ಶುಕ್ರವಾರ, ನವೆಂಬರ್ 22, 2019
20 °C
ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌: ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಜೆಮ್‌ಶೆಡ್‌ಪುರ ಎಫ್‌ಸಿ

ಮತ್ತೆ ಡ್ರಾಗೆ ತೃಪ್ತಿಪಟ್ಟ ಬಿಎಫ್‌ಸಿ

Published:
Updated:
Prajavani

ಜೆಮ್‌ಶೆಡ್‌ಪುರ: ಹಾಲಿ ಚಾಂಪಿಯನ್‌ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ಇಲ್ಲಿನ ಜೆ.ಆರ್‌.ಡಿ.ಟಾಟಾ ಕ್ರೀಡಾ ಸಂಕೀರ್ಣದಲ್ಲಿ ಭಾನುವಾರ ಗೆಲುವಿನ ತೋರಣ ಕಟ್ಟ ಬಹುದೆಂಬ ನಿರೀಕ್ಷೆ ಹುಸಿಯಾಯಿತು.

ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಆರನೇ ಆವೃತ್ತಿಯಲ್ಲಿ ಮೂರನೇ ಪಂದ್ಯ ಆಡಿದ ಸುನಿಲ್‌ ಚೆಟ್ರಿ ಬಳಗವು ಜೆಮ್‌ಶೆಡ್‌ಪುರ ಎಫ್‌ಸಿ ಎದುರು ಗೋಲು ರಹಿತ ಡ್ರಾಗೆ ತೃಪ್ತಿಪಟ್ಟಿತು.

ಹಿಂದಿನ ಎರಡು ಪಂದ್ಯಗಳಲ್ಲೂ ಡ್ರಾ ಮಾಡಿಕೊಂಡಿದ್ದ ಬೆಂಗಳೂರಿನ ತಂಡವು ಒಟ್ಟು ಮೂರು ಪಾಯಿಂಟ್ಸ್‌ ಗಳಿಸಿ ಪಟ್ಟಿಯಲ್ಲಿ ಒಂಬತ್ತರಿಂದ ಏಳನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಜೆಮ್‌ಶೆಡ್‌ಪುರ ತಂಡ ಅಗ್ರಪಟ್ಟ ಅಲಂಕರಿಸಿತು. ಈ ತಂಡದ ಖಾತೆಯಲ್ಲಿ ಏಳು ಪಾಯಿಂಟ್ಸ್‌ ಇವೆ.

ಬೆಂಗಳೂರಿನ ತಂಡವು ಆರಂಭ ದಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿ ಯಾಯಿತು. ಏಳನೇ ನಿಮಿಷದಲ್ಲಿ ತಂಡಕ್ಕೆ ಖಾತೆ ತೆರೆಯುವ ಅವಕಾಶ ಸಿಕ್ಕಿತ್ತು. ಸೊಗಸಾದ ರೀತಿಯಲ್ಲಿ ಚೆಂಡನ್ನು ಡ್ರಿಬಲ್‌ ಮಾಡುತ್ತಾ ಎದುರಾಳಿ ಆವರಣ ಪ್ರವೇಶಿಸಿದ ರಾಫೆಲ್‌ ಅಗಸ್ಟೊ ಅದನ್ನು ನಾಯಕ ಚೆಟ್ರಿ ಅವರತ್ತ ತಳ್ಳಿದರು. ಚೆಟ್ರಿ ಎಡಗಾಲಿನಿಂದ ಬಲವಾಗಿ ಒದ್ದ ಚೆಂಡನ್ನು ಜೆಮ್‌ಶೆಡ್‌ಪುರ ತಂಡದ ಗೋಲ್‌ಕೀಪರ್‌ ಸುಬ್ರತಾ ಪಾಲ್‌ ಆಕರ್ಷಕ ರೀತಿಯಲ್ಲಿ ತಡೆದರು.

12ನೇ ನಿಮಿಷದಲ್ಲಿ ಲಭಿಸಿದ ‘ಚಿನ್ನದಂತಹ’ ಅವಕಾಶವನ್ನು ಬಿಎಫ್‌ಸಿ ತಂಡದ ಜುನಾನ್‌ ಕೈಚೆಲ್ಲಿದರು. ಇದರ ಬೆನ್ನಲ್ಲೇ ರಾಫೆಲ್‌ ಅಗಸ್ಟೊ ಕೂಡ ಸಿಕ್ಕ ಅವಕಾಶವನ್ನು ಹಾಳು ಮಾಡಿದರು. 24ನೇ ನಿಮಿಷದಲ್ಲಿ ಬಿಎಫ್‌ಸಿ ತಂಡದ ಅಲ್ಬರ್ಟ್‌ ಸೆರಾನ್‌ ಗಾಯಗೊಂಡರು. ಅವರ ಬದಲು ಆಶಿಕ್‌ ಕುರುಣಿಯನ್‌ ಅಂಗಳಕ್ಕಿಳಿದರು.

ನಂತರ ಬೆಂಗಳೂರಿನ ತಂಡ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಿತು. ಜೆಮ್‌ಶೆಡ್‌ಪುರ ತಂಡದ ಗೋಲ್‌ಕೀಪರ್‌ ಸುಬ್ರತಾ ಪಾಲ್‌ ಗೋಡೆಯಂತೆ ನಿಂತು ಬಿಎಫ್‌ಸಿ ಆಟಗಾರರ ಎಲ್ಲಾ ಪ್ರಯತ್ನಗಳನ್ನೂ ವಿಫಲಗೊಳಿಸಿದರು. ಹೀಗಾಗಿ ಮೊದಲಾರ್ಧ ಗೋಲುರಹಿತವಾಯಿತು.

ದ್ವಿತೀಯಾರ್ಧದ ಶುರುವಿನಲ್ಲೂ ಬಿಎಫ್‌ಸಿ ಮಿಂಚಿನ ಸಾಮರ್ಥ್ಯ ತೋರಿತು. 54ನೇ ನಿಮಿಷದಲ್ಲಿ ಟಿರಿ ನಾಯಕತ್ವದ ಜೆಮ್‌ಶೆಡ್‌ಪುರ ತಂಡಕ್ಕೆ ಫ್ರೀ ಕಿಕ್‌ ಲಭಿಸಿತ್ತು. ಪಿಟಿ ಒದ್ದು ಕಳುಹಿಸಿದ ಚೆಂಡನ್ನು ತಡೆದ ಮೆಮೊ ಮೌರಾ ಅದನ್ನು ಮೊಬಶಿರ್‌ ರೆಹಮಾನ್‌ಗೆ ವರ್ಗಾಯಿಸಿದರು. ಮೊಬಶಿರ್‌ ಮಿಂಚಿನ ಗತಿಯಲ್ಲಿ ಒದ್ದ ಚೆಂಡನ್ನು ಬಿಎಫ್‌ಸಿ ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ಎಡ ಗಾಲಿನಿಂದ ತಡೆದು ಎಲ್ಲರ ಚಪ್ಪಾಳೆ ಗಿಟ್ಟಿಸಿದರು.

ನಂತರ ಉಭಯ ತಂಡಗಳು ತುರುಸಿನ ಪೈಪೋಟಿ ನಡೆಸಿದವು. ಹೀಗಾಗಿ ನಿಗದಿತ 90 ನಿಮಿಷಗಳ ಅವಧಿಯಲ್ಲಿ ಯಾರಿಗೂ ಖಾತೆ ತೆರೆಯಲು ಆಗಲಿಲ್ಲ.

ಹೆಚ್ಚುವರಿ ನಾಲ್ಕು ನಿಮಿಷದಲ್ಲೂ ಎರಡು ತಂಡಗಳ ಗೋಲ್‌ಕೀಪರ್‌ಗಳು ಅಮೋಘ ಸಾಮರ್ಥ್ಯ ತೋರಿದರು. ಹೀಗಾಗಿ ಯಾರಿಗೂ ಗೆಲುವು ದಕ್ಕಲಿಲ್ಲ.

ಪ್ರತಿಕ್ರಿಯಿಸಿ (+)