ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಬಿಎಫ್‌ಸಿಗೆ ಆಘಾತ

Last Updated 17 ಫೆಬ್ರುವರಿ 2019, 20:18 IST
ಅಕ್ಷರ ಗಾತ್ರ

ನವದೆಹಲಿ: ತವರಿನ ಅಭಿಮಾನಿಗಳ ಎದುರು ಮಿಂಚಿನ ಆಟ ಆಡಿದ ಡೆಲ್ಲಿ ಡೈನಾಮೊಸ್‌ ಎಫ್‌ಸಿ ತಂಡ ಭಾನುವಾರ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಯಿತು.

ಈ ತಂಡ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡಕ್ಕೆ ಆಘಾತ ನೀಡಿತು.

ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆದ ಹೋರಾಟದಲ್ಲಿ ಡೆಲ್ಲಿ ಡೈನಾಮೊಸ್‌ 3–2 ಗೋಲುಗಳಿಂದ ಗೆದ್ದಿತು. ಈ ಪಂದ್ಯದಲ್ಲಿ ಸೋತರೂ ಸುನಿಲ್‌ ಚೆಟ್ರಿ ಸಾರಥ್ಯದ ಬಿಎಫ್‌ಸಿ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾದ ಡೈನಾಮೊಸ್‌ ತಂಡ ಒಂಬತ್ತನೇ ನಿಮಿಷದಲ್ಲಿ ಖಾತೆ ತೆರೆಯಿತು. ಯುಲಿಸೆಸ್‌ ಡ್ಯಾಲಿವಾ ಗೋಲು ಗಳಿಸಿ ತವರಿನ ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು.

‌ಈ ಖುಷಿ ಎದುರಾಳಿ ಪಾಳಯದಲ್ಲಿ ಹೆಚ್ಚು ಕಾಲ ಉಳಿಯಲು ಬೆಂಗಳೂರು ತಂಡದ ಬೊಯಿತಾಂಗ್‌ ಹಾವೊಕಿಪ್‌ ಅವಕಾಶ ನೀಡಲಿಲ್ಲ. 19ನೇ ನಿಮಿಷದಲ್ಲಿ ಅವರು ಚೆಂಡನ್ನು ಗುರಿ ಮುಟ್ಟಿಸಿ 1–1 ಸಮಬಲಕ್ಕೆ ಕಾರಣರಾದರು.

ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟಕ್ಕೆ ಮುಂದಾದವು. 72ನೇ ನಿಮಿಷದಲ್ಲಿ ಬೆಂಗಳೂರಿನ ತಂಡ ಮುನ್ನಡೆ ಗಳಿಸಿತು. ನಾಯಕ ಚೆಟ್ರಿ ಗೋಲು ಹೊಡೆದು ಬಿಎಫ್‌ಸಿ ಪಾಳಯದಲ್ಲಿ ಜಯದ ಕನಸು ಚಿಗುರೊಡೆಯುವಂತೆ ಮಾಡಿದರು.

ನಂತರ ಡೈನಾಮೊಸ್‌ ಪ್ರಾಬಲ್ಯ ಮೆರೆಯಿತು. ಡೇನಿಯಲ್‌ ಲಾಲಿಂಪುಯಿಯಾ 77 ಮತ್ತು 80ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಪಂದ್ಯದ ಚಿತ್ರಣವನ್ನೇ ಬದಲಿಸಿಬಿಟ್ಟರು.

ನಂತರದ ಅವಧಿಯಲ್ಲಿ ಬಿಎಫ್‌ಸಿ ಆಟಗಾರರು ಸಮಬಲದ ಗೋಲು ಗಳಿಸಲು ಸಾಕಷ್ಟು ಪ್ರಯತ್ನಿಸಿದರು. ಆದರೆ ಚೆಂಡನ್ನು ಗುರಿ ಮುಟ್ಟಿಸಲು ಯಾರಿಂದಲೂ ಆಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT