟ್‌ಬಾಲ್ ಕ್ಲಬ್ ಎದುರಿನ ಪಂದ್ಯದಲ್ಲಿ ಆ ತಂಡ 449 ‍ಪಾಸ್‌ಗಳನ್ನು ಮಾಡಿತ್ತು. ಪಂದ್ಯದಲ್ಲಿ ಮೊದಲು ಎರಡು ಗೋಲುಗಳನ್ನು ಬಿಟ್ಟುಕೊಟ್ಟರೂ ಚೇತರಿಸಿಕೊಂಡು ಸಮಬಲ ಸಾಧಿಸುವಲ್ಲಿ ಗೋವಾ ಯಶಸ್ವಿಯಾಗಿತ್ತು. ಹೀಗಾಗಿ ಮುಂಬೈ ಎದುರಿನ ಪಂದ್ಯದಲ್ಲಿ ಭರವಸೆಯಲ್ಲೇ ಕಣಕ್ಕೆ ಇಳಿಯಲಿದೆ. ನಾರ್ತ್ ಈಸ್ಟ್ ವಿರುದ್ಧ ಆಘಾತ ಅನುಭವಿಸಿರುವ ಮುಂಬೈ ಏಳನೇ ಆವೃತ್ತಿಯಲ್ಲಿ ಮೊದಲ ಜಯದ ಹಂಬಲದಲ್ಲಿದೆ. ಮೊದಲ ಪಂದ್ಯ ಡ್ರಾ ಮಾಡಿಕೊಂಡಿದ್ದರೂ ಜಯ ಗಳಿಸುವ ಆಸೆಯಲ್ಲಿ ಗೋವಾ ಕೂಡ ಕಣಕ್ಕೆ ಇಳಿಯಲಿದೆ.

ಅಹಮ್ಮದ್ ಜೊಹೊ ಲಭ್ಯ ಇಲ್ಲ

ನಾರ್ತ್ ಈಸ್ಟ್ ಎದುರಿನ ಪಂದ್ಯದ ಮೊದಲಾರ್ಧದಲ್ಲಿ ರೆಡ್ ಕಾರ್ಡ್ ಪಡೆದು ಹೊರ ನಡೆದಿದ್ದ ಪ್ರಮುಖ ಆಟಗಾರ ಅಹಮ್ಮದ್ ಜೊಹೊ ಈ ಪಂದ್ಯಕ್ಕೂ ಲಭ್ಯ ಇಲ್ಲ. ಆದ್ದರಿಂದ ಫಾರೂಕ್ ಚೌಧರಿ ಮತ್ತು ರಾವ್ಲಿನ್ ಬೋರ್ಜೆಸ್ ಅವರಿಗೆ ಮುಂಬೈ ಸಿಟಿಯ ಮಿಡ್‌ಫೀಲ್ಡ್ ವಿಭಾಗವನ್ನು ನಿರ್ವಹಿಸುವ ಜವಾಬ್ದಾರಿ ಇದೆ. ಫಾರ್ವರ್ಡ್ ವಿಭಾಗದಲ್ಲಿ ಬಾರ್ತೊಲೊಮೆ ಒಗ್ಬೆಚೆ ಅವರ ಬಲ ತಂಡಕ್ಕೆ ಇದೆ. ಗೋಲ್‌ಕೀಪರ್ ಅಮರಿಂದರ್ ಸಿಂಗ್ ಅವರ ಗೋಡೆಯನ್ನು ಕೆಡಹುವುದು ಕೂಡ ಗೋವಾ ತಂಡಕ್ಕೆ ಸವಾಲಾಗಲಿದೆ.

ಜುವಾನ್ ಫೆರಾಂಡೊ ಬಳಿ ತರಬೇತಿ ಪಡೆಯುತ್ತಿರುವ ಗೋವಾ ತಂಡವು ಹಿಂದಿನ ಪಂದ್ಯದಲ್ಲಿ ಎರಡು ಗೋಲು ಗಳಿಸಿದ್ದ ಫಾರ್ವರ್ಡ್ ಆಟಗಾರ ಇಗರ್ ಅಂಗುಲೊ ಅವರ ಮೇಲೆ ಭರವಸೆ ಇರಿಸಿಕೊಂಡಿದೆ. ಲೆನಿ ರಾಡ್ರಿಗಸ್, ಸೆಮಿನ್ಲೆನ್ ಡೊಂಗೆಲ್ ಮತ್ತು ಎಡು ಬೇಡಿಯಾ ಅವರು ಮಿಡ್‌ಫೀಲ್ಡ್ ವಿಭಾಗದಲ್ಲಿ ತಂಡದ ಭರವಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT